- ಮೋದಿ ರೋಡ್ ಶೋ ಸಂಚಾರ ದಟ್ಟಣೆ; ಬೇಸತ್ತ ಬೆಂಗಳೂರಿಗರು
- ರೋಡ್ ಶೋ ಯಾವ್ಯಾವ ಕ್ಷೇತ್ರಗಳಲ್ಲಿರಲಿದೆ ನಿಖರ ಮಾಹಿತಿ ಇಲ್ಲ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ನಡೆಯಲಿದ್ದು, ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಇರುವ ಕಾರಣ ಪರೀಕ್ಷಾ ಕೇಂದ್ರ ತಲುಪುವುದು ಹೇಗೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆ, ಪ್ರಧಾನಿ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ವಾಹನ ಸವಾರರು ಮೋದಿ ರೋಡ್ ಶೋನಿಂದ ಉಂಟಾಗುವ ಸಂಚಾರ ದಟ್ಟಣೆಗೆ ಪರದಾಡುತ್ತಿದ್ದು, ಈ ಮಧ್ಯೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ.
ಪ್ರಚಾರದ ಭರಾಟೆ; ವಿದ್ಯಾರ್ಥಿಗಳ ಅಳಲು ಕೇಳೋರಿಲ್ಲ
ದ್ವಿತೀಯ ಪಿಯುಸಿ ಬಳಿಕ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯುವ 1.9 ಲಕ್ಷ ವಿದ್ಯಾರ್ಥಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರ – ಪಟ್ಟಣಗಳಲ್ಲಿ ಭಾನುವಾರ ಪರೀಕ್ಷೆ ಬರೆಯಲಿದ್ದಾರೆ. ಇದು ಅವರ ಜೀವನದ ಮಹತ್ವದ ಘಟ್ಟವಾಗಿದೆ.
ಈ ಮಧ್ಯೆ ವಿಶೇಷ ಭದ್ರತಾ ವ್ಯವಸ್ಥೆ ಇರುವ ರಾಜಕೀಯ ಪಕ್ಷಗಳ ರೋಡ್ ಶೋ, ಪ್ರಚಾರ ಸಭೆ ಹಾಗೂ ರ್‍ಯಾಲಿ ನಡೆಯಲಿವೆ. ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲು ನಾಯಕರು ಸಾಗುವ ಮಾರ್ಗಗಳನ್ನು ಸಾಮಾನ್ಯವಾಗಿ ಮೂರ್ನಾಲ್ಕು ಗಂಟೆ ಮೊದಲೇ ಬಂದ್ ಮಾಡಲಾಗುತ್ತದೆ. ಮೋದಿಯವರ ರೋಡ್ ಶೋ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರ ನಡುವೆ ಇರುತ್ತದೆ. ಪರೀಕ್ಷೆ ಎದುರಿಸುವ ಸವಾಲು, ಭೀತಿಯ ನಡುವೆ ಪರೀಕ್ಷಾ ಕೇಂದ್ರ ತಲುಪುವುದೇ ವಿದ್ಯಾರ್ಥಿಗಳಿಗೆ ಸಾಹಸವಾಗಿ ಪರಿಣಮಿಸಿದೆ.
ಈ ಬಗ್ಗೆ ಇಲ್ಲಿಯವರೆಗೂ ರಾಜಕೀಯ ಪಕ್ಷದ ನಾಯಕರು ಚಿಂತಿಸಿಲ್ಲ. ಚುನಾವಣಾ ಭರಾಟೆಯಲ್ಲಿ ತೊಡಗಿಕೊಂಡಿದ್ದಾರೆ. ಮೋದಿಯವರ ರೋಡ್ ಶೋ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂಬ ನಿಖರ ಮಾಹಿತಿ ಸಹ ಪ್ರಧಾನಿ ಕಾರ್ಯಾಲಯ ಇನ್ನೂ ಬಿಡುಗಡೆ ಮಾಡಿಲ್ಲ.
ಈ ಸುದ್ದಿ ಓದಿದ್ದೀರಾ?: ಮೋದಿ ಬರುತ್ತಾರೆ ಬೀದಿ ನಾಯಿ ಹಿಡಿಯಿರಿ: ಬಿಬಿಎಂಪಿಗೆ ಪೊಲೀಸರ ಪತ್ರ
ಭಾನುವಾರ ನಡೆಯಲಿರುವ ನೀಟ್ ಪರೀಕ್ಷೆ ಮಧ್ಯಾಹ್ನ 2 ರಿಂದ 5.20 ರವರೆಗೆ ನಡೆಯಲಿದೆ. 11:00 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಜರಾಗಿರಬೇಕು. ಇಂತಹ ಸಮಯದಲ್ಲಿ ರಸ್ತೆ ಬಂದ್ ಆದರೆ, ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವಂತಾಗುತ್ತದೆ.
ಪರ್ಯಾಯ ಮಾರ್ಗ ಸೂಚಿಸಿದರೂ ತಪ್ಪದ ತಲೆ ನೋವು
ರಾಜಕೀಯ ನಾಯಕರ ರೋಡ್ ಶೋ ಎಂದರೆ ಪ್ರತಿ ಬಾರಿ ಪರ್ಯಾಯ ಮಾರ್ಗಗಳ ಸೂಚನೆ ಹೊರಡಿಸುವ ಪೊಲೀಸರು, ಬದಲಿ ಮಾರ್ಗಗಳ ಮಾಹಿತಿ ನೀಡಿದರೂ ಪರೀಕ್ಷೆ ಎದುರಿಸುವ ಬಗ್ಗೆ ಹಲವು ಸವಾಲು ತಲೆಯಲ್ಲಿರಿಸಿಕೊಂಡ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪುವುದಾದರು ಹೇಗೆ ಎಂಬ ಆತಂಕದಲ್ಲೇ ಇರುತ್ತಾರೆ ಎಂದು ನೀಟ್ ಎದುರಿಸುವ ವಿದ್ಯಾರ್ಥಿಗಳ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
“ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲು ತಮ್ಮ ಮನೆಗಳಿಂದ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಂಡು, ತೊಂದರೆಯಾಗದಂತೆ ಬದಲಿ ಮಾರ್ಗದ ಯೋಜನೆ ರೂಪಿಸುತ್ತಿದ್ದೇವೆ” ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೆ ಅಣ್ಣಾಮಲೈ ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಚಾರ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ಬೆಂಗಳೂರಿನ ಮಹದೇವಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಶಿವಾಜಿನಗರದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ದೆಹಲಿ ನಾಯಕರ ರಾಜಧಾನಿ ಮತಬೇಟೆಗೆ ವಾಹನ ಸವಾರರು ಮತ್ತು ನೀಟ್ ಪರೀಕ್ಷಾರ್ಥಿಗಳಿಗೆ ತೊಂದರೆ ಉಂಟು ಮಾಡುವ ಸಾಧ್ಯತೆಗಳಿವೆ.