ಸರ್ಕಾರಿ ಶಾಲೆಗಳಿಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ, ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ರಾಜ್ಯದಲ್ಲಿ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಶಿಕ್ಷಣದ ಗುಣಮಟ್ಟದ ಸುಧಾರಣೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಸರ್ಕಾರವು ಶಿಕ್ಷಣದ ಖಾಸಗೀಕರಣಕ್ಕೆ ಉತ್ತೇಜನ ಕೊಡುತ್ತಿರುವುದು ಏಕೆ? ಸರ್ಕಾರಿ ಶಾಲೆಗಳು ಖಾಸಗೀಕರಣವಾದರೆ ಶೇ 80ಕ್ಕೂ ಅಧಿಕ ಬಡವರ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಸುಧಾರಣೆಗೆ ಆಗ್ರಹಿಸಿ ಕಳೆದ ಎರಡು ವರ್ಷದಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದೇವೆ. ಆದರೆ, ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿನ ಎಲ್ಲ ಹುದ್ದೆಗಳು ಭರ್ತಿ ಆಗುವವರೆಗೂ ಶೇ 100ರಷ್ಟು ಅತಿಥಿ ಶಿಕ್ಷಕರನ್ನು ಭರ್ತಿ ಮಾಡಬೇಕು. ವಿಷಯವಾರು, ತರಗತಿವಾರು ಶಿಕ್ಷಕರನ್ನು ನೇಮಕ ಮಾಡಬೇಕು. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ತಕ್ಷಣವೇ ಕ್ರಿಯಾ ಯೋಜನೆಯನ್ನು ರೂಪಿಸಿ, 3 ತಿಂಗಳ ಒಳಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ತರಗತಿ ಕೊಠಡಿಗಳು, ಬೆಂಚ್, ವಿದ್ಯುತ್, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿನಿಯರಿಗೆ ಪ್ಯಾಡ್‌ಗಳ ವಿತರಣೆ ಮಾಡಬೇಕು. ಪ್ರತಿ ಶಾಲೆಗೆ ಒಬ್ಬ ಪರಿಚಾರಕರನ್ನು ನೇಮಿಸಬೇಕು. ಶಾಲೆಗಳ ಸ್ಥಿತಿಗತಿ ಕುರಿತು ಡಿಡಿಪಿಐ ಶ್ವೇತಪತ್ರ ಬಿಡುಗಡೆ ಮಾಡಬೇಕು. ಕೆಕೆಆರ್‌ಡಿಬಿ, ಶಿಕ್ಷಣ ಆಯುಕ್ತರು 2 ತಿಂಗಳ ಒಳಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಮದ್ಯ ಸೇವಿಸಿ ವಾಹನ ಚಲಾಯಿಸಿದ ಇಬ್ಬರು ಚಾಲಕರಿಗೆ ತಲಾ ₹10 ಸಾವಿರ ದಂಡ
ಪ್ರತಿಭಟನೆಯಲ್ಲಿ ವೇದಿಕೆಯ ಪ್ರಮುಖರಾದ ಸಪ್ನಾದೀಪ, ಗೀತಾ ಡಿಗಾರೆ, ಸುಶೀಲಾ ಭಾಲ್ಕಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು