- ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜುಲೈ 21ರಿಂದ ಆರಂಭ
- ಆ. 28 ರಿಂದ ಸೆ. 29 ರವರೆಗೆ ಮತಗಟ್ಟೆಗಳ ಪುನರ್ ವಿಂಗಡಣಾ ಕಾರ್ಯ
“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವೇಳೆ ಯಾವುದೇ ನ್ಯೂನತೆಗಳಾಗದಂತೆ ಸರಿಯಾದ ಮಾದರಿಯಲ್ಲಿ ಪರಿಷ್ಕರಣೆ ಕಾರ್ಯವಾಗಬೇಕು” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಜೊತೆ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆಯು ಜುಲೈ 21ರಿಂದ ಆಗಸ್ಟ್ 21 ರವರೆಗೆ ನಡೆಯಲಿದೆ” ಎಂದರು.
“ಜುಲೈ 21ರಿಂದ ಒಂದು ತಿಂಗಳ ಕಾಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಬಿಎಲ್‌ಒ ತಂತ್ರಾಂಶದ ಮೂಲಕ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸ ಮಾಡಲಿದ್ದಾರೆ. ಈ ವೇಳೆ, ಬೂತ್ ಮಟ್ಟದ ಏಜೆಂಟ್‌ಗಳು ಸ್ಥಳದಲ್ಲಿರಬೇಕಿದ್ದು, ರಾಜಕೀಯ ಪಕ್ಷದ ಅಧಿಕಾರಿಗಳು ಎಲ್ಲ ಕಡೆ ಬೂತ್ ಮಟ್ಟದ ಏಜೆಂಟ್‌ಗಳನ್ನು ನಿಯೋಜನೆ ಮಾಡಬೇಕು” ಎಂದರು.
“ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಎಲ್ಲೆಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಕಡಿಮೆಯಿದ್ದಾರೆ ಅಲ್ಲಿ ಕೂಡಲೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗಣ್ಯರಿಗೆ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವುದರಲ್ಲಿ ಯಾವುದೇ ತಪ್ಪಿಲ್ಲ: ಬ್ರಿಜೇಶ್ ಕಾಳಪ್ಪ
“ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸವನ್ನು ಎಲ್ಲ ಬಿಎಲ್‌ಒಗಳು ಯಾವುದೇ ಲೋಪದೋಷಗಳಿಲ್ಲದಂತೆ ಸರಿಯಾಗಿ ನಿರ್ವಹಿಸಬೇಕು. ಮತದಾರರ ಪಟ್ಟಿಯಲ್ಲಿ ಮರಣ ಹೊಂದಿರುವ ಹಾಗೂ ಬೇರೆಡೆ ಸ್ಥಳಾಂತರಗೊಂಡಿರುವ ಮತದಾರರ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ-2024ರಲ್ಲಿ ಹೊಸದಾಗಿ ಹೆಸರು ನೋಂದಾಯಿಸಲು(ನಮೂನೆ 6), ತಿದ್ದುಪಡಿಗಾಗಿ (ನಮೂನೆ 8) ಅರ್ಜಿ ಸಲ್ಲಿಸಬೇಕಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಆಗಸ್ಟ್ 28 ರಿಂದ ಸೆಪ್ಟೆಂಬರ್ 29 ರವರೆಗೆ ಮತಗಟ್ಟೆಗಳ ಪುನರ್ ವಿಂಗಡಣಾ ಕಾರ್ಯ ನಡೆಯಲಿದ್ದು, ಮತಗಟ್ಟೆಗಳ ಸ್ಥಳಾಂತರ/ದುರಸ್ಥಿಯಲ್ಲಿರುವ ಮತಗಟ್ಟೆಗಳ ಪ್ರಸ್ತಾವನೆ ಸಲ್ಲಿಸಬೇಕು” ಎಂದು ಹೇಳಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಅಜಯ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.