ಜಗತ್ತಿನ ಯಾವುದೇ ಭಾಷೆ ಮತ್ತು ವಿಶ್ವವಿದ್ಯಾಲಯಗಳು ವಚನಕಾರರ ಬಗ್ಗೆ ಅಧ್ಯಯನ ಮಾಡಬೇಕಾದರೆ ವಚನಗಳ ಮೂಲ ಪಠ್ಯ ಓದಲೇಬೇಕು. ಅನ್ಯ ಭಾಷಿಕರು ಕನ್ನಡದ ಮೇಲೆ ಪ್ರಭುತ್ವ ಪಡೆದು ವಚನವನ್ನು ಗ್ರಹಿಸಬೇಕು. ವಚನಗಳು ಹೊಸ ಸಾಂಸ್ಕೃತಿಕ ಪರಂಪರೆ ರೂಪಿಸಿದ ಪಠ್ಯಗಳು ಎಂದು ಸ್ಲೋವಾಕಿಯಾದ ಕೊಮೆನಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ದುಶಾನ್ ಡೀಕ್ ಹೇಳಿದರು.
ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಇತ್ತೀಚೆಗೆ ಬಸವಕಲ್ಯಾಣದ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರಚನೆ ‘ ಕುರಿತ ಪ್ರತಿಷ್ಠಾನದ 89ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಅನುವಾದಿತ ಕೃತಿಗಳಿಗಿಂತ ಮೂಲ ಪಠ್ಯದಿಂದ ಅವುಗಳ ಆಶಯ, ತಾತ್ವಿಕತೆ ಮತ್ತು ಸಿದ್ಧಾಂತಗಳು ಗ್ರಹಿಸಲು ಸಾಧ್ಯʼ ಎಂದರು.
ʼಈ ನೆಲದ ಶರಣರು ಮತ್ತು ಸಂತರು ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿದ್ದಾರೆ. ಅವರಿಗೆ ಯಾವುದೇ ಸ್ಥಾಪಿತ ಮತ್ತು ಜಡಗೊಂಡ ಚೌಕಟ್ಟಿನಲ್ಲಿಟ್ಟು ನೋಡಲು ಸಾಧ್ಯವೇ ಇಲ್ಲ. ಶರಣರು ಕೊಟ್ಟ ಚಿಂತನೆಗಳು, ನೋಟಕ್ರಮಗಳು ಸಮಾಜದ ಗ್ರಹಿಕೆಗೆ ಹೊಸ ವೈಧಾನಿಕತೆ ಒದಗಿಸಿವೆ. ಕನ್ನಡದ ವಚನ ವಾಙ್ಮಯ ಮತ್ತು ಮರಾಠಿಯ ಸಂತ ವಾಙ್ಮಯಗಳಲ್ಲಿ ಹೆಚ್ಚು ಮಾನವೀಯ ಚಿಂತನೆಗಳು ತುಂಬಿವೆ. ಮನುಷ್ಯತ್ವವನ್ನು ಹಾಗೂ ಸಹಬಾಳ್ವೆಯನ್ನು ‘ಧರ್ಮ’ದ ಸ್ವರೂಪವೆಂದು ತಿಳಿಸಿದರು. ಎಲ್ಲ ಜೀವಿಗಳ ಒಳಿತಿನಲ್ಲೇ ಧರ್ಮ ಅಡಗಿದೆ ಎಂಬುದು ಬಸವಣ್ಣನವರ ನಂಬಿಕೆಯೂ ಆಗಿತ್ತುʼ ಎಂದು ಪ್ರತಿಪಾದಿಸಿದರು.
ʼಸಮುದಾಯ ಕೇಂದ್ರಿತ ಚರಿತ್ರೆಯ ಅಧ್ಯಯನದಿಂದ ಹೊಸ ಸಾಂಸ್ಕೃತಿಕ ತಿಳುವಳಿಕೆ ಹಾಗೂ ಸಾಧ್ಯತೆಗಳು ಅರಿಯಬಹುದು. ಜನ ಸಮುದಾಯದ ನೆಲೆಯಲ್ಲಿ ಚರಿತ್ರೆ ಕಟ್ಟುವ ಪ್ರಯತ್ನ ನಡೆಯಬೇಕು. ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಜನ ಏನಂದುಕೊಂಡಿದ್ದಾರೆ ಎಂಬುದನ್ನು ಅರ್ಥೈಸಿಕೊಂಡು ದಾಖಲಿಸುವುದು ಚರಿತ್ರೆಯಾಗಿದೆ. ಭಾರತೀಯ ಸಮಾಜವು ಬಹು ಧರ್ಮ, ಭಾಷೆ ಹಾಗೂ ಬಹು ಸಂಸ್ಕೃತಿಯಿಂದ ಕೂಡಿದೆ. ಇದನ್ನು ಬಹುತ್ವದ ನೆಲೆಯಲ್ಲಿಯೇ ಅಭ್ಯಾಸಿಸಬೇಕಾಗುತ್ತದೆ. ವಚನಗಳ ಅಧ್ಯಯನ ನಡೆಸಬೇಕಾದರೆ ವಚನಕಾರರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭದ ಅರಿವು ಮುಖ್ಯವಾಗುತ್ತದೆ. ಕಾಲ ಪ್ರಜ್ಞೆ ಪ್ರಧಾನವಾಗುತ್ತದೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ʼದೇಶಿ ಮತ್ತು ವಿದೇಶಿ ಶಿಕ್ಷಣ ಪದ್ದತಿ ತುಂಬಾ ಭಿನ್ನವಾಗಿದೆ. ಸಂಶೋಧನೆಗೆ ಹೊರ ದೇಶಗಳಲ್ಲಿ ಹೆಚ್ಚು ಮಹತ್ವವಿದೆ. ಸಂಶೋಧಕರು ವಿದ್ವಾಂಸರಾದವರಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಇರುತ್ತದೆʼ ಎಂದರು.
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಹಿತ್ಯದ ಜೀವಂತಿಕೆ ಇರುವುದು ಅದು ಆಯಾ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸುವುದರಲ್ಲಿ. ಲೋಕದ ಎಲ್ಲ ರಚನೆಗಳ ಕುರಿತು ವಿದ್ವತ್ಪೂರ್ಣ ಅನುಸಂಧಾನ ನಡೆಸಿದ ಸಂಶೋಧನೆಗಳು ಹಲವು ಕಾಲ ಸಂಕಥದಗೊಳ್ಳುತ್ತವೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಚನ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ : ಶಿವಕುಮಾರ ಉಪ್ಪೆ
ಪ್ರಾಧ್ಯಾಪಕ ಡಾ.ಶಿವಾಜಿ ಮೇತ್ರೆ, ನಾಗರಾಜ ಮಾನೆ, ಇರ್ಫಾನ್ ಶೇಖ್ ಮತ್ತಿತರಿದ್ದರು. ಶ್ರೀನಿವಾಸ ಶಿಂಧೆ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ವಂದಿಸಿದರು.