ಅಂತರ್ಜಲ ವೃದ್ಧಿಸುವ ಸಲುವಾಗಿ ಬೆಂಗಳೂರು ನಗರದಲ್ಲಿ 14 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತಿದೆ. ಈ ಕೆರೆಗಳ ನೀರನ್ನು ಕುಡಿಯಲು, ಗೃಹ ಬಳಕೆಗೆ ಬಳಸಬಾರದು ಎಂದು ಜಲಮಂಡಳಿ ತಿಳಿಸಿದೆ.
ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಎರಡನೇ ಹಂತದಲ್ಲಿ ಸಂಸ್ಕರಿಸಿ, ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ನೀರು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕೆರೆಯ ನೀರನ್ನು ಬಳಸಬಾರದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾದ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಡಿಕೆ ಕದ್ದ ಕಳ್ಳ ಜೈಲಿಗೆ, ಆನೆ ಕದ್ದ ಕಳ್ಳ ಎಲ್ಲಿಗೆ?
‘ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಬೇಕಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಜಲಮಂಡಳಿ ಕೈಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ.
ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್‌ಟಿಪಿ ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಡಳಿ ವತಿಯಿಂದ ಸಂಸ್ಕರಿಸಿ ನೀರನ್ನು ದುಬಾಸಿಪಾಳ್ಯ, ಹೊಸಕೆರೆಹಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸಲಾಗುವುದು ಎಂದು ರಾಮ್‌ಪ್ರಸಾದ್ ಮಾಹಿತಿ ನೀಡಿದ್ದಾರೆ.
