ಮ್ಯಾಟ್ರಿಮೋನಿಯ ಅಪ್ಲಿಕೇಶನ್‌ಗಳಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ ದೋಚಿದ್ದ ವಂಚಕನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಜಯಪುರ ತಾಲೂಕು ನಿವಾಸಿ ಭೀಮರಾಜ್ ಬಂಧಿತ ಆರೋಪಿ.
ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ನಂಬಿ ಮೋಸ ಹೋಗದಂತೆ ಶಿವಮೊಗ್ಗ ಪೊಲೀಸ್ ಇಲಾಖೆ ಭೀಮರಾಜ್ ಫೋಟೋ ಹಾಗೂ ಆತ ನಡೆಸಿದ ವಂಚನೆ ಪ್ರಕರಣಗಳ ಲಿಸ್ಟ್ ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದೆ.
ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಭೀಮರಾಜ್, ಈ ಮೊದಲೇ ತಾನು ಮದುವೆಯಾಗಿರುವುದನ್ನು ಮರೆಮಾಚಿ, ಭದ್ರಾವತಿಯ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಹಣ ಮತ್ತು ಒಡವೆಗಳನ್ನು ಪಡೆದು ಬಳಿಕ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದಾನೆ. ಮಹಿಳೆಯಿಂದ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಫೋನ್ ಪೇ ಮೂಲಕ ಒಟ್ಟು ₹5,43,451 ಗಳನ್ನು ಪಡೆದಿದ್ದ. ನಂತರ ₹2,00,000 ಕ್ಯಾಶ್ ಪಡೆದುಕೊಂಡಿದ್ದ. ಸಾಲದೆಂಬಂತೆ ಕಚೇರಿ ಸಮಾರಂಭದ ಕಾರಣ ಹೇಳಿ ಸುಮಾರು ₹2,25,000 ಮೌಲ್ಯದ ಬಂಗಾರ ಪಡೆದುಕೊಂಡಿದ್ದ. ಆ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದ ಎನ್ನಲಾಗಿದೆ.
ಈ ಸಂಬಂಧ ಸಂತ್ರಸ್ತೆ ದಾಖಲಿಸಿದ ದೂರಿನನ್ವಯ ಪೊಲೀಸರು 318(2), 318(4) BNS-2023 2 66 (C), 66(D) IT ACT ಅಡಿಯಲ್ಲಿ ಕೇಸ್ ದಾಖಲಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಭದ್ರಾವತಿ | ಪೊಲೀಸ್ ಠಾಣೆ ಕಾರ್ಯವೈಖರಿ ತಿಳಿಸಲು ವಿದ್ಯಾರ್ಥಿಗಳಿಗೆ ʼತೆರೆದ ಮನೆʼ ಕಾರ್ಯಕ್ರಮ
ಅಲ್ಲದೆ ಆತನ ವಿರುದ್ಧ 10 ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಕೇಸ್‌ಗಳಿರುವುದು ತನಿಖೆಯಿಂದ ಗೊತ್ತಾಗಿದೆ. ಪ್ರಸ್ತುತ ಆತ ಕೊಪ್ಪಳ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ವರದಿಯಾಗಿದೆ.
