ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಉದ್ಯೋಗ ಕಚೇರಿಯಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ (ಕೆಎಸ್‌ಡಿಬಿ) ಜೂನಿಯರ್ ಇಂಜಿನಿಯರಿಂಗ್‌ಗಳ ಆಯ್ಕೆ ಪಟ್ಟಿಯ ಕಡತವು ನಾಪತ್ತೆಯಾಗಿದ್ದು ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ.
ಜನವರಿ 22ರಂದು ಬೆಂಗಳೂರಿನ ಉದ್ಯೋಗ ಸೌಧದಲ್ಲಿರುವ ಆಯೋಗದ ಕಾರ್ಯದರ್ಶಿ ಕಚೇರಿ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಜೂನಿಯರ್ ಇಂಜಿನಿಯರ್ ನೇಮಕಾತಿಯ ಆಯ್ಕೆ ಪಟ್ಟಿಯನ್ನು ಪಡೆಯಲಾಗಿತ್ತು. ಆದರೆ ಆ ಪಟ್ಟಿ ಈಗ ನಾಪತ್ತೆಯಾಗಿದ್ದು ಈ ವಿಚಾರದಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು 2016ರ ಸೆಪ್ಟೆಂಬರ್ 24ರಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಜೂನಿಯರ್ ಇಂಜಿನಿಯರ್ ನೇಮಕಾತಿಗೆ ಸಂಬಂಧಿಸಿ ಪರೀಕ್ಷೆ ನಡೆದಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?
ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಎಚ್.ಡಿ. ವಿವೇಕಾನಂದ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅಂಗೀಕರಿಸಿದ ಹೈಕೋರ್ಟ್, ಕಿರಿಯ ಎಂಜಿನಿಯರ್ ಹುದ್ದೆಗೆ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಕೆಪಿಎಸ್‌ಸಿಗೆ ಸೂಚಿಸಿತ್ತು. ಅದಾದ ಬಳಿಕ ಹೈಕೋರ್ಟ್ ನಿರ್ದೇಶನ ಪ್ರಕಾರ ಕಡತವನ್ನು ಸಿದ್ಧಪಡಿಸಲಾಗಿತ್ತು.
ಕೆಪಿಎಸ್‌ಸಿ ಕಚೇರಿಯ ಗೌಪ್ಯ ವಿಭಾಗ – 3 ರಲ್ಲಿ ಕಡತವನ್ನು ಸಿದ್ಧಪಡಿಸಿ ಜನವರಿ 22 ರಂದು ಕಾರ್ಯದರ್ಶಿಯವರ ಕಚೇರಿಗೆ ಸಲ್ಲಿಸಲಾಗಿತ್ತು. ಕಡತ ಕೈಸೇರಿದೆಯೇ ಎಂದು ಪರಿಶೀಲಿಸುವಂತೆ ಕೆಪಿಎಸ್‌ಸಿ ಫೆಬ್ರವರಿ 20ರಂದು ತನ್ನ ಎಲ್ಲ ವಿಭಾಗಗಳಿಗೆ ಮೆಮೊ ನೀಡಿತ್ತು. ಹಾಗೆಯೇ ಕಡತ ದೊರೆತ ಬಳಿಕ ಅದನ್ನು ಕೆಪಿಎಸ್‌ಸಿಯ ನೇಮಕಾತಿ ವಿಭಾಗ-2ಕ್ಕೆ ಹಿಂತಿರುಗಿಸಲು ಮೆಮೊದಲ್ಲಿ ಸೂಚಿಸಲಾಗಿತ್ತು.
ಆದರೆ ಕಡತ ನಾಪತ್ತೆಯಾಗಿರುವುದು ತಿಳಿದು ಬಂದಾಗ ಕೆಪಿಎಸ್‌ಸಿ ಫೆ.26ರಂದು ಮೆಮೊ ಹೊರಡಿಸಿ, ಅಧಿಕಾರಿಗಳು/ಸಿಬ್ಬಂದಿಗಳ ತಂಡವನ್ನು ರಚಿಸಿತ್ತು. ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಕಡತ ಹುಡುಕಿ ವರದಿ ಸಲ್ಲಿಸಲು ಈ ತಂಡಕ್ಕೆ ಸೂಚಿಸಿತ್ತು. ಆದರೆ ಕಡತ ಪತ್ತೆಯಾಗದ ಕಾರಣ ಈ ತಂಡ ಕೆಪಿಎಸ್‌ಸಿಗೆ ಮಾಹಿತಿ ನೀಡಿದ್ದು ಬಳಿಕ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಹಾಗೆಯೇ ವಿಧಾನ ಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, “ಈ ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಲಾಗಿಲ್ಲ. ಆಯೋಗದಿಂದ ಮಾಹಿತಿಯನ್ನು ಪಡೆಯಲಾಗಿದೆ. ಆದರೆ ಕಡತ ಇನ್ನೂ ಕೂಡಾ ಲಭಿಸಿಲ್ಲ. ತನಿಖೆಯನ್ನು ನಾವು ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ. ಇನ್ನು “ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಗೆ ಭೇಟಿ ನೀಡಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ” ಎಂಬ ಮಾಹಿತಿಯಿದೆ.