ಬೀದರ್ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼರೈತರಿಗೆ ಬೆಳೆ ವಿಮೆ ಸೇರಿದಂತೆ ಅನೇಕ ಸೌಲಭ್ಯಗಳು ದಕ್ಕಬೇಕಾದರೆ ಬೆಳೆ ಸಮೀಕ್ಷೆ ಕಾರ್ಯ ಪ್ರಮುಖ ಪಾತ್ರವಹಿಸುತ್ತದೆ. ಬಿಸಿಲು, ಮಳೆ ಎನ್ನದೆ ರೈತರ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ನಡೆಸುವ ಗಣತಿದಾರರ ತುಂಬಾ ಮುಖ್ಯವಾಗಿದೆ. ಸರ್ಕಾರ, ಕೃಷಿ ಇಲಾಖೆ ಅವರ ಬೇಡಿಕೆಗಳಿಗೆ ಸ್ಪಂದಿಸಿ ವಿಶೇಷ ಸೌಲಭ್ಯ ಒದಗಿಸಬೇಕುʼ ಎಂದು ತಿಳಿಸಿದರು.
ʼಬೆಳೆ ಸಮೀಕ್ಷೆದಾರರು ಜಮೀನಿಗೆ ಬಂದು ಸಮೀಕ್ಷೆ ನಡೆಸುವ ವೇಳೆ ರೈತರು ಸಹಕರಿಸಬೇಕು. ರೈತರ ಬೆಳೆದ ಬೆಳೆಗೆ ಖರೀದಿ ನಿಗದಿಯಾಗುವುದು ಸಮೀಕ್ಷೆ ಆಧಾರದಲ್ಲಿ, ಹೀಗಾಗಿ ರೈತರ ಹಿತದೃಷ್ಟಿಯಿಂದ ನಿಖರವಾಗಿ ಸಮೀಕ್ಷೆ ನಡೆಸಿ ಮಾಹಿತಿ ನೀಡಬೇಕುʼ ಎಂದು ಸಲಹೆ ನೀಡಿದರು.
ಭಾಲ್ಕಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಮಾತನಾಡಿ, ʼಬೀದರ್ ಜಿಲ್ಲೆಯ ಬೆಳೆ ಸಮೀಕ್ಷೆದಾರರು ಅತ್ಯಂತ ಪ್ರಾಮಾಣಿಕತೆಯಿಂದ ಗಣತಿ ಕಾರ್ಯ ನಡೆಸುತ್ತಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಕೆಲವು ಬೇಡಿಕೆಗಳು ಈಡೇರಿಸಲಾಗಿದೆ. ಸಮೀಕ್ಷೆ ಕಾರ್ಯದೊಂದಿಗೆ ಕೃಷಿ ಇಲಾಖೆಯ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಿದೆʼ ಎಂದರು.
ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ ಕಾಂಬಳೆ ಮಾತನಾಡಿ, ʼರೈತರ ಹಿತದೃಷ್ಟಿ, ಕಾಳಜಿಯಿಂದ ಅತ್ಯಂತ ಕಡಿಮೆ ಗೌರವಧನದಲ್ಲಿ ಸಮೀಕ್ಷೆ ಕಾರ್ಯ ನಡೆಸುತ್ತಿದ್ದೇವೆ. ಈ ಕಾರ್ಯದಿಂದ ನಮಗೆ ತೃಪ್ತಿಯಿದೆ. ಮುಂದಿನ ದಿನಗಳಲ್ಲಿ ಸಂಘಟನೆ ಬಲಪಡಿಸಿ ವಿವಿಧ ಬೇಡಿಕೆಗಳಿಗೆ ಹೋರಾಟ ರೂಪಿಸಲಾಗುವುದುʼ ಎಂದರು.

ರಾಜ್ಯ ಬೆಳೆ ಸಮೀಕ್ಷೆದಾರರ ಸಂಘದ ಸಂಸ್ಥಾಪಕ, ಪ್ರಧಾನ ಕಾರ್ಯದರ್ಶಿ ರಾಜು ಡಿಫರೆಂಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಮೋಹನ್ ಮಾನೆ ಗಾದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಇದನ್ನೂ ಓದಿ : ಶ್ರಾವಣ ಮಾಸ | ಜು.24 ರಿಂದ ಬೀದರ್ ಜಿಲ್ಲೆಯ 22 ಕಡೆಗಳಲ್ಲಿ ಪ್ರವಚನ : ಬಸವಲಿಂಗ ಪಟ್ಟದ್ದೇವರು
ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಸುಂದರ್ ಹಲಗೆ, ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಮ್ಮ ಮೂಲಗೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ರೈತ ಸಂಘದ ನಾಗಶೆಟ್ಟಿ ನಂಜವಾಡೆ, ವೀರಾರೆಡ್ಡಿ ಪಾಟೀಲ್, ಹೋರಾಟಗಾರ ಕೊಂಡಿಬಾರಾವ್ ಹಾಗೂ ಬೆಳೆ ಸಮೀಕ್ಷೆದಾರರ ಸಂಘದ ಭಾಲ್ಕಿ ತಾಲೂಕಾಧ್ಯಕ್ಷ ಏಕನಾಥ್ ಮೇತ್ರೆ, ಹುಮನಾಬಾದ್ ತಾಲೂಕಾಧ್ಯಕ್ಷ ಭೀಮಶಾ ಮೇಲಕೇಡಿ, ಬೀದರ್ ತಾಲೂಕಾಧ್ಯಕ್ಷ ಶಿವಕುಮಾರ್ ಶಿವಗೊಂಡ್, ಚಿಟಗುಪ್ಪಾ ತಾಲೂಕಾಧ್ಯಕ್ಷ ವಿನೋದ್ ಉಡಬಾಳ್, ಬಸವಕಲ್ಯಾಣ ತಾಲೂಕಾಧ್ಯಕ್ಷ ಶಂಕರಲಿಂಗ, ಹುಲಸೂರ ತಾಲೂಕಾಧ್ಯಕ್ಷ ಪರಮೇಶ್ವರ ಕಾದೆಪೂರ, ಔರಾದ್ ತಾಲೂಕಿನ ಜನಾರ್ಧನ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.