ಶಿಕ್ಷಣವೆಂದರೆ ಕೇವಲ ಶಾಲೆಗೆ ಹೋಗುವುದು, ಪರೀಕ್ಷೆ ಬರೆಯುವುದು, ಅಂಕ ಗಳಿಸುವುದು ಮತ್ತು ಪದವಿ ಪಡೆಯುವುದಲ್ಲ. ಶಿಕ್ಷಣವೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವ ಪ್ರಕ್ರಿಯೆ. ಸಮಾನತೆಯನ್ನು ಅರ್ಥಮಾಡಿಕೊಳ್ಳುವ, ಪ್ರಶ್ನಿಸುವ, ವಿಚಾರಿಸುವ, ಭಿನ್ನತೆಯನ್ನು ಗೌರವಿಸುವ ಮತ್ತು ತನ್ನ ಜೊತೆಗೆ ಮತ್ತೊಬ್ಬರ ಬದುಕನ್ನೂ ಗೌರವಿಸುವ ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು. ಈ ಅರ್ಥದಲ್ಲಿ ‘ಶಿಕ್ಷಣದಲ್ಲಿ ಒಳಗೊಳ್ಳುವಿಕೆ-ಒಳಗೊಳ್ಳುವಿಕೆಯಲ್ಲಿ ಶಿಕ್ಷಣ’ ಎಂಬುದು ಕೇವಲ ಶೈಕ್ಷಣಿಕ ಪರಿಕಲ್ಪನೆಯಲ್ಲ; ಅದು ಪ್ರಜಾಪ್ರಭುತ್ವದ ಸಾಮಾಜಿಕ ಅಗತ್ಯ.
ಭಾರತದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ವ್ಯಕ್ತಿಯ ಘನತೆಯನ್ನು ತನ್ನ ಮೂಲ ಮೌಲ್ಯಗಳಾಗಿ ಸ್ವೀಕರಿಸಿದೆ. ಈ ಆಶಯದಲ್ಲಿ ಶಿಕ್ಷಣಕ್ಕೆ ವಿಶಿಷ್ಟ ಸ್ಥಾನವಿದೆ. ಸಂವಿಧಾನದ 86ನೇ ತಿದ್ದುಪಡಿಯ ಮೂಲಕ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಖಾತ್ರಿಪಡಿಸುವ 21Aನೇ ವಿಧಿ ಸೇರ್ಪಡೆಯಾಯಿತು. ಅದರ ಅನುಷ್ಠಾನಕ್ಕಾಗಿ 2009ರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು, 6ರಿಂದ 14 ವರ್ಷದ ಪ್ರತಿಯೊಬ್ಬ ಮಗುವಿಗೂ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕನ್ನು ನೀಡಿತು.
ಅಂಬೇಡ್ಕರ್ ಅವರ ಚಿಂತನೆ ಮತ್ತು ಶಿಕ್ಷಣದ ಸಾಮಾಜಿಕ ಅರ್ಥ
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಚಿಂತನೆಯ ಕೇಂದ್ರದಲ್ಲಿ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಪ್ರಮುಖ ಸ್ಥಾನ ಪಡೆದಿವೆ. ಶತಮಾನಗಳ ಕಾಲ ಜಾತಿ, ಅಸಮಾನತೆ ಮತ್ತು ಸಾಮಾಜಿಕ ಹೊರತಳ್ಳುವಿಕೆಯಿಂದ ಶಿಕ್ಷಣದಿಂದ ದೂರವಿಡಲ್ಪಟ್ಟ ಸಮುದಾಯಗಳಿಗೆ ಶಿಕ್ಷಣದ ಬಾಗಿಲು ತೆರೆಯುವುದು ಕೇವಲ ವೈಯಕ್ತಿಕ ಪ್ರಗತಿಯ ಪ್ರಶ್ನೆಯಲ್ಲ; ಅದು ಸಾಮಾಜಿಕ ಪರಿವರ್ತನೆಯ ಪ್ರಶ್ನೆ.
ಅಂಬೇಡ್ಕರ್ ಅವರ ಸಂವಿಧಾನಾತ್ಮಕ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಾಗ ಶಿಕ್ಷಣವು ಕೆಲವರ ವಿಶೇಷಾಧಿಕಾರವಾಗದೆ ಎಲ್ಲರಿಗೂ ದೊರೆಯುವ ಸಾರ್ವಜನಿಕ ಅವಕಾಶವಾಗಬೇಕೆಂಬ ಆಶಯ ಸ್ಪಷ್ಟವಾಗುತ್ತದೆ. ಶಿಕ್ಷಣದಿಂದ ವಂಚಿತ ಸಮಾಜವನ್ನು ನಿರ್ಮಿಸುವುದು ಪ್ರಜಾಪ್ರಭುತ್ವದ ಆತ್ಮವನ್ನೇ ದುರ್ಬಲಗೊಳಿಸುತ್ತದೆ. ಆದ್ದರಿಂದ ಬಡತನ, ಜಾತಿ, ಲಿಂಗ, ಭೌಗೋಳಿಕ ಹಿಂದುಳಿತ, ಅಂಗವೈಕಲ್ಯ ಅಥವಾ ಸಾಮಾಜಿಕ ಹಿನ್ನೆಲೆ ಯಾವುದೂ ಮಗುವಿನ ಕಲಿಕೆಯ ಹಕ್ಕಿಗೆ ಅಡ್ಡಿಯಾಗಬಾರದು.
ಶಿಕ್ಷಣಕ್ಕಾಗಿ ಮಗು ಹೋರಾಡಬೇಕಾದ ಸ್ಥಿತಿ ಏಕೆ?
ಯಾವುದೇ ಮಗು ಶಿಕ್ಷಣ ಪಡೆಯಲು ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯೊಂದಿಗೆ ಹೋರಾಡಬೇಕಾದ, ಶಾಲೆ ತಲುಪಲು ದೂರ ನಡೆದು ಹೋಗಬೇಕಾದ, ಪುಸ್ತಕ-ಸಮವಸ್ತ್ರ-ಸಾರಿಗೆಗಾಗಿ ಕುಟುಂಬದ ಮೇಲೆ ಹೆಚ್ಚುವರಿ ಹೊರೆ ಬೀಳಬೇಕಾದ ಅಥವಾ ಸಾಮಾಜಿಕ ತಾರತಮ್ಯವನ್ನು ಎದುರಿಸಬೇಕಾದ ಪರಿಸ್ಥಿತಿ ಇರಬಾರದು.
ಶಿಕ್ಷಣದ ಹಕ್ಕು ಎಂದರೆ ಕೇವಲ ಶಾಲೆಯ ಬಾಗಿಲು ತೆರೆದಿರುವುದು ಅಲ್ಲ. ಮಗು ಶಾಲೆಗೆ ಸೇರುವುದು, ಶಾಲೆಯಲ್ಲಿ ಉಳಿಯುವುದು, ಸುರಕ್ಷಿತವಾಗಿ ಕಲಿಯುವುದು, ಪ್ರಶ್ನಿಸುವುದು, ತನ್ನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಮತ್ತು ಗೌರವದಿಂದ ಬದುಕಲು ಅಗತ್ಯವಾದ ಜ್ಞಾನ ಪಡೆಯುವುದು-ಇವೆಲ್ಲವೂ ಶಿಕ್ಷಣದ ಹಕ್ಕಿನ ಭಾಗ.
ಶಿಕ್ಷಣ ಹಕ್ಕು ಕಾಯ್ದೆಯಲ್ಲಿಯೂ ದುರ್ಬಲ ಹಾಗೂ ವಂಚಿತ ವರ್ಗದ ಮಕ್ಕಳ ವಿರುದ್ಧ ತಾರತಮ್ಯ ಮಾಡಬಾರದು ಎಂಬ ಜವಾಬ್ದಾರಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಖಾಸಗಿ ಅನುದಾನರಹಿತ ಶಾಲೆಗಳ ಪ್ರವೇಶದಲ್ಲಿ ದುರ್ಬಲ ವರ್ಗ ಮತ್ತು ವಂಚಿತ ಗುಂಪುಗಳಿಗೆ ಕನಿಷ್ಠ 25 ಪ್ರತಿಶತ ಪ್ರವೇಶದ ವ್ಯವಸ್ಥೆಯೂ ಕಾಯ್ದೆಯಲ್ಲಿ ಇದೆ.
ಶಿಕ್ಷಣ ಶಾಲೆಯಿಂದ ಆರಂಭವಾಗುವುದಿಲ್ಲ
ಮಗು ಮೊದಲಿಗೆ ಅಕ್ಷರವನ್ನು ಶಾಲೆಯಲ್ಲಿ ಕಲಿಯಬಹುದು; ಆದರೆ, ಮನುಷ್ಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಅದಕ್ಕೂ ಮುಂಚೆಯೇ ಮನೆಯಲ್ಲಿ ಮತ್ತು ಬೀದಿಯಲ್ಲಿ ಕಲಿಯಲು ಆರಂಭಿಸುತ್ತದೆ. ಮನೆಯಲ್ಲಿರುವ ಹಿರಿಯರು ಮಾತನಾಡುವ ರೀತಿ, ನೆರೆಹೊರೆಯವರ ಬಗ್ಗೆ ಹೊಂದಿರುವ ದೃಷ್ಟಿಕೋನ, ಜಾತಿ-ಧರ್ಮದ ಕುರಿತು ನಡೆಯುವ ಮಾತುಕತೆ, ಹೆಣ್ಣು-ಗಂಡಿನ ಬಗ್ಗೆ ಇರುವ ನಿಲುವು, ಬಡವರನ್ನು ನೋಡುವ ದೃಷ್ಟಿ-ಇವೆಲ್ಲವೂ ಮಗುವಿನ ಮೊದಲ ಪಾಠಗಳು.
ಆದ್ದರಿಂದ, ಶಿಕ್ಷಣದಲ್ಲಿ ಒಳಗೊಳ್ಳುವಿಕೆ ಶಾಲೆಯ ತರಗತಿಯಲ್ಲಷ್ಟೇ ಆರಂಭವಾಗುವುದಿಲ್ಲ. ಅದು ಮನೆ, ಬೀದಿ, ಸಮುದಾಯ, ಮಾಧ್ಯಮ ಮತ್ತು ಶಾಲೆ ಎಲ್ಲೆಡೆಯೂ ರೂಪುಗೊಳ್ಳುತ್ತದೆ. ಒಬ್ಬ ಮಗುವಿಗೆ ಮತ್ತೊಬ್ಬ ಮಗುವಿನ ಜಾತಿ, ಧರ್ಮ, ಭಾಷೆ, ಆರ್ಥಿಕ ಸ್ಥಿತಿ ಅಥವಾ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ವ್ಯತ್ಯಾಸ ಕಾಣದಂತೆ ಬೆಳೆಸುವುದು ಶಿಕ್ಷಣದ ದೊಡ್ಡ ಯಶಸ್ಸು.
ಒಳಗೊಳ್ಳುವಿಕೆ ಎಂದರೆ ಎಲ್ಲರನ್ನು ಒಂದೇ ತರಹ ಮಾಡುವುದು ಅಲ್ಲ
ಒಳಗೊಳ್ಳುವಿಕೆಯ ಅರ್ಥ ಎಲ್ಲ ಮಕ್ಕಳನ್ನೂ ಒಂದೇ ಮಾದರಿಯಲ್ಲಿ ರೂಪಿಸುವುದಲ್ಲ. ಪ್ರತಿಯೊಬ್ಬ ಮಗುವಿನ ಸಾಮರ್ಥ್ಯ, ಆಸಕ್ತಿ, ಕಲಿಕೆಯ ವೇಗ, ಭಾಷೆ, ಸಾಮಾಜಿಕ ಹಿನ್ನೆಲೆ ಮತ್ತು ಅಗತ್ಯಗಳನ್ನು ಗೌರವಿಸುವುದು. ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡ ಶಿಕ್ಷಣದಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ಮಹತ್ವ ನೀಡುತ್ತಾ, ಜನನ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣದಿಂದ ಯಾವುದೇ ಮಗು ಕಲಿಯುವ ಮತ್ತು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಕಳೆದುಕೊಳ್ಳಬಾರದು ಎಂದು ಹೇಳುತ್ತದೆ.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಗುಂಪುಗಳು ಮತ್ತು ಅಂಗವೈಕಲ್ಯ ಹೊಂದಿರುವ ಮಕ್ಕಳಿಗೂ ಸಮಾನ ಕಲಿಕೆಯ ಅವಕಾಶ ಕಲ್ಪಿಸುವುದಕ್ಕೆ ನೀತಿ ಒತ್ತು ನೀಡಿದೆ. ಹೀಗಾಗಿ, ಒಳಗೊಳ್ಳುವಿಕೆ ಎಂದರೆ ಕೇವಲ ಶಾಲೆಯಲ್ಲಿ ಪ್ರವೇಶ ನೀಡುವುದಲ್ಲ; ಮಗುವನ್ನು ತರಗತಿಯ ಭಾಗವಾಗಿಸುವುದು, ಅದರ ಧ್ವನಿಗೆ ಜಾಗ ನೀಡುವುದು ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ ನೀಡುವುದು.
ಶಿಕ್ಷಣ ಪದವಿಗಿಂತ ದೊಡ್ಡದು
ಇಂದು ಶಿಕ್ಷಣವನ್ನು ಉದ್ಯೋಗ, ವೇತನ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಪದವಿಯೊಂದಿಗೆ ಮಾತ್ರ ಅಳೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇವು ಶಿಕ್ಷಣದ ಅಗತ್ಯ ಭಾಗಗಳೇ ಆಗಿದ್ದರೂ, ಶಿಕ್ಷಣದ ಅಂತಿಮ ಗುರಿ ಇಷ್ಟಕ್ಕೆ ಸೀಮಿತವಾಗಬಾರದು. ಒಬ್ಬ ವ್ಯಕ್ತಿ ಉನ್ನತ ಪದವಿ ಪಡೆದಿದ್ದರೂ ಮತ್ತೊಬ್ಬರನ್ನು ಜಾತಿಯ ಆಧಾರದ ಮೇಲೆ ಅವಮಾನಿಸಿದರೆ, ಧರ್ಮದ ಹೆಸರಿನಲ್ಲಿ ದ್ವೇಷ ಬೆಳೆಸಿದರೆ, ಬಡವರ ನೋವನ್ನು ಅರ್ಥಮಾಡಿಕೊಳ್ಳದಿದ್ದರೆ ಅಥವಾ ಮಹಿಳೆಯನ್ನು ಸಮಾನ ವ್ಯಕ್ತಿಯಾಗಿ ಕಾಣದಿದ್ದರೆ ಆ ಶಿಕ್ಷಣದ ಸಾಮಾಜಿಕ ಉದ್ದೇಶ ಅಪೂರ್ಣವೇ ಸರಿ. ಜ್ಞಾನ ಮನುಷ್ಯನನ್ನು ಹೆಚ್ಚು ಮಾನವೀಯನನ್ನಾಗಿ ಮಾಡಬೇಕು. ಸಮಾನತೆ, ಸಹಾನುಭೂತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವ ಘನತೆಯ ಅರಿವು ಶಿಕ್ಷಣದ ಅವಿಭಾಜ್ಯ ಭಾಗವಾಗಬೇಕು.
ಶಿಕ್ಷಣ ಖರೀದಿಸುವ ವಸ್ತುವಾಗಬಹುದೇ?
ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಬಗ್ಗೆ ಚರ್ಚೆ ಮಾಡುವಾಗ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ-ಹಣ ಇರುವವರಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುವ ಸಮಾಜವನ್ನು ನಾವು ಬಯಸುತ್ತೇವೆಯೇ? ಶಿಕ್ಷಣ ಸಂಪೂರ್ಣವಾಗಿ ಮಾರುಕಟ್ಟೆಯ ವಸ್ತುವಾದಾಗ, ಪೋಷಕರ ಆರ್ಥಿಕ ಸಾಮರ್ಥ್ಯವೇ ಮಗುವಿನ ಭವಿಷ್ಯದ ಗುಣಮಟ್ಟವನ್ನು ನಿರ್ಧರಿಸುವ ಅಪಾಯ ಹೆಚ್ಚುತ್ತದೆ. ಶಾಲೆಗಳ ನಡುವೆ ಶುಲ್ಕದ ಆಧಾರದ ಮೇಲೆ ವಿಭಜನೆ, ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಮತ್ತು ಅವಕಾಶಗಳ ಅಸಮಾನತೆ ಗಟ್ಟಿಯಾಗಬಹುದು.
ಇದಕ್ಕೆ ವಿರುದ್ಧವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲವಾಗಿದ್ದರೆ, ವಿವಿಧ ಸಾಮಾಜಿಕ ಹಿನ್ನೆಲೆಯ ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುವ ಅವಕಾಶ ಪಡೆಯುತ್ತಾರೆ. ಅಂತಹ ತರಗತಿ ಸಮಾಜದ ಸಣ್ಣ ಪ್ರತಿರೂಪವಾಗುತ್ತದೆ. ಬಡವ-ಶ್ರೀಮಂತ, ವಿವಿಧ ಜಾತಿ-ಧರ್ಮ, ಗ್ರಾಮ-ನಗರ ಹಿನ್ನೆಲೆಯ ಮಕ್ಕಳು ಒಟ್ಟಿಗೆ ಕಲಿಯುವಾಗ ಸಾಮಾಜಿಕ ಒಳಗೊಳ್ಳುವಿಕೆಯ ಅನುಭವ ಪುಸ್ತಕಕ್ಕಿಂತಲೂ ಪರಿಣಾಮಕಾರಿಯಾಗಿ ದೊರೆಯುತ್ತದೆ. ಆದ್ದರಿಂದ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಸ್ತಿತ್ವದ ಪ್ರಶ್ನೆಯಷ್ಟೇ ಅಲ್ಲ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೇಗೆ ಬಲಪಡಿಸಬೇಕು ಎಂಬ ಪ್ರಶ್ನೆಯೂ ಮುಖ್ಯ.
ಮಕ್ಕಳ ಮೇಲೆ ಧರ್ಮದ ಭಾರವಲ್ಲ, ಭವಿಷ್ಯದ ಹೊಣೆಗಾರಿಕೆ ಇರಲಿ
ಮಕ್ಕಳಿಗೆ ತಮ್ಮ ಕುಟುಂಬದ ಧಾರ್ಮಿಕ ಅಥವಾ ಸಾಂಸ್ಕೃತಿಕ ಪರಂಪರೆಯ ಅರಿವು ಇರಬಹುದು. ಆದರೆ, ಆ ಅರಿವು ಅವರ ಮೇಲೆ ದ್ವೇಷ, ಪೂರ್ವಾಗ್ರಹ ಅಥವಾ ಮತ್ತೊಬ್ಬರನ್ನು ಕೀಳಾಗಿ ನೋಡುವ ಮನಸ್ಥಿತಿಯಾಗಿ ಹೇರಿಕೆಯಾಗಬಾರದು. ಶಿಕ್ಷಣದ ಕೆಲಸ ಧರ್ಮವನ್ನು ದ್ವೇಷಿಸುವುದೂ ಅಲ್ಲ; ಧರ್ಮದ ಹೆಸರಿನಲ್ಲಿ ದ್ವೇಷ ಕಲಿಸುವುದೂ ಅಲ್ಲ. ಬದಲಾಗಿ ವಿಭಿನ್ನ ನಂಬಿಕೆಗಳೊಂದಿಗೆ ಬದುಕುವ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಮಕ್ಕಳಿಗೆ ಅರ್ಥಮಾಡಿಸಬೇಕು. ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಯೋಚಿಸುವ ಅವಕಾಶ ಪಡೆಯಬೇಕು. ಅವರ ಮೇಲೆ ಧರ್ಮ, ಜಾತಿ ಅಥವಾ ಕುಟುಂಬದ ಸಾಮಾಜಿಕ ನಿರೀಕ್ಷೆಗಳ ಭಾರವನ್ನು ಹಾಕುವುದಕ್ಕಿಂತ ಪ್ರಶ್ನಿಸುವ, ಆಲೋಚಿಸುವ ಮತ್ತು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಬೆಳೆಸಬೇಕು.
ಚರಿತ್ರೆ ಅರಿಯಬೇಕು; ಚರಿತ್ರೆಯ ಭಾರ ಹೊರಬಾರದು
ಇತಿಹಾಸವನ್ನು ಮರೆತ ಸಮಾಜ ತನ್ನ ತಪ್ಪುಗಳಿಂದ ಕಲಿಯಲು ಸಾಧ್ಯವಿಲ್ಲ. ಆದ್ದರಿಂದ, ಮಕ್ಕಳಿಗೆ ಚರಿತ್ರೆಯ ಅರಿವು ಅತ್ಯಗತ್ಯ. ಆದರೆ, ಇತಿಹಾಸವನ್ನು ದ್ವೇಷದ ಆಯುಧವನ್ನಾಗಿ ಬಳಸುವುದು ಶಿಕ್ಷಣದ ಉದ್ದೇಶವಲ್ಲ. ಇತಿಹಾಸವು ನಮಗೆ ಏನಾಯಿತು? ಏಕೆ ಆಯಿತು? ಅದರಿಂದ ಏನು ಕಲಿಯಬೇಕು? ಮತ್ತೆ ಅಂತಹ ತಪ್ಪುಗಳು ನಡೆಯದಂತೆ ಏನು ಮಾಡಬೇಕು? ಎಂಬ ಪ್ರಶ್ನೆಗಳನ್ನು ಕೇಳಿಸಬೇಕು.
ಚರಿತ್ರೆ ಮಕ್ಕಳ ಮನಸ್ಸಿನಲ್ಲಿ ಪ್ರತೀಕಾರದ ಭಾವನೆ ತುಂಬಲು ಅಲ್ಲ; ವಿವೇಕ ಬೆಳೆಸಲು ಇರಬೇಕು
ಮಕ್ಕಳ ಆಯ್ಕೆ ಸ್ವಾತಂತ್ರ್ಯವೂ ಶಿಕ್ಷಣದ ಭಾಗ ಶಿಕ್ಷಣದಲ್ಲಿ ಒಳಗೊಳ್ಳುವಿಕೆಯ ಅತ್ಯಂತ ಪ್ರಮುಖ ಅಂಶವೆಂದರೆ ಮಗುವಿನ ಧ್ವನಿ. ಪೋಷಕರು ಮಕ್ಕಳಿಗಿಂತ ಹೆಚ್ಚು ಅನುಭವ ಹೊಂದಿರಬಹುದು. ಶಿಕ್ಷಕರಿಗೆ ವಿಷಯಜ್ಞಾನ ಇರಬಹುದು. ಆದರೆ, ಮಗುವಿನ ಬದುಕಿನ ಆಸಕ್ತಿ, ಭಯ, ಕನಸು, ಪ್ರಶ್ನೆ ಮತ್ತು ಸಾಮರ್ಥ್ಯವನ್ನು ಕೇಳದೆ ಅದರ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಶಿಕ್ಷಣದ ಸಂಪೂರ್ಣತೆಯನ್ನು ಕುಗ್ಗಿಸುತ್ತದೆ. ‘ಇದನ್ನೇ ಓದಬೇಕು’, ‘ಇದೇ ವೃತ್ತಿ ಆಯ್ಕೆ ಮಾಡಬೇಕು’, ‘ಇದೇ ರೀತಿಯಲ್ಲಿ ಬದುಕಬೇಕು’ ಎಂಬ ನಿರಂತರ ಹೇರಿಕೆ ಒಳಗೊಳ್ಳುವಿಕೆಯಲ್ಲ.
ಆಯ್ಕೆಯ ಸ್ವಾತಂತ್ರ್ಯ ಎಂದರೆ ಮಗುವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದಲ್ಲ. ಅದಕ್ಕೆ ಮಾಹಿತಿ ನೀಡುವುದು, ವಿವಿಧ ಅವಕಾಶಗಳನ್ನು ಪರಿಚಯಿಸುವುದು, ಅದರ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಯೋಚಿಸಿ ಆಯ್ಕೆ ಮಾಡುವ ಸಾಮರ್ಥ್ಯ ಬೆಳೆಸುವುದು. ಅಂತಿಮವಾಗಿ ತನ್ನ ಬದುಕಿನ ಬಗ್ಗೆ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸುವುದೇ ಶಿಕ್ಷಣದ ಗುರಿಯಾಗಬೇಕು.
ಪ್ರಶ್ನಿಸುವ ಮಗು ಭವಿಷ್ಯದ ಪ್ರಜ್ಞಾವಂತ ನಾಗರಿಕ
ಮಗು ಪ್ರಶ್ನಿಸಿದಾಗ ‘ಮೌನವಾಗಿರು’ಎನ್ನುವ ಶಿಕ್ಷಣ ವ್ಯವಸ್ಥೆ ಜ್ಞಾನವನ್ನು ಬೆಳೆಸುವುದಿಲ್ಲ; ವಿಧೇಯತೆಯನ್ನು ಮಾತ್ರ ಬೆಳೆಸುತ್ತದೆ. ‘ಏಕೆ?’, ‘ಹೇಗೆ?’, ‘ಇದು ಸರಿಯೇ?’, ‘ಬೇರೆ ರೀತಿಯಲ್ಲಿ ಸಾಧ್ಯವೇ?’ ಎಂಬ ಪ್ರಶ್ನೆಗಳು ಜ್ಞಾನದ ಬಾಗಿಲು ತೆರೆಯುತ್ತವೆ. ಪ್ರಶ್ನಿಸುವ ಮಕ್ಕಳನ್ನು ಶಿಕ್ಷಕರು ಮತ್ತು ಪೋಷಕರು ಹೆದರಬೇಕಾಗಿಲ್ಲ. ಬದಲಾಗಿ ಪ್ರಶ್ನಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕು. ಪ್ರಶ್ನೆ ತಪ್ಪಾಗಿರಬಹುದು; ಆದರೆ ಪ್ರಶ್ನಿಸುವ ಹಕ್ಕು ತಪ್ಪಾಗಬಾರದು. ಇಂತಹ ಶಿಕ್ಷಣವೇ ವೈಜ್ಞಾನಿಕ ಮನೋಭಾವ ಮತ್ತು ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಬೆಳೆಸುತ್ತದೆ.
ಶಿಕ್ಷಕ-ಪೋಷಕರು ‘ಹೇಳುವವರು’ ಮಾತ್ರವಲ್ಲ, ‘ಕೇಳುವವರೂ’ ಆಗಬೇಕು
ಮಗುವನ್ನು ಒಳಗೊಳ್ಳುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರವೂ ಬದಲಾಗಬೇಕು. ಶಿಕ್ಷಕ ಕೇವಲ ಪಾಠ ಹೇಳುವ ವ್ಯಕ್ತಿಯಾಗದೆ, ವಿದ್ಯಾರ್ಥಿಯ ಮಾತು ಕೇಳುವ ಮಾರ್ಗದರ್ಶಕನಾಗಬೇಕು. ಅದೇ ರೀತಿ ಪೋಷಕರು ಕೂಡ ಮಕ್ಕಳ ಮೇಲೆ ತಮ್ಮ ಅಪೂರ್ಣ ಕನಸುಗಳನ್ನು ಹೇರದೆ, ಅವರ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಮಗುವಿನ ಮಾತು ಕೇಳಿಸಿಕೊಳ್ಳುವುದು ಅದಕ್ಕೆ ನೀಡುವ ದೊಡ್ಡ ಗೌರವ. ಮಕ್ಕಳನ್ನು ನಿರಂತರವಾಗಿ ಹೋಲಿಸುವುದು, ಅಂಕಗಳ ಆಧಾರದ ಮೇಲೆ ಅವರ ಮೌಲ್ಯ ನಿರ್ಧರಿಸುವುದು ಅಥವಾ ಇತರ ಮಕ್ಕಳ ಯಶಸ್ಸನ್ನು ತೋರಿಸಿ ಒತ್ತಡ ಹೇರುವುದು ಅವರ ಕಲಿಕೆಯ ಆಸಕ್ತಿಯನ್ನು ಕುಗ್ಗಿಸಬಹುದು. ಅದರ ಬದಲು ಕಲಿಕೆಯ ಪ್ರಕ್ರಿಯೆ, ಕುತೂಹಲ ಮತ್ತು ಪ್ರಯತ್ನವನ್ನು ಗೌರವಿಸುವ ವಾತಾವರಣ ಅಗತ್ಯ.
ಜ್ಞಾನದ ತುಂಡರಿಕೆ ನಿಲ್ಲಬೇಕು
ಶಿಕ್ಷಣವನ್ನು ಪ್ರತ್ಯೇಕ ವಿಷಯಗಳ ಸಣ್ಣ ಸಣ್ಣ ಗೋಡೆಗಳೊಳಗೆ ಸೀಮಿತಗೊಳಿಸಿದಾಗ ಜೀವನದೊಂದಿಗೆ ಅದರ ಸಂಬಂಧ ಕಡಿಮೆಯಾಗಬಹುದು. ವಿಜ್ಞಾನವನ್ನು ಸಮಾಜದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇತಿಹಾಸವನ್ನು ವರ್ತಮಾನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಪರಿಸರವನ್ನು ಅರ್ಥಮಾಡಿಕೊಳ್ಳದೆ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯವನ್ನು ಮಾನವ ಭಾವನೆಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ.
ಆದ್ದರಿಂದ, ಜ್ಞಾನವನ್ನು ಪರಸ್ಪರ ಸಂಪರ್ಕಿಸುವ ಶಿಕ್ಷಣ ಅಗತ್ಯ. ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡ ಕಲೆ-ವಿಜ್ಞಾನ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ವೃತ್ತಿಪರ ಮತ್ತು ಶೈಕ್ಷಣಿಕ ಶಿಕ್ಷಣದ ನಡುವೆ ಕಠಿಣ ವಿಭಜನೆ ಇರಬಾರದು ಎಂಬ ದಿಕ್ಕನ್ನು ಸೂಚಿಸುತ್ತದೆ.
ಶಿಕ್ಷಣದಲ್ಲಿ ಜಾತಿ-ಧರ್ಮದ ಗೋಡೆಗಳು ಏಕೆ?
ಮಕ್ಕಳು ಜನಿಸುವಾಗ ಜಾತಿ ದ್ವೇಷದೊಂದಿಗೆ ಹುಟ್ಟುವುದಿಲ್ಲ. ಅವರು ಸಮಾಜದಿಂದ ಅದನ್ನು ಕಲಿಯುತ್ತಾರೆ. ಆದ್ದರಿಂದ, ಶಾಲೆಯು ಜಾತಿ, ಧರ್ಮ, ಲಿಂಗ, ಭಾಷೆ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವಿಭಜನೆಯ ಅನುಭವ ನೀಡಿದರೆ, ಅದು ಸಮಾಜದಲ್ಲಿರುವ ಅಸಮಾನತೆಯನ್ನು ಮತ್ತಷ್ಟು ಪುನರುತ್ಪಾದಿಸುತ್ತದೆ. ಅದರ ಬದಲು ಶಾಲೆಯು ಸಮಾನವಾಗಿ ಕುಳಿತುಕೊಳ್ಳುವ, ಒಟ್ಟಿಗೆ ಕಲಿಯುವ, ಒಟ್ಟಿಗೆ ಆಟವಾಡುವ, ಪರಸ್ಪರ ಗೌರವಿಸುವ ಮತ್ತು ಭಿನ್ನತೆಯನ್ನು ಅರ್ಥಮಾಡಿಕೊಳ್ಳುವ ಜಾಗವಾಗಬೇಕು. ವಿವಿಧತೆಯನ್ನು ಅಳಿಸುವುದಲ್ಲ ಒಳಗೊಳ್ಳುವಿಕೆ; ವೈವಿಧ್ಯತೆಯ ನಡುವೆಯೇ ಸಮಾನತೆಯನ್ನು ನಿರ್ಮಿಸುವುದು.
ಒಳಗೊಳ್ಳದ ಶಿಕ್ಷಣದ ಅಪಾಯ
ಶಿಕ್ಷಣದಿಂದ ಕೆಲವು ಮಕ್ಕಳು ಹೊರಗುಳಿದಾಗ ಕೇವಲ ಅವರ ಭವಿಷ್ಯವೇ ಹಾನಿಯಾಗುವುದಿಲ್ಲ; ಸಮಾಜವೂ ನಷ್ಟ ಅನುಭವಿಸುತ್ತದೆ. ಆರ್ಥಿಕ ಅಸಮಾನತೆ, ಜಾತಿ ಅಂತರ, ಲಿಂಗ ತಾರತಮ್ಯ, ಸಾಮಾಜಿಕ ಪೂರ್ವಾಗ್ರಹ, ಧಾರ್ಮಿಕ ದ್ವೇಷ ಮತ್ತು ಅವಕಾಶಗಳ ಅಸಮಾನತೆಗಳನ್ನು ಶಿಕ್ಷಣದ ಮೂಲಕ ಕಡಿಮೆ ಮಾಡಬಹುದು. ಆದರೆ, ಶಿಕ್ಷಣವೇ ಈ ವಿಭಜನೆಗಳನ್ನು ಪುನರುತ್ಪಾದಿಸಲು ಆರಂಭಿಸಿದರೆ ಅದರ ಸಾಮಾಜಿಕ ಪಾತ್ರವೇ ಪ್ರಶ್ನಾರ್ಹವಾಗುತ್ತದೆ. ಅದರಲ್ಲಿಯೇ ಒಳಗೊಳ್ಳುವಿಕೆ ಒಂದು ಹೆಚ್ಚುವರಿ ಸೌಲಭ್ಯವಲ್ಲ; ಶಿಕ್ಷಣದ ಮೂಲ ಗುಣವಾಗಬೇಕು.
ಸಾರ್ವಜನಿಕ ಶಿಕ್ಷಣವೇ ಸಾಮಾಜಿಕ ಸಮಾನತೆಯ ಪ್ರಯೋಗಶಾಲೆ
ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲವಾಗುವುದು ಎಂದರೆ ಕೇವಲ ಸರ್ಕಾರದ ಶಾಲೆಗಳ ಸಂಖ್ಯೆ ಹೆಚ್ಚುವುದು ಅಲ್ಲ. ಉತ್ತಮ ಶಿಕ್ಷಕರು, ಸೂಕ್ತ ಮೂಲಸೌಕರ್ಯ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡೆ, ಕಲೆ, ಡಿಜಿಟಲ್ ಸಂಪನ್ಮೂಲಗಳು, ಸುರಕ್ಷಿತ ವಾತಾವರಣ, ಪೌಷ್ಟಿಕ ಆಹಾರ, ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಅಗತ್ಯ ಸೌಲಭ್ಯಗಳು ಮತ್ತು ಮಕ್ಕಳ ಮಾನಸಿಕ-ಸಾಮಾಜಿಕ ಅಗತ್ಯಗಳನ್ನು ಗಮನಿಸುವ ವ್ಯವಸ್ಥೆ ಎಲ್ಲವೂ ಅದರ ಭಾಗ.
ಸರ್ಕಾರದ ಸಮಗ್ರ ಶಿಕ್ಷಣದಂತಹ ಕಾರ್ಯಕ್ರಮಗಳು ಶಾಲಾ ಶಿಕ್ಷಣವನ್ನು ಪೂರ್ವಪ್ರಾಥಮಿಕದಿಂದ ಹಿರಿಯ ಪ್ರೌಢ ಹಂತದವರೆಗೆ ನಿರಂತರವಾಗಿ ನೋಡುವ ಮತ್ತು ಒಳಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶ ಹೊಂದಿವೆ. ಆದರೆ, ಯೋಜನೆಗಳು ಇರುವುದಷ್ಟೇ ಸಾಕಾಗುವುದಿಲ್ಲ. ಅವು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಶಿಕ್ಷಣದ ಹಕ್ಕು ಕಾಗದದಲ್ಲಿರುವ ಹಕ್ಕಾಗಿ ಉಳಿಯದೆ ಪ್ರತಿಯೊಂದು ಮಗುವಿನ ಅನುಭವವಾಗಬೇಕು.
ಶಿಕ್ಷಣದ ಅಂತಿಮ ಪ್ರಶ್ನೆ: ನಾವು ಯಾವ ಸಮಾಜವನ್ನು ನಿರ್ಮಿಸುತ್ತಿದ್ದೇವೆ?
- ಶಿಕ್ಷಣದ ಬಗ್ಗೆ ಚರ್ಚಿಸುವಾಗ ನಾವು ಸಾಮಾನ್ಯವಾಗಿ ‘ಮಗು ಏನು ಕಲಿಯಬೇಕು?’ ಎಂದು ಕೇಳುತ್ತೇವೆ. ಅದಕ್ಕಿಂತ ಮುಖ್ಯವಾದ ಪ್ರಶ್ನೆ-‘ಶಿಕ್ಷಣ ಪಡೆದ ನಂತರ ಆ ಮಗು ಯಾವ ರೀತಿಯ ಮನುಷ್ಯನಾಗಬೇಕು?’
- ಅವನು ಅಥವಾ ಅವಳು ಕೇವಲ ಉದ್ಯೋಗ ಪಡೆಯುವ ವ್ಯಕ್ತಿಯಾಗಬೇಕೇ? ಅಥವಾ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಾಗರಿಕನಾಗಬೇಕೇ?
- ಕೇವಲ ಸ್ಪರ್ಧೆಯಲ್ಲಿ ಗೆಲ್ಲಬೇಕೇ? ಅಥವಾ ಮತ್ತೊಬ್ಬರ ನೋವನ್ನೂ ಅರ್ಥಮಾಡಿಕೊಳ್ಳಬೇಕೇ?
- ಕೇವಲ ತನ್ನ ಕುಟುಂಬದ ಬಗ್ಗೆ ಯೋಚಿಸಬೇಕೇ? ಅಥವಾ ಸಮುದಾಯದ ಜವಾಬ್ದಾರಿಯನ್ನೂ ಅರಿಯಬೇಕೇ?
ಈ ಪ್ರಶ್ನೆಗಳಿಗೆ ಶಿಕ್ಷಣದ ಉತ್ತರವೇ ಅದರ ಸಾಮಾಜಿಕ ಸ್ವರೂಪವನ್ನು ನಿರ್ಧರಿಸುತ್ತದೆ.
ಒಳಗೊಳ್ಳುವ ಶಿಕ್ಷಣವೇ ಪ್ರಜಾಪ್ರಭುತ್ವದ ಶಿಕ್ಷಣ
ಶಿಕ್ಷಣದ ಬಾಗಿಲು ಎಲ್ಲರಿಗೂ ತೆರೆದಿರಬೇಕು. ತರಗತಿಯಲ್ಲಿ ಎಲ್ಲರಿಗೂ ಜಾಗ ಇರಬೇಕು. ಪ್ರತಿಯೊಬ್ಬ ಮಗುವಿನ ಧ್ವನಿಗೂ ಮೌಲ್ಯ ಇರಬೇಕು. ಪ್ರಶ್ನೆಗಳಿಗೆ ಅವಕಾಶ ಇರಬೇಕು. ಆಯ್ಕೆಗೆ ಸ್ವಾತಂತ್ರ್ಯ ಇರಬೇಕು. ಭಿನ್ನತೆಯನ್ನು ಗೌರವಿಸಬೇಕು. ಜಾತಿ-ಧರ್ಮ-ಹಣ-ಅಂತಸ್ತು ಶಿಕ್ಷಣದ ಅವಕಾಶವನ್ನು ನಿರ್ಧರಿಸಬಾರದು. ಮಗುವಿನ ಮನಸ್ಸಿನಲ್ಲಿ ವಿಷ ತುಂಬುವುದಲ್ಲ, ವಿಚಾರ ತುಂಬಬೇಕು. ಭಯ ತುಂಬುವುದಲ್ಲ, ಪ್ರಶ್ನೆ ತುಂಬಬೇಕು. ದ್ವೇಷ ತುಂಬುವುದಲ್ಲ, ಮಾನವೀಯತೆ ತುಂಬಬೇಕು.
ಅಂಧ ಅನುಸರಣೆ ಬೆಳೆಸುವುದಲ್ಲ, ಆಲೋಚಿಸುವ ಶಕ್ತಿ ಬೆಳೆಸಬೇಕು.
ಅದೇ ನಿಜವಾದ ಒಳಗೊಳ್ಳುವಿಕೆ. ಶಿಕ್ಷಣವು ಕೆಲವರ ಸ್ವತ್ತಾಗದೆ ಎಲ್ಲರ ಹಕ್ಕಾಗಬೇಕು. ಪದವಿ ಪಡೆಯುವ ದಾರಿಯಾಗುವುದರ ಜೊತೆಗೆ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಮಾನವೀಯತೆ ಮತ್ತು ಸಹಬಾಳ್ವೆಯ ದಾರಿಯಾಗಬೇಕು. ಮಕ್ಕಳಿಗೆ ಧರ್ಮದ ಭಾರವಲ್ಲ, ಭವಿಷ್ಯದ ಅವಕಾಶ ಬೇಕು. ಜಾತಿಯ ಗುರುತುಗಳಿಗಿಂತ ಮನುಷ್ಯತ್ವದ ಅರಿವು ಬೇಕು. ಹೇರಿಕೆಯಿಗಿಂತ ಆಯ್ಕೆ ಬೇಕು. ಮೌನಕ್ಕಿಂತ ಪ್ರಶ್ನೆ ಬೇಕು. ವಿಭಜನೆಗಿಂತ ಒಳಗೊಳ್ಳುವಿಕೆ ಬೇಕು.
ಕೊನೆಗೂ, ಶಿಕ್ಷಣದ ಯಶಸ್ಸನ್ನು ಅಂಕಪಟ್ಟಿಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಒಬ್ಬ ಮಗು ಮತ್ತೊಬ್ಬ ಮನುಷ್ಯನನ್ನು ಸಮಾನವಾಗಿ ಕಾಣಲು ಕಲಿತರೆ, ಅನ್ಯಾಯವನ್ನು ಪ್ರಶ್ನಿಸಲು ಕಲಿತರೆ, ಭಿನ್ನತೆಯನ್ನು ಗೌರವಿಸಲು ಕಲಿತರೆ, ತನ್ನ ಬದುಕಿನ ಆಯ್ಕೆಯನ್ನು ಜವಾಬ್ದಾರಿಯಿಂದ ಮಾಡಿಕೊಳ್ಳಲು ಕಲಿತರೆ-ಅಲ್ಲಿಯೇ ಶಿಕ್ಷಣ ತನ್ನ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.
ಆದ್ದರಿಂದ, ಇಂದು ನಮ್ಮ ಮುಂದಿರುವ ಪ್ರಶ್ನೆ ‘ಎಷ್ಟು ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ?’ ಎಂಬುದಷ್ಟೇ ಅಲ್ಲ. ‘ಎಂತಹ ಶಿಕ್ಷಣವನ್ನು ನೀಡುತ್ತಿದ್ದೇವೆ? ಯಾರಿಗಾಗಿ ನೀಡುತ್ತಿದ್ದೇವೆ? ಮತ್ತು ಆ ಶಿಕ್ಷಣದಿಂದ ಎಂತಹ ಸಮಾಜವನ್ನು ನಿರ್ಮಿಸುತ್ತಿದ್ದೇವೆ?’ ಈ ಮೂರು ಪ್ರಶ್ನೆಗಳಿಗೆ ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಆಶಯದೊಂದಿಗೆ ಉತ್ತರ ಹುಡುಕುವ ಸಮಯ ಇದು.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಓದಿನಲ್ಲಿ ಜೀವ, ಓದಿನಲ್ಲೇ ಜೀವನ’
“ಒಳಗೊಳ್ಳುವಿಕೆಯೇ ಶಿಕ್ಷಣವಾಗಬೇಕು; ಶಿಕ್ಷಣವೇ ಒಳಗೊಳ್ಳುವ ಸಮಾಜದ ಬೀಜವಾಗಬೇಕು”.





