- ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡ ಶಿಕ್ಷಕ ಖಮರ್ ತಾಜ್
- ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಾಲಕಿ ಪೋಷಕರು
ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ಸಾರಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕಿಯ ಪೋಷಕರು ಖಾಸಗಿ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಜೂನ್ 20 ರಂದು 16 ವರ್ಷದ ಶಾಲಾ ಬಾಲಕಿ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ಶಿಕ್ಷಕ ಖಮರ್ ತಾಜ್ ತಲೆಮರೆಸಿಕೊಂಡಿದ್ದಾನೆ. ಹೊಸಕೋಟೆ ಪೊಲೀಸರು ಆರೋಪಿ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.
ಪೋಷಕರು ನೀಡಿದ ದೂರಿನಲ್ಲೇನಿದೆ?
ಬಾಲಕಿ ಆತ್ಮಹತ್ಯೆಗೆ ಸಂಬಂಧಿಸಿದ ಕಾರಣಗಳನ್ನು ತಿಳಿದ ಪೋಷಕರು ಜೂನ್ 27 ರಂದು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
“ಇಬ್ಬರು ಶಿಕ್ಷಕರು 16 ವರ್ಷದ ವಿದ್ಯಾರ್ಥಿನಿಗೆ ಇತರರ ಮುಂದೆ ಹಲವಾರು ಬಾರಿ ಶಿಕ್ಷೆ ನೀಡಿದ್ದಾರೆ ಮತ್ತು ನಿಂದಿಸಿದ್ದಾರೆ. ಶಿಕ್ಷಕರೊಬ್ಬರ ಮಗನೊಂದಿಗೆ ಬಾಲಕಿಗೆ ಸಂಬಂಧಿಸಿದಂತೆ ಕೆಲವು ವದಂತಿಗಳು ಹರಡಲು ಪ್ರಾರಂಭಿಸಿದ ನಂತರ ಬಾಲಕಿಗೆ ಕಿರುಕುಳ ನೀಡಲು ಪ್ರಾರಂಭವಾದವು. ಜೂನ್ 17 ರಂದು ಇಬ್ಬರು ಶಿಕ್ಷಕರು ಶಾಲೆಯಲ್ಲಿ ಆಕೆಗೆ ಎಲ್ಲರ ಮುಂದೆ ಶಿಕ್ಷೆ ನೀಡಿದ್ದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ಆತ್ಮಹತ್ಯೆ ಮಾಡಿಕೊಂಡ ದಿನ, ಶಿಕ್ಷಕರು ಶಾಲೆಯ ಖಾಲಿ ಕೊಠಡಿಯೊಂದಕ್ಕೆ ಬಾಲಕಿಯನ್ನು ಕರೆದಿದ್ದರು. ನಂತರ, ಬಾಲಕಿ ಕಣ್ಣೀರು ಹಾಕಿಕೊಂಡು ಹೊರಗೆ ಬಂದಿದ್ದಳು ಎಂದು ಬಾಲಕಿಯ ಆಪ್ತ ಸ್ನೇಹಿತರಿಂದ ಘಟನೆಯ ಬಗ್ಗೆ ತಿಳಿದ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಏನಿದು ಘಟನೆ?
ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದ ಪಾರ್ವತಿಪುರದಲ್ಲಿರುವ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಮೃತ ವಿದ್ಯಾರ್ಥಿನಿ ಸಾರಾ (16) 10ನೇ ತರಗತಿ ಓದುತ್ತಿದ್ದಳು.
ಜೂನ್ 20ರಂದು ಬಾಲಕಿ ಶಾಲೆಯಿಂದ ಬಂದ ನಂತರ ಖಿನ್ನತೆಗೆ ಒಳಗಾಗಿದ್ದಳು. ರಾತ್ರಿ ಊಟ ಮಾಡಿ ತನ್ನ ಕೋಣೆಗೆ ಹೋಗಿದ್ದಳು. ಬಳಿಕ ಬಾಲಕಿಯ ಪೋಷಕರು ಮಗಳನ್ನು ಕರೆದಾಗ ಎಷ್ಟು ಕೂಗಿದರು ಬರದೇ ಇದ್ದಾಗ, ಕೋಣೆಯ ಬಾಗಿಲು ಒಡೆದು ನೋಡಿದಾಗ ಬಾಲಕಿ ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದರು ಆದರೆ, ಬಾಲಕಿ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕರ ಕಿರುಕುಳಕ್ಕೆ ಬೇಸತ್ತ ಬಾಲಕಿ
ಸಾರಾ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಳು. ಇದೇ ಶಾಲೆಯ ನಳಿನಾ ಮತ್ತು ಖಮರ್ ತಾಜ್ ಎಂಬ ಇಬ್ಬರು ಶಿಕ್ಷಕರು ಬಾಲಕಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರೆಂದು ತಿಳಿದುಬಂದಿದೆ.
ಇಬ್ಬರು ಶಿಕ್ಷಕರು ಬಾಲಕಿಯನ್ನು ಎಲ್ಲ ವಿದ್ಯಾರ್ಥಿಗಳ ಮುಂದೆ ಕ್ಲುಲ್ಲಕ ಕಾರಣಕ್ಕೆ ನಿಂದಿಸುತ್ತಿದ್ದರು. ಅಲ್ಲದೇ, ಆತ್ಮಹತ್ಯೆಗೆ ಕೆಲವು ದಿನಗಳ ಹಿಂದೆ ಎಲ್ಲ ವಿದ್ಯಾರ್ಥಿಗಳ ಮುಂದೆ ಸಾರಾಗೆ 100 ಸಲ ಬಸಕಿ ಹೊಡೆಸಿದ್ದರು. ನಳಿನಾ ಎಂಬ ಶಿಕ್ಷಕಿ ಸಾರಾಗೆ ‘ನಿನ್ನ ಮುಖ ನಾನು ನೋಡುವುದಿಲ್ಲ. ಕೊನೆಯ ಬೆಂಚ್‌ಗೆ ಹೋಗಿ ಕುಳಿತುಕೋ’ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ದಿನ ಸಾರಾಳನ್ನು ಇಬ್ಬರು ಶಿಕ್ಷಕರು ಒಂದು ಕೋಣೆಗೆ ಕರೆದಿದ್ದರು. ಆಕೆ ವಾಪಾಸ್ ಬರುವಾಗ ಕಣ್ಣೀರು ಹಾಕುತ್ತಾ ಬಂದಿದ್ದಳು.
ಈ ಸುದ್ದಿ ಓದಿದ್ದೀರಾ? ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ; ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್
ಶಿಕ್ಷಕನ ಮಗನ ಪ್ರೀತಿ ಕಾಟ
ಅಲ್ಲದೆ, ಶಿಕ್ಷಕ ಖಮರ್ ತಾಜ್ ಮಗ ಹಮೀನ್ ಎಂಬುವವನು ಸಾರಾಗೆ ನಿತ್ಯ ತನ್ನನ್ನು ಪ್ರೀತಿ ಮಾಡು ಎಂದು ಹಿಂಸಿಸುತ್ತಿದ್ದನು. ಸಾರಾಳನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನು ಮದುವೆಯಾಗಲಿದ್ದೇವೆ ಎಂದು ತನ್ನ ಸ್ನೇಹಿತರಿಗೆಲ್ಲ ಹೇಳಿದ್ದನು. ತನ್ನನ್ನು ಪ್ರೀತಿ ಮಾಡದಿದ್ದರೆ ತಕ್ಕ ಪಾಠ ಕಲಿಸುವೆ ಎಂದು ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.
ಸಾರಾ ತನ್ನ ಸ್ನೇಹಿತರ ಬಳಿ ಬದುಕಲು ಕಷ್ಟವಾಗುತ್ತಿದೆ. ನಾನು ಸಾಯಬೇಕು ಎಂದು ಹೇಳಿಕೊಂಡಿದ್ದಳು ಎನ್ನಲಾಗಿದೆ.