ಡಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿ ಸುವರ್ಣಸೌಧದ ಅಧಿವೇಶನದ ವೇಳೆ ‘ವಡ್ಡ’ ಪದ ಬಳಕೆ ಮಾಡಿರುವುದನ್ನು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸುವ ವೇಳೆ ಸಾಂವಿಧಾನಿಕ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೋವಿ ಸಮುದಾಯಕ್ಕೆ ನೋವುಂಟು ಮಾಡುವಂತಹ ಅಕ್ಷೇಪಾರ್ಹ ಪದ ಬಳಸಿದ್ದಾರೆ. ಇದು ಸಮುದಾಯಕ್ಕೆ ಅವಮಾನ ಮಾಡುವಂತಹ ಪದ, ಇದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಾಲ್ಯದಲ್ಲಿ ನಾನು ಬಟ್ಟೆ ಹಾಕದೇ ‘ವಡ್ಡ’ನಾಗಿದ್ದೆ ಎನ್ನುವ ಪದ ಬಳಸಿದ್ದಾರೆ. ಈ ಪದ ಬಳಕೆಯ ಬಗ್ಗೆ ನಮಗೆ ಆಕ್ಷೇಪವಿದೆ. ಹಾಗೂ ಡಿಕೆಶಿ ಬಗ್ಗೆ ನಮಗೆ ಗೌರವವಿದೆ. ಮಠಕ್ಕೂ ನಮ್ಮ ಸಮುದಾಯಕ್ಕೂ ಬಹಳವಾದ ಸಂಬಂಧವನ್ನು ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಸರ್ಕಾರದ ಮುಖ್ಯಸ್ಥರಾಗಿ ಭೋವಿ ಸಮಾಜಕ್ಕೆ ಸ್ಥಾನ ಮಾನ ನೀಡಿ, ನಮ್ಮ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಡಿಸಿದ್ದಾರೆ. ಆದರೆ ಸಮುದಾಯ ಎಂದು ಬಂದಾಗ ಮಾತ್ರ ನಾವು ಭಕ್ತರ ಮೇಲೆ ಪರವಾಗಿ ಇರಬೇಕಿದೆ” ಎಂದೂ ಹೇಳಿದ್ದಾರೆ.
“ವಡ್ಡ ಎಂಬ ಪದಕ್ಕೆ ಹಲವು ಅರ್ಥಗಳು ಬರುತ್ತದೆ. ಹಿಂದುಳಿದ ಸಮುದಾಯಕ್ಕೆ ಇದು ಬೈಗುಳವಾಗಿ ಕೂಡ ಬಳಕೆಯಾಗುತ್ತದೆ. ಇದು ಮಾನಸಿಕ ಅಸ್ವಸ್ಥತೆ ತೋರಿಸುವ ಪದವಾಗಿ ಬಳಕೆಯಾಗುತ್ತೆ. ಈ ಕುರಿತು ಡಿಕೆಶಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲು ಶಿಷ್ಯ ಬಳಗ ಚಿಂತನೆ ಮಾಡಿದೆ. ಇದು ಉದ್ದೇಶ ಪೂರ್ವಕವಾಗಿಲ್ಲದ ಕಾರಣ ನಾವೇ ಬೇಡ ಅಂದಿದ್ದೇವೆ. ಕೂಡಲೇ ಡಿಕೆಶಿ ತಪ್ಪು ಸರಿಪಡಿಸಲು ಈ ಪದ ಕಡತದಿಂದ ತೆಗೆಸಬೇಕು. ಇದು ನಮ್ಮ ಸಮುದಾಯದ ಜನರಿಗೆ ನೋವಾಗಿದೆ. ಶಿವಕುಮಾರ್ ಅವರಿಗೆ ಸಮಯವನ್ನು ನೀಡಿ ತದನಂತರ ಏನು ಆಗದಿದ್ದಾಗ ಮುಂದುವರೆಯಲಾಗುವುದೆಂದು ಭಕ್ತರಿಗೆ ತಿಳಿಸಲಾಗಿದೆ. ಡಿಕೆಶಿ ನಮ್ಮ ಸಮುದಾಯದ ಕ್ಷಮೆ ಕೇಳಬೇಕು” ಎಂದು ಸಿದ್ದರಾಮೇಶ್ವರ ಸ್ವಾಮಿಜಿಗಳು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ ಅಧಿವೇಶನ | ನೇಕಾರ ಮಾಲೀಕರಷ್ಟೆ ಅಲ್ಲ, ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಸಹ ಚರ್ಚೆಗೆ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ, ಕಾರ್ಯದರ್ಶಿ ಲಕ್ಷ್ಮಣ ಹಾಗೂ ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
