ಬೀದರ್‌ನಲ್ಲಿ ಜನಿವಾರ ಧರಿಸಿದ ಕಾರಣಕ್ಕಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಪ್ರಕರಣದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಷಡ್ಯಂತ್ರ ಆಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಗಂಭೀರ ಆರೋಪ ಮಾಡಿದ್ದಾರೆ.
ʼವಿದ್ಯಾರ್ಥಿ ಸುಚಿವೃತನ ಜನಿವಾರದ ಪ್ರಕರಣದಲ್ಲಿ ವಾಸ್ತವವಾಗಿ ನಡೆದದ್ದೇನು? ಎಂಬುವುದು ತಿಳಿದುಕೊಳ್ಳಬೇಕು. ಈ ಪ್ರಕರಣ ಇಷ್ಟೊಂದು ದೊಡ್ಡದು ಮಾಡಲು ಕಾರಣವೇನೆಂಬುದು ಜನರು ಅರ್ಥ ಮಾಡಿಕೊಳ್ಳವುದು ಬಹಳ ಅವಶ್ಯಕತೆ ಇದೆʼ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಮೊದಲನೆ ದಿನ ಕೆ-ಸಿಇಟಿ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗಿಲ್ಲ. ಬೀದರ್ ನಗರಕ್ಕೆ ಬಿಜೆಪಿಯ ಜನಾಕ್ರೋಶ ಜಾಥಾ ಬರುವ ಸಂದರ್ಭದಲ್ಲೇ ಈ ಪ್ರಕರಣ ಬೆಳಕಿಗೆ ಬರಲು ಕಾರಣವೇನು? ಇನ್ನು, ಸುಚಿವೃತನು ಜನಿವಾರದೊಂದಿಗೆ ಒಂದು ಗೋಲಾಕರದ ಲೋಹದ ವಸ್ತು ಕಟ್ಟಿಕೊಂಡು ಬಂದಿದ್ದರು. ಅದನು ತೆಗೆದು ಪರೀಕ್ಷೆ ಬರೆಯುವಂತೆ ಹೇಳಿದ್ದಕ್ಕೆ ಅವರು ಅದಕ್ಕೆ ಒಪ್ಪದೆ ಮನೆಗೆ ವಾಪಸ್ ಹೋಗಿದ್ದಾರೆ. ಆದರೆ, ಬಿಜೆಪಿಯವರು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುಮ್ಮಕ್ಕು ನೀಡುತ್ತಿದ್ದಾರೆʼ ಎಂದು ಆರೋಪಿಸಿದರು.
ಒಂದು ವೇಳೆ ಈ ಪ್ರಕರಣ ಸತ್ಯವಿದ್ದಲ್ಲಿ ತೀವ್ರವಾಗಿ ಖಂಡಿಸುತ್ತೇನೆ, ದೇಶದಲ್ಲಿ ಎಲ್ಲ ಧರ್ಮದವರಿಗೆ ಅವರವರ ಪದ್ದತಿ ಅನುಸರಿಸಲು ಯಾರೂ ಅಡ್ಡಿ ಪಡಿಸುವಂತಿಲ್ಲ. ಹಾಗಾಗಿ ಈ ಕೃತ್ಯವನ್ನು ಜರುಗಿಸಿದ ವ್ಯಕ್ತಿಗೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ʼರಾಜ್ಯ ಸರ್ಕಾರವು ಜಾತಿ ಸಮೀಕ್ಷೆಯ ವರದಿ ಸಾರ್ವಜನಿಕವಾಗಿ ಪ್ರಕಟಿಸಲು ಮುಂದಾಗಿರುವ ಸಂದರ್ಭದಲ್ಲೇ ಬಿಜೆಪಿ ಪಟಾಲಂ ಈ ಕೆಲಸ ಮಾಡಿದೆ. ಇದರ ಹಿಂದಿನ ರಾಜಕೀಯ ಪಿತೂರಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಅವರವರ ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್, ಸಿಲಿಂಡರ್ ಸೇರಿದಂತೆ ಎಲ್ಲ ರೀತಿಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಈ ವಿಷಯಗಳನ್ನು ಮರೆಮಾಚಲು ಬಿಜೆಪಿ ರಾಜಕೀಯ ಷಡ್ಯಂತ್ರ ಮಾಡಿರಬಹುದು. ಆದಕಾರಣ ತನಿಖೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆʼ ಎಂದು ಅರಳಿ ಅಭಿಪ್ರಾಯ ಪಟ್ಟಿದ್ದಾರೆ.