ರೈತರಿಗೆ ಸರ್ಕಾರದಿಂದ ಸಿಗುವ ಬಿತ್ತನೆ ಬೀಜ, ಕೃಷಿಭಾಗ್ಯ ಯೋಜನೆ, ಸಾವಯವ ಕೃಷಿ ಹಾಗೂ ಇತರೆ ಯೋಜನೆಗಳ ಲಾಭವನ್ನು ಸಕಾಲದಲ್ಲಿ ರೈತರಿಗೆ ವಿತರಿಸುವಂತೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬೀದರ ಸಂಯುಕ್ತಾಶ್ರಯದಲ್ಲಿ ಚಾಂಬೋಳಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಹಾಗೂ ಬೀಜ ಉಪಚಾರ ಹಾಗೂ ಕೀಟನಾಶಕ ಸುರಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೀದರ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಪಾಸ್ತಾವಿಕ ಮಾತನಾಡಿ, ʼಸೋಯಾ ಮತ್ತು ಇತರೆ ಬೀಜಗಳು ದಾಸ್ತಾನ ಮಾಡಿರುವ 29 ಬೀಜ ವಿತರಣಾ ಕೇಂದ್ರಗಳ ಬಗ್ಗೆ ಎಲ್ಲ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಿ ದಿನಾಂಕವಾರು ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆʼ ಎಂದರು.

ಸಕಾಲದಲ್ಲಿ ಮಳೆಯಾಗಿರುವುದರಿಂದ ಉದ್ದು, ಹೆಸರು ಮತ್ತು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಡಿಎಪಿ ಬದಲಿಗೆ ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಸಲಹೆ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಲಿಂಗದಳ್ಳಿ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ಬಿತ್ತನೆ ಬೀಜ ಉಪಚಾರದ ಕುರಿತು ತರಬೇತಿ ನೀಡಿದರು.
ಇದನ್ನೂ ಓದಿ : ಬೀದರ್ | ಇದ್ದರೆ ಇರಬೇಕು ಇಂಥ ಸರ್ಕಾರಿ ಶಾಲೆ : ಹಳ್ಳಿ ಶಾಲೆಗೆ ಬಣ್ಣದ ಚಿತ್ತಾರ!
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಎಲ್.ಜಾಧವ, ಚಾಂಬೋಳ್ ಗ್ರಾಮ ಪಂಚಾಯತ ಅಧ್ಯಕ್ಷೆ ಸುರೇಖಾ ಅರ್ಜುನ ಕೋಳಿ, ಉಪಾಧ್ಯಕ್ಷ ದೌಲತರಾವ, ಚಾಂಬೋಳ್ ಪಿಕೆಪಿಎಸ್ ಅಧ್ಯಕ್ಷ ಸುನಿಲ್ ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಸದಸ್ಯ ಸಂಜು ಪಾಟೀಲ್ ಕನ್ನಳ್ಳಿ ಸೇರಿದಂತೆ ಪ್ರಮುಖರಾದ ರಾಮರಾವ ಪಾಟೀಲ್, ನಾಗೇಂದ್ರ ಪಾಟೀಲ್, ಬಂಡೆಪ್ಪಾ ಜ್ಯಾಂತೆ, ಧನರಾಜ ಪಾಟೀಲ್, ಉಮೇಶ ಮೊಟ್ಟೆ, ಚಂದ್ರಕಾಂತ ಹಿಪ್ಪಳಗಾಂವ ಸೇರಿದಂತೆ ಇತರರು ಉಪಸ್ಥಿತರಿದ್ದರು.