ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಅನುಮಾನದಿಂದ ಪತಿಯ ಕಾಲು ಮುರಿಯಲು ಪತ್ನಿಯಿಂದ ಸುಪಾರಿ ನೀಡಿರುವ ಘಟನೆ ಕಲಬುರಗಿಯ ಬೃಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿಯ ಅತ್ತರ್ ಕಾಂಪೌಂಡ್ ನಿವಾಸಿ ವೆಂಕಟೇಶ್ ಪಾಟೀಲ್ ಅವರು ಜನವರಿ 18 ರಂದು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಆರೀಫ್, ಮನೋಹರ ಹಾಗೂ ಸುನೀಲ್ ಎಂಬುವವರು ವೆಂಕಟೇಶ್ ಅವರನ್ನು ಅಡ್ಡಗಟ್ಟಿ ಕಲ್ಲು ಮತ್ತು ಬಡಿಗೆಗಳಿಂದ ಕಾಲುಗಳಿಗೆ ಹೊಡೆದು ಹಣ ದೋಚಿಕೊಂಡು ಹೋಗಿದ್ದರು. ಬಲವಾಗಿ ಹೊಡೆದಿರುವ ಕಾರಣ ವೆಂಕಟೇಶ ಅವರ ಎರಡೂ ಕಾಲು ಮುರಿದು ಹೋಗಿವೆ. ಸದ್ಯ ವೆಂಕಟೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ವೆಂಕಟೇಶ ಅವರ ಮಗ ಪಿಯೂಷ್ ಜ.19ರಂದು ಬೃಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯ ಪಿಎಸ್‌ಐ ಸೋಮಲಿಂಗಪ್ಪ ಕಿರದಳ್ಳಿ ನೇತ್ರತ್ವದ ತಂಡ ತನಿಖೆ ನಡೆಸಿ ಜ.27 ರಂದು ಈ ಪ್ರಕರಣದ ಆರೋಪಿಗಳಾದ ಆರಿಫ್, ಮನೋಹರ ಹಾಗೂ ಸುನೀಲ್ ಎಂಬಾತರನ್ನು ವಿಚಾರಣೆಗೊಳಪಡಿಸಿತ್ತು. ವೆಂಕಟೇಶ್ ಅವರ ಪತ್ನಿಯೇ ಸುಪಾರಿ ನೀಡಿದ್ದರು ಎಂದು ಆರೋಪಿಗಳು ಬಾಯಿಬಿಟ್ಟಿದ್ದರು. ಬಳಿಕ ಆರೋಪಿಗಳ ಹೇಳಿಕೆ ಆಧರಿಸಿ ವೆಂಕಟೇಶ್ ಅವರ ಪತ್ನಿ ಉಮಾದೇವಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಗಂಡನ ಕಾಲು ಮುರಿಯಲು ಸುಪಾರಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಮಾದರಿಯಲ್ಲಿ ಒಳಮೀಸಲಾತಿಗಾಗಿ ಜಾತಿವಾರು ವರ್ಗೀಕರಣ ಮಾಡಿ- ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹ
ಬೇರೆ ಮಹಿಳೆಯ ಜೊತೆಗೆ ವೆಂಕಟೇಶ್ ಸಲುಗೆಯಿಂದ ವರ್ತಿಸುತ್ತಿರುವುದನ್ನು ಕಂಡು ಆತನ ಪತ್ನಿ ಉಮಾದೇವಿ ಬೇಸತ್ತು ಕೊನೆಗೆ ಪತಿಯ ಎರಡೂ ಕಾಲು ಮುರಿದರೆ ಆತ ಮನೆಯಲ್ಲಿಯೇ ಒಂದೆಡೆ ಬಿದ್ದಿರುತ್ತಾನೆ ಎಂದು ಯೋಚಿಸಿ ಉಮಾದೇವಿ 5 ಲಕ್ಷಕ್ಕೆ ಸುಪಾರಿ ನೀಡಿದ್ದರು. ಮುಂಗಡವಾಗಿ 50 ಸಾವಿರ ನೀಡಿದ್ದರು. ಸದ್ಯ ವೆಂಕಟೇಶ ಅವರ ಪತ್ನಿ ಉಮಾದೇವಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.