ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಡಾ.ಶಾಂತ್ ಎ ತಿಮ್ಮಯ್ಯರನ್ನ ಅನರ್ಹಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಮಂಡಳಿಯ ಪ್ರಚಾರ ಜಾಹೀರಾತು ನೀಡುವ ಹೆಸರಿನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪ ಶಾಂತಾ ಎ ತಿಮ್ಮಯ್ಯ ಅವರ ಮೇಲಿತ್ತು. ಶುಕ್ರವಾರ ಈ ಸಂಬಂಧ ಅರಣ್ಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಅವರು ಅಧಿಸೂಚನೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ.ರವಿ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ನಾಮನಿರ್ದೇಶನ ಮಾಡಿ ಆದೇಶ ಮಾಡಿದ್ದಾರೆ.
ಶಾಂತ್ ತಿಮ್ಮಯ್ಯ ಅವರ ಹುದ್ದೆಯ ಅವಧಿ 2022ರಲ್ಲೇ ಮುಗಿದಿದ್ದು, ಅವರನ್ನು ವಜಾ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಬಳಿಕ ಕೆಎಸ್‍ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತಮ್ಮ ಅಧಿಕಾರಾವಧಿ ಮೊಟಕುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಶಾಂತ್ ತಿಮ್ಮಯ್ಯ ಅವರು ಇತ್ತೀಚೆಗೆ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರದ ಅಧಿಸೂಚನೆಯನ್ನು ಅಮಾನತ್ತಿನಲ್ಲಿಟ್ಟು ಮಧ್ಯಂತರ ಆದೇಶ ಮಾಡಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿತ್ತು.
ಜಾಗೃತಿ ಕಾರ್ಯಕ್ರಮಗಳ ಹೆಸರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತಾ ಎ ತಿಮ್ಮಯ್ಯ ಅವರು ಕಾಯ್ದೆಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿಯಲ್ಲಿ ಬಯಲಾಗಿತ್ತು.
ಇದನ್ನು ಓದಿದ್ದೀರಾ? ಜೂ.1 | 57 ಲೋಕಸಭಾ ಕ್ಷೇತ್ರಗಳಿಗೆ ಕೊನೆಯ ಹಂತದ ಮತದಾನ; ಪ್ರಧಾನಿ ಮೋದಿ ಸೇರಿ 904 ಅಭ್ಯರ್ಥಿಗಳು ಕಣದಲ್ಲಿ
ಮಂಡಳಿಯ ಪ್ರಚಾರ ಜಾಹೀರಾತು ನೀಡುವ ಹೆಸರಿನಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪ ಶಾಂತಾ ಎ ತಿಮ್ಮಯ್ಯ ಅವರ ಮೇಲಿತ್ತು. ಕೆಎಸ್ಪಿಸಿಬಿಯ ಹಿಂದಿನ ಸದಸ್ಯ ಕಾರ್ಯದರ್ಶಿ ಸೂರಿ ಪಾಯಲ್ ಈ ಸಂಬಂಧ ಸರ್ಕಾರಕ್ಕೆ ದೂರು ನೀಡಿದ್ದರು. ದೂರಿನನ್ವಯ ಸರ್ಕಾರ ಸಮಿತಿ ರಚನೆ ಮಾಡಿ ತನಿಖೆಗೆ ಸೂಚಿಸಿತ್ತು. ತನಿಖೆಯ ವರದಿಯಲ್ಲಿ ಶಾಂತಾ ಎ ತಿಮ್ಮಯ್ಯ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
