ಡಿಸೆಂಬರ್ 2ರಂದು ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಹಾಗೂ ʼಲೋಕನಾಯಕʼ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಭಾಲ್ಕಿ ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಬಿಕೆಐಟಿ) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ತಂದೆಯವರಾದ ಭೀಮಣ್ಣ ಖಂಡ್ರೆಯವರು ಸ್ವತಂತ್ರ ಚಳುವಳಿಯಲ್ಲಿ, ಕರ್ನಾಟಕ ಏಕಿಕರಣ ಸಂದರ್ಭದಲ್ಲಿ ರಜಾಕಾರ ಹಾವಳಿ ತಡೆಯುವಲ್ಲಿ ಹಾಗೂ ಈ ಭಾಗದಲ್ಲಿ ಕನ್ನಡ ಉಳಿಸಲು ಕನ್ನಡದ ಪಟ್ಟದ್ದೇವರಾಗಿದ್ದ ಡಾ.ಚನ್ನಬಸವ ಪಟ್ಟದ್ದೇವರ ಜೊತೆಗೆ ಸೇರಿ ಹೋರಾಟ ನಡೆಸಿದ್ದರು. ಹಾಗಾಗಿ ಈ ಭಾಗ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅವರ ಕೊಡುಗೆಯನ್ನು ಕಂಡು ಡಾ.ಚನ್ನಬಸವ ಪಟ್ಟದ್ದೇವರು ನಮ್ಮ ತಂದೆಗೆ ಲೋಕನಾಯಕ ಭೀಮಣ್ಣ ಖಂಡ್ರೆ ಎಂದು ಕರೆದರೆ, ಸುವರ್ಣ ಕರ್ನಾಟಕ ಸಂಭ್ರಮಾಚರಣೆಯಲ್ಲಿ ಕರ್ನಾಟಕ ಸರ್ಕಾರ ಅವರಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ” ಎಂದು ಹೇಳಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಬೆಂಗಳೂರು ಹಾಗೂ ಡಾ. ಭೀಮಣ್ಣಾ ಖಂಡ್ರೆ ಜನ್ಮಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 11:30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಉದ್ಘಾಟಿಸುವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕನಾಯಕ ಭೀಮಣ್ಣ ಖಂಡ್ರೆ ಅಭಿನಂದನ ಗ್ರಂಥ ಬಿಡುಗಡೆಗೊಳಿಸುವರು. ಸಾಕ್ಷಚಿತ್ರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಿಡುಗಡೆ ಮಾಡುವರು. ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರೆಪ್ಪ ಅಧ್ಯಕ್ಷತೆ ವಹಿಸುವರು. ಗೋ.ರು.ಚನ್ನಬಸಪ್ಪ ಅಭಿನಂದನ ಗ್ರಂಥ ಕುರಿತು ಮಾತನಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸುತ್ತೂರು ಶ್ರೀಗಳು, ತರಳಬಾಳು ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಕಾಗಿನೆಲೆ ಶ್ರೀಗಳು, ಇಳಕಲ್ ಅಪ್ಪಗಳು, ತುಮಕೂರು ಶ್ರೀಗಳು, ಮೌಲ್ವಿಗಳು, ಭಂತೇಜಿ, ರಾಬರ್ಟ್ ಮಿರಂಡಾ ಪಾದ್ರಿ ಸೇರಿದಂತೆ ಎಲ್ಲ ಧರ್ಮಗಳ ಧರ್ಮಗುರುಗಳು ಸೇರಿದಂತೆ ನಾಡಿನ ಪ್ರಮುಖ ಧಾರ್ಮಿಕ ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ರಾಜ್ಯದ ಹಿರಿಯ ಸಚಿವರಾದ ಹೆಚ್.ಕೆ ಪಾಟೀಲ, ಡಾ.ಜಿ.ಪರಮೇಶ್ವರ, ರಾಮಲಿಂಗಾರೆಡ್ಡಿ, ಕೆ.ಹೆಚ್.ಮುನಿಯಪ್ಪ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಮಾಜಿ ಎಮ್.ಎಲ್.ಸಿಗಳು ಸೇರಿದಂತೆ ಹಲವು ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, “ಈ ಜಿಲ್ಲೆಗೆ ಖಂಡ್ರೆ ಮನೆತನದ ಕೊಡುಗೆ ಬಹಳಷ್ಟಿದೆ. ನಾಡಿನ ಎಲ್ಲ ಜನರು ಮಾಜಿ ಸಚಿವ ಭೀಮಣ್ಣ ಖಂಡ್ರೆ ಹೋರಾಟದ ಬದುಕಿನ ಬಗ್ಗೆ ಅರಿತುಕೊಂಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಅವರ ನೇರ-ನಿಷ್ಠುರ ಮಾತು ಹಾಗೂ ಕೆಲಸದ ಕೌಶಲ್ಯ ನಮ್ಮಂಥ ರಾಜಕಾರಣಿಗಳಿಗೆ ಮಾದರಿಯಾಗಿದೆ” ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಡಾ.ಭೀಮಣ್ಣ ಖಂಡ್ರೆ ಮನೆತನ ನಮ್ಮ ಶ್ರೀಮಠಕ್ಕೆ ಅವಿನಾಭಾವ ಸಂಬಂಧವಿದೆ. ಪಟ್ಟದ್ದೇವರು ಕೈಗೊಂಡ ಕಾರ್ಯಗಳಿಗೆಲ್ಲ ಭೀಮಣ್ಣ ಖಂಡ್ರೆ ಅವರ ಪರಿಶ್ರಮ ಇರುತ್ತಿತ್ತು. ಡಾ.ಚನ್ನಬಸವ ಪಟ್ಟದೇವರು ಹಾಗೂ ಭೀಮಣ್ಣಾ ಖಂಡ್ರೆಯವರು ಅಪ್ಪಟ ಗುರು-ಶಿಷ್ಯರಿದ್ದರು. 1996ರಲ್ಲಿ ಡಾ.ಭೀಮಣ್ಣ ಖಂಡ್ರೆಯವರು ತಮ್ಮ ಅಧ್ಯಕ್ಷತೆಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಶತಮಾನೋತ್ಸವ ಆಚರಿಸಿದ್ದಾರೆ. ಇಂದು ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಆಚರಿಸುವ ಸೌಭಾಗ್ಯ ನಮ್ಮದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬರ ಪರಿಹಾರ ಪಡೆಯಲು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು: ಮುನೀಶ್ ಮೌದ್ಗಿಲ್
ಪತ್ರಿಕಾಗೋಷ್ಟಿಯಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭೆಯ ಪದಾಧಿಕಾರಿಗಳಾದ ಚಿದಾನಂದ ಮಠದ, ಮಹಾಂತೇಶ ಪಾಟೀಲ, ವಿಜಯ ಪಾಟೀಲ, ಸಿದ್ದು ಚೌಕಾ, ಮನೋಹರ ಅಬ್ಬಿಗೆರೆ ಹಾಗೂ ನಗರಸಭೆ ಅಧ್ಯಕ್ಷ ಮಹಮದ್ ಗೌಸ್, ಆನಂದ ದೇವಪ್ಪ, ದತ್ತಾತ್ರಿ ಮೂಲಗೆ, ಶಶಿಧರ ಕೋಸಂಬೆ ಹಾಗೂ ಇತರರಿದ್ದರು.