ಬೀದರ್ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿ(ಕೆಆರ್‌ಐಡಿಎಲ್)ಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆ ನೇಮಕಾತಿ ಮತ್ತು ಮೂಲ ಹುದ್ದೆಯಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪೋಲಾ ಅಭಿಷೇಕ ಅವರನ್ನು ವರ್ಗಾಯಿಸುವಂತೆ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಬೀದರ್ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆ ಖಾಲಿಯಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಖಾಲಿ ಹುದ್ದೆಯನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರು ಸ್ಥಳೀಯರಾಗಿರುವ ಕಾರಣ ಕಚೇರಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಸಾರ್ವಜನಿಕರು ಕೆಲಸದ ನಿಮಿತ್ತ ಕಚೇರಿಗೆ ತೆರಳಿದರೆ ಅಧಿಕಾರಿಗಳು ಇರುವುದಿಲ್ಲ. ಕರೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಸದರಿ ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಕಳಪೆ ಮಟ್ಟದ ಕಾಮಗಾರಿಗಳು ನಡೆದಿವೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಸರ್ಕಾರಿ ಶಾಲೆಯ ಮೂಲ ಸೌಕರ್ಯಕ್ಕೆ ಎಸ್‌ಐಒ ಆಗ್ರಹ
ನಮ್ಮ ಮನವಿಗೆ ಸ್ಪಂದಿಸಿ ಒಂದು ವಾರದೊಳಗಾಗಿ ಖಾಲಿ ಹುದ್ದೆ ನೇಮಕಾತಿ ಮಾಡಬೇಕು. ಹಾಗೂ ಸದರಿ ಅಧಿಕಾರಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ಪ್ರಮುಖರಾದ ಬಸವರಾಜ ಬಾವಿದೊಡ್ಡಿ, ವಿನೋದಕುಮಾರ ಶಿಂಧೆ, ಮಹೇಂದ್ರ ಕುಮಾರ್ ಹೊಸಮನಿ, ಶಿಂಧೆ, ಶಿವರಾಜ ಮಡಿವಾಳ, ಗುರು ನೇಮತಾಬಾದ್, ಧನರಾಜ್ ಮೇತ್ರೆ, ಪ್ರವೀಣ್ ಮೊರೆ, ಆಕಾಶ ತ್ರಿಮುಖ, ರಾಹುಲ್ ಡಾಂಗೆ, ರಮೇಶ, ಪುಟ್ಟರಾಜ ದೀನೆ ಇದ್ದರು.