ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಒಟ್ಟು 837 ಕೆರೆಗಳಲ್ಲಿ 730 ಕರೆಗಳ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಒಟ್ಟು 4,554 ಎಕರೆ ಕೆರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವರದಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕರೆ ಒತ್ತುವರಿ ಮತ್ತು ಒಂದು ಕರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯಲು ಹಳ್ಳಗಳು ಮುಕ್ತವಾಗಿರುವ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಆನೇಕಲ್ ಹಾಗೂ ಯಲಹಂಕ ತಾಲೂಕುಗಳ ತಹಶೀಲ್ದಾರ್ ಮತ್ತು ಭೂಮಾಪಕರು ತಮ್ಮ ತಾಲೂಕುಗಳ ವ್ಯಾಪ್ತಿಯಲ್ಲಿರುವ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ ಎಂದು ಬಿಡಿಎ ಹೇಳಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 187 ಕೆರೆಗಳ ಪೈಕಿ 102 ಕೆರೆಗಳ ಭೂಮಿಯನ್ನೂ ಒತ್ತವರಿ ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲೂಕುಗಳಲ್ಲಿ ಹೆಚ್ಚು ಒತ್ತುವರಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ 123 ಕೆರೆಗಳ ಒಟ್ಟು 1,183 ಎಕರೆ ಒತ್ತುವರಿಯಾಗಿದೆ. ಯಲಹಂಕ ತಾಲೂಕಿನಲ್ಲಿನ 105 ಕೆರೆಗಳ 1,147 ಎಕರೆ ಭೂಮಿ ಒತ್ತುವರಿಯಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ 179 ಕೆರೆಗಳಲ್ಲಿ 825 ಎಕರೆ, ಆನೇಕಲ್ ತಾಲೂಕಿನ 223 ಕೆರೆಗಳಲ್ಲಿ 719 ಎಕರೆ, ಪೂರ್ವ ತಾಲೂಕಿನ 100 ಕೆರೆಗಳಲ್ಲಿ 667 ಎಕರೆ ಭೂಮಿ ಒತ್ತುವರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 700 ಕೆರೆಗಳಲ್ಲಿ 102 ಕೆರೆಗಳು ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ.