ದಲಿತ ಸಾಹಿತ್ಯ ಮತ್ತು ದಲಿತ ಕಥೆಗಳು ಜೀವನಾನುಭವದ ಕೆನೆಪದರು. ಸಾಮಾಜಿಕ ವಾಸ್ತವ ಜೀವನಾನುಭವ ಅಕ್ಷರದ ಮೂಲಕ ರೂಪುಗೊಂಡು ಕಥೆಗಳಾಗಿವೆ. ಲೇಖಕನ ಕಥೆಗಳು ಜೀವನ, ಪರಿಸರದ ಚಿತ್ರಣ ನೀಡಬೇಕು ಎಂದು ಹಿರಿಯ ಕಥೆಗಾರ ಬಿ ಎಸ್ ಖೂಬಾ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಬಿದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಗಡವಂತಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಲೋಕ ಹಾಗೂ ದಲಿತ ಕಥೆ: ಓದು-ವಿಮರ್ಶೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಪ್ರಾಸ್ತಾವಿಕವಾಗಿ ಮಾತನಾಡಿ, “ಅಕಾಡೆಮಿಯು ಪ್ರಶಸ್ತಿ, ಪುಸ್ತಕ ಪ್ರಕಟಿಸುವ ಜೊತೆಗೆ ಗ್ರಾಮಲೋಕ ಸಮಾರಂಭದ ಮೂಲಕ ಜನಸಾಮಾನ್ಯರಿಗೆ ತಲುಪುವ ಪ್ರಯತ್ನ ಮಾಡುತ್ತಿದೆ. ಈ ಭಾಗದಲ್ಲಿ ಅಕಾಡೆಮಿಯಿಂದ ಹೆಚ್ಚೆಚ್ಚು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು” ಎಂದರು.
ಯುವ ಲೇಖಕ ಡಾ.ವಿಜಯಕುಮಾರ ಬೀಳಗಿ ಅವರು ದೇವನೂರು ಮಹಾದೇವರ ಅಮಾಸ ಕತೆಯ ಕುರಿತು ಮಾತನಾಡಿ, “ಅಮಾಸ ಕತೆಯಲ್ಲಿ ದಲಿತ ಅಸ್ಮಿತೆ, ದಲಿತ ಬದುಕನ್ನು ನಿರೂಪಿತವಾಗಿದೆ. ಓದುಗರನ್ನು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯವುದಾಗದೆ ಬರಹದ ಉದ್ದೇಶವಾಗಿದೆ” ಎಂದರು.
ಹುಮನಾಬಾದ್‌ನ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಅವರು, ಡಾ. ಹನುಮಂತರಾವ್ ದೊಡ್ಡಮನಿಯವರ ʼಶ್ಯಾರಿ ಶ್ಯಾಣೆಯಾದಾಗʼ ಕಥೆ ಕುರಿತು ಮಾತನಾಡಿ, “ದಲಿತ ಲೋಕದಲ್ಲಿ ಹೆಣ್ಣು ದೈಹಿಕ ಮತ್ತು ಬೌದ್ಧಿಕವಾಗಿ ದಮನಕ್ಕೊಳಗಾಗುವ ಬಗೆಯನ್ನು ನಿರೂಪಿತವಾಗಿದೆ. ಮುತ್ತುಕಟ್ಟುವುದು, ಬಸವಿ ಬಿಡುವುದು ಹೆಣ್ಣಿನ ವಾಸ್ತವ ಲೋಕದ ಚಿತ್ರಣ ಚಿತ್ರಿಸಿದ್ದಾರೆ” ಎಂದರು.
ಡಾ.ಎಚ್ ಟಿ ಪೋತೆಯವರ ‘ಅನೇಕಲವ್ಯ’ ಕಥೆಯ ಕುರಿತು, ಬಸವಕಲ್ಯಾಣದ ಉಪನ್ಯಾಸಕ ಭೀಮಾಶಂಕರ ಬಿರಾದಾರ ಮಾತನಾಡಿ, “ಸಾಮಾಜಿಕ ಸಂಕೀರ್ಣಗಳಾದ ಜಾತಿ, ಮತಗಳು ಮನುಷ್ಯನಲ್ಲಿ ಸೃಷ್ಟಿಸುವ ಬಿರುಕನ್ನೂ, ಉಳ್ಳವರ ಹಾಗೂ ಉಳ್ಳದವರ ದ್ವಂದ್ವಾತ್ಮಕತೆಯೂ, ಸಂಘರ್ಷವೂ, ಶೋಷಣೆಯೂ ಕತೆಯಲ್ಲಿ ನಿರೂಪಿತವಾಗಿದೆ. ಚರಿತ್ರೆ, ಪುರಾಣ ಸಮಕಾಲೀನಗೊಂಡ ವಿಧಾನ ಮತ್ತು ವರ್ತಮಾನದಲ್ಲಿ ಪ್ರಭುತ್ವ, ರಾಜಕೀಯ ಅಧಿಕಾರಗಳನ್ನು ಅನುಸರಿಸುವ ಶೋಷಣೆಯ ದಾರಿಯ ಕುರಿತು ಕತೆಯಲ್ಲಿ ಆಳವಾಗಿ ನಿರ್ಮಾಣಗೊಂಡಿದೆ. ಬಹು ಆಯಾಮಗಳಲ್ಲಿ ಆಲೋಚನೆಗಳನ್ನು ರೂಪಿಸಬೇಕಾದ ಶಿಕ್ಷಣ ವ್ಯವಸ್ಥೆ ಜಡಗೊಳ್ಳುತ್ತಿರುವುದನ್ನು ಕಥೆಗಾರರು ಸೂಕ್ಷ್ಮವಾಗಿ ಕಟ್ಟಿ ಕೊಟ್ಟಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೃಷಿ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿದಾತರಾಗಬೇಕು: ರಾಜ್ಯಪಾಲ ಗೆಹ್ಲೋಟ್
ಡಾ.ಅನಸೂಯಾ ಕಾಂಬಳೆ ಅವರ ಹರಿದಪತ್ರ ಯುವ ಕಥೆಗಾರ ಡಾ.ಸಂಗಪ್ಪ ತೌಡಿ ಮಾತನಾಡಿ, “ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಹೇಗೆ ನಡೆಯುತ್ತದೆ ಎಂಬುದು ಅನಸೂಯಾ ಅವರ ಕಥೆಗಳಲ್ಲಿದೆ” ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ, ವಿಷ್ಣುವರ್ಧನ ಮಾರಪಳ್ಳಿ, ವೀರಂತ ರೆಡ್ಡಿ ಜಂಪಾ, ಗುಂಡಪ್ಪ ದೊಡ್ಮನಿ, ಸುಭಾಷ ಪಾಟೀಲ, ಜಾಕೀಯಮೀಯಾ, ಚಂದ್ರಕಾಂತ ಅಂಬಲಗೆ, ವಿಜಯಕುಮಾರ ಚೆಟ್ಟಿ ಇದ್ದರು.