ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುತ್ತಿದ್ದ ಕೃಷಿ ಡಿಪ್ಲೊಮಾ ಕೋರ್ಸ್ ರದ್ದು ಪಡಿಸಿರುವ ಕುರಿತು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಬೀದರ್ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. “ಈ ಭಾಗದ ರೈತರ ಮಕ್ಕಳ ಅನುಕೂಲಕ್ಕಾಗಿ 2012 ರಲ್ಲಿ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಎರಡು ವರ್ಷದ ಕೃಷಿ ಡಿಪ್ಲೊಮಾ ಕೋರ್ಸ್ ಆರಂಭವಾಗಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷ 2023-24ನೇ ಸಾಲಿನ ವಿಶ್ವವಿದ್ಯಾಲಯಕ್ಕೆ ಈ ಕೋರ್ಸ್ ಅನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದ್ದು ಕೃಷಿ ಡಿಪ್ಲೊಮಾ ಕೋರ್ಸ್ ಆಸಕ್ತ ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಬಡರೈತರ ಮಕ್ಕಳಿಗೆ 5 ಸಾವಿರ ಶುಲ್ಕದಲ್ಲಿ ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದಿತ್ತು. ಕಳೆದ 10 ವರ್ಷಗಳಿಂದ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಕೃಷಿ ಡಿಪ್ಲೊಮಾ ಕೋರ್ಸ್ ಪಡೆದಿದ್ದಾರೆ. ಈ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಬೀಜ ನಿಗಮ, ಖಾಸಗಿ ರಸಗೊಬ್ಬರ ಕಂಪನಿ, ಬೀಜ ಔಷಧಿ ಕಂಪನಿ ಸೇರಿದಂತೆ ಅನೇಕ ಕಡೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೂ ಅವಕಾಶಗಳಿದ್ದವು. ರಸಗೊಬ್ಬರ, ಔಷಧಿ ಅಂಗಡಿಗಳಿಗೆ ಪರವಾನಗಿ ಅವಕಾಶ, ಅನೇಕ ಕೃಷಿ ಸಂಬಂಧಿತ ಖಾಸಗಿ ಕಂಪನಿಗಳಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್ ಪೂರೈಸಿದವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು” ಎಂದು ತಿಳಿಸಿದರು.
“ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ ಕೃಷಿ ಡಿಪ್ಲೊಮಾ ಕೋರ್ಸ್ ಮುಗಿಸಿದವರಿಗೆ ಬಿಎಸ್‌ಸಿ ಪದವಿ ಪಡೆಯಲು ಶೇ.5ರಷ್ಟು ಮೀಸಲಾತಿ ಇತ್ತು. ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಕೃಷಿ ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಿಂದುಳಿದ ಸಮುದಾಯಗಳಿಗೆ ಶಾಸನಸಭೆಯಲ್ಲೂ ಮೀಸಲಾತಿ ದೊರೆಯಬೇಕು: ನಿವೃತ್ತ ನ್ಯಾ. ನಾಗಮೋಹನ್ ದಾಸ್
“ರಾಜ್ಯ ಸರ್ಕಾರ ಪ್ರಸ್ತುತ ವರ್ಷದಿಂದ ದಿಢೀರನೆ ಕೃಷಿ ಡಿಪ್ಲೊಮಾ ಕೊರ್ಸ್ ಸ್ಥಗಿತಗೊಳಿಸಿದ್ದರಿಂದ ಕೃಷಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟವಾಗಿದೆ. ಬೀದರ್ ಜಿಲ್ಲೆಯಲ್ಲಿ ಕೃಷಿ ಶಿಕ್ಷಣಕ್ಕೆ ಉತ್ತಮ ಹವಾಗುಣ ಹೊಂದಿದೆ. ಅದರ ಜೊತೆಗೆ ಬೇಕಾದ ಸುಸಜ್ಜಿತವಾದ ವಿದ್ಯಾಲಯ ಕಟ್ಟಡ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಇತರೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕೃಷಿ ಡಿಪ್ಲೊಮಾ ಕೋರ್ಸ್ ಮುಂದುವರೆಸುವುದರ ಜೊತೆಗೆ ಕೃಷಿ ಮಹಾವಿದ್ಯಾಲಯ ಕೂಡ ಪ್ರಾರಂಭ ಮಾಡಬೇಕು” ಎಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲೆಯ ಕೃಷಿ ಡಿಪ್ಲೊಮಾ ಕೋರ್ಸ್ ಯಥಾಪ್ರಕಾರ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಒಂದು ವೇಳೆ ಈ ಕೋರ್ಸ್ ಮುಂದುವರೆಸದಿದ್ದರೆ ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯ ಸಂಬಂಧಪಟ್ಟ ಕಾಲೇಜುಗಳನ್ನು ಬಂದ್ ಮಾಡಿ, ಮುಂದಿನ ಹೋರಾಟಕ್ಕೆ ಕರೆ ನೀಡಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕ್ಲೆ, ಸಿದ್ಧಾರ್ಥ ಭಾವಿದೊಡ್ಡಿ, ನಿತಿಶ ಸಿಂಧೆ, ಅಮರ, ಅರುಣ, ಅಭಿಷೇಕ ಹಾಗೂ ಕೃಷಿ ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಗಳಾದ ಸಂಜನಾ, ಬಸವೇಶ್ವರಿ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಹಾಜರಿದ್ದರು.