ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಒಂದು ವಾರ ಸತತ ಸುರಿದ ಮಳೆ, ಪ್ರವಾಹದಿಂದ 8 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿನ ಉದ್ದು, ಹೆಸರು, ಸೋಯಾಬೀನ್, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಿ ಸಂಕಷ್ಟಕ್ಕೆ ಸಿಲುಕಿರುವ ನೆರವಿಗೆ ಬರಬೇಕೆಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದರು.
ಬುಧವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ʼಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 50ರಷ್ಟು ಹೆಚ್ಚು ಮಳೆಯಾಗಿದೆ. ಕಾರಂಜಾ ಜಲಾಶಯ ತುಂಬಿ ನೀರು ಬಿಟ್ಟಿದ್ದರಿಂದ, ಮಾಂಜ್ರಾ ನದಿಗೆ ಪ್ರವಾಹ ಬಂದಿದ್ದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಬೆಳೆ ಹಾನಿ ಜೊತೆಗೆ ಅನೇಕ ಕಡೆ ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್ ನಾಶವಾಗಿವೆ. ಅನೇಕ ಮನೆಗಳು ಬಿದ್ದಿವೆ. ಹೀಗಾಗಿ ಅತಿವೃಷ್ಟಿ ಪೀಡಿತ ಜಿಲ್ಲೆಗೆ ತಕ್ಷಣ ತುರ್ತು ಪರಿಹಾರ ನೀಡಬೇಕುʼ ಎಂದು ಗಮನ ಸೆಳೆದರು.
‘ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮಳೆಯಿಂದ ವ್ಯಾಪಕ ನಷ್ಟವಾಗಿದೆ. ಸಮೃದ್ಧ ಬೆಳೆಗಳು ನಾಶವಾಗಿ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಸದ್ಯದ ಮಾಹಿತಿ ಪ್ರಕಾರ 1 ಸಾವಿರ ಹೆಕ್ಟೇರ್ ಬೆಳೆ ಸಂಪೂರ್ಣ ಹಾಳಾಗಿದೆ. 25 ಕಿಮೀ ರಸ್ತೆ ಕಿತ್ತುಹೋಗಿದೆ. 3 ಸೇತುವೆ ಹಾಳಾಗಿವೆ. 82 ಕ್ಕೂ ಮನೆಗಳು ಕುಸಿದಿವೆ. 50 ಅಂಗನವಾಡಿ ಕೇಂದ್ರಕ್ಕೆ ಹಾನಿಯಾಗಿದೆ. 200 ಕ್ಕೂ ಹೆಚ್ಚು ವಿದ್ಯುತ್ ಕಂಬ ಮುರಿದಿವೆ. 12 ಟ್ರಾನ್ಸ್‌ಫಾರ್ಮರ್ ನಷ್ಟವಾಗಿವೆ. ಸರ್ಕಾರ ಸಂತ್ರಸ್ತರ ಸಮಸ್ಯೆ ಅರಿತು ಬೇಗ ಸಹಾಯಸ್ತ ಚಾಚಬೇಕು. ಎಲ್ಲ ಹಾನಿ ಕುರಿತು ಅಧಿಕಾರಿಗಳಿಂದ ಸಮಗ್ರ ಸಮೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಬೀದರ್ ನಗರಸಭೆಯನ್ನು ಇದೀಗ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಗತಿ ಕಾರ್ಯ ಆಗಿಲ್ಲ. ಅನುದಾನ ಸಹ ಬಿಡುಗಡೆ ಮಾಡದ ಕಾರಣ ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ. ನನ್ನ ಮತ ಕ್ಷೇತ್ರದ 9 ಗ್ರಾಮಗಳು ಮಹಾನಗರ ಪಾಲಿಕೆಗೆ ಸೇರಿಸಲಾಗಿದೆ. ಅನುದಾನ ಇಲ್ಲದೆ ಇಲ್ಲಿ ಮೂಲಸೌಕರ್ಯ ಕೆಲಸ ಸ್ಥಗಿತವಾಗಿವೆ. ಕೂಡಲೇ ಪಾಲಿಕೆ ಚಟುವಟಿಕೆ ಆರಂಭಿಸಿ ಸೂಕ್ತ ಅನುದಾನ ಬಿಡುಗಡೆಗೆ ಶಾಸಕರು ಆಗ್ರಹಿಸಿದರು.
ಶಾಸಕರ ಅನುದಾನ 5 ಕೋಟಿಗೇರಿಸಿ :
ಶಾಸಕರಿಗೆ ಇದೀಗ ಪ್ರತಿ ವರ್ಷ ₹2 ಕೋಟಿ ಅನುದಾನ ನೀಡುತ್ತಿರುವುದು ಏತಕ್ಕೂ ಸಾಲದಾಗಿದೆ. ನನ್ನ ಕ್ಷೇತ್ರದಲ್ಲಿ 125 ಕ್ಕೂ ಹೆಚ್ಚು ಹಳ್ಳಿ, ತಾಂಡಾಗಳಿವೆ. ಹತ್ತಾರು ಜಾತಿ, ವರ್ಗದವರಿಂದ ಸಮುದಾಯ ಭವನ ಸೇರಿದಂತೆ ನಾನಾ ಬೇಡಿಕೆ ಬಹಳಷ್ಟಿವೆ. ಈಗಿನ ಅನುದಾನದಲ್ಲಿ ಪ್ರತಿಯೊಂದು ಸಮಾಜದವರಿಗೆ ಆದ್ಯತೆ ಮೇಲೆ ಅನುದಾನ ನೀಡುವುದು ಅಸಾಧ್ಯವಾಗಿದೆ. ಇದೇ ಸಮಸ್ಯೆ ಎಲ್ಲ ಕ್ಷೇತ್ರಗಳ ಶಾಸಕರಿಗೂ ಕಾಡುತ್ತಿದೆ. ಹೀಗಾಗಿ ಸರ್ಕಾರ ಮಹಾರಾಷ್ಟ್ರ ಇತರೆ ಬೇರೆ ರಾಜ್ಯಗಳ ಮಾದರಿಯಲ್ಲಿ ನಮಗೂ ಪ್ರತಿ ವರ್ಷ ₹5 ಕೋಟಿ ಅನುದಾನ ಕೊಡುವಂತೆ ಶಾಸಕ ಬೆಲ್ದಾಳೆ ಸರ್ಕಾರದ ಗಮನ ಸೆಳೆದರು. ಇದೊಂದು ಒಳ್ಳೆಯ ಸಲಹೆಯುಳ್ಳ ಬೇಡಿಕೆ ಎಂದು ಸ್ವತಃ ಸ್ಪೀಕರ್ ಯು.ಟಿ.ಖಾದರ್ ಅವರು ಬೆಲ್ದಾಳೆ ಅವರ ಮಾತಿಗೆ ಮನ್ನಿಸಿರುವುದು ವಿಶೇಷ ಎನಿಸಿತು.
ಇದನ್ನೂ ಓದಿ : ಬೀದರ್ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ
ʼಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾದ ಪ್ರತಿ ಮನೆಗೆ ₹5 ಲಕ್ಷ ರೂ., ಅರ್ಧ ಹಾನಿಗೀಡಾದವರಿಗೆ ₹2.50 ಲಕ್ಷ ಹಾಗೂ ಭಾಗಶಃ ಸ್ವಲ್ಪ ಮನೆ ಕುಸಿದರೆ ₹50 ಸಾವಿರ ಪರಿಹಾರ ನೀಡಿದ್ದರು. ಆದರೆ ಇಂದಿನ ಸರ್ಕಾರ ಸಂಪೂರ್ಣ ಮನೆ ಹಾನಿಗೀಡಾದ ಸಂತ್ರಸ್ತರಿಗೂ ಕೇವಲ 5 ಸಾವಿರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಮನೆ ಬಿದ್ದ ಸಂತ್ರಸ್ತರಿಗೆ ₹5 ಸಾವಿರ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ನೆಪಮಾತ್ರಕ್ಕೆ ಪರಿಹಾರದಿಂದ ಸಂತ್ರಸ್ತರಿಗೆ ಯಾವುದೇ ನೆರವು ಸಿಗುವುದಿಲ್ಲ. ಈ ಸರ್ಕಾರಕ್ಕೆ ಬಡವರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಯಡಿಯೂರಪ್ಪ ಅವರ ಮಾದರಿಯಂತೆ ಪರಿಹಾರ ನೀಡಲಿʼ ಎಂದು ಶಾಸಕ ಬೆಲ್ದಾಳೆ ಅವರು ಸರ್ಕಾರಕ್ಕೆ ಒತ್ತಾಯಿಸಿದರು.