ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ಲಸ್ಟರ್ ರಚಿಸಿ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜಶಾಸ್ತ್ರ ವಿಷಯದ ತಜ್ಞ ಬೋಧಕರಿಂದ ಪರೀಕ್ಷೆಗೆ ಸಿದ್ಧತೆ ನಡೆಸಲು 15 ದಿನದೊಳಗೆ ಪ್ರಸ್ತಾವನೆ ಕಳಿಸಬೇಕು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ʼಜಿಲ್ಲಾ ಕೇಂದ್ರ ಮತ್ತು ಎಲ್ಲ ತಾಲೂಕು ಕೇಂದ್ರದಲ್ಲಿ ವಿವಿಧ ಶಾಲೆಗಳಲ್ಲಿರುವ ಉತ್ತಮ ಶಿಕ್ಷಕರನ್ನು ಗುರುತಿಸಿ, ಅವರಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 2 ತಿಂಗಳ ಪುನರ್ ಮನನ ತರಗತಿ ನಡೆಸುವ ಸಾಧ್ಯತೆ ಪರಿಶೀಲಿಸಬೇಕುʼ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ ದುರಸ್ತಿ, ಶಾಲೆ ಮಕ್ಕಳ ಕಳಪೆ ಆಹಾರದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಮಾನವ ಕಳ್ಳ ಸಾಗಣೆ ಮತ್ತು ಮಾದಕದ್ರವ್ಯ ಜಾಲದ ಬಗ್ಗೆ ನಿಗಾ ಇಡಬೇಕು. ಇಂತಹ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಬೇಕು ಎಂದು ಸೂಚನೆ ನೀಡಿದರು.
ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹2025 ಕೋಟಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳ ಗುಣಮಟ್ಟದ ಬಗ್ಗೆ ನಿಗಾ ಇಡಬೇಕು. ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳ ಗುಣಮಟ್ಟದ ಖಾತ್ರಿಗೆ ಡಿಸಿ, ಸಿಇಓ, ಎ.ಸಿ., ಎಡಿಸಿಗಳು ಸ್ಥಳ ಪರಿಶೀಲನೆ ನಡೆಸಬೇಕುʼ ಎಂದು ಹೇಳಿದರು.
ʼಜಿಲ್ಲೆಯ ಹಲವು ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಜೀವ ಭಯದಿಂದ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ʼಜಿಲ್ಲೆಯಲ್ಲಿ ಎಷ್ಟು ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂಬ ಪಟ್ಟಿ ನೀಡಬೇಕು. ಪೂರ್ಣ ಶಿಥಿಲಗೊಂಡ ಕೊಠಡಿಗಳನ್ನು ನೆಲಸಮಗೊಳಿಸಬೇಕು. ಯಾವುದೇ ರೀತಿಯಿಂದ ಮಕ್ಕಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು. ಹೊಸ ಕೊಠಡಿ ನಿರ್ಮಾಣ ಅನುದಾನದ ನೀಡಲಾಗುವುದುʼ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ʼಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಬಗ್ಗೆ ಅಘಾತ ವ್ಯಕ್ತಪಡಿಸಿದ ಸಚಿವರು, ಬಾಲಕಿಯರ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ತ್ವರಿತಗೊಳಿಸಬೇಕು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲದಿದ್ದರೆ ಅಳವಡಿಸಲು ತುರ್ತು ಕ್ರಮಕೈಗೊಳ್ಳಿ ಎಂದರು. ಅಪರಾಧಿಗಳನ್ನು ಹಿಡಿದು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದರೆರೆ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಾಧ್ಯʼ ಎಂದರು.
ದೇಶದಾದ್ಯಂತ ಇರುವಂತೆಯೇ ನಮ್ಮ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಯುವಕರಿಗೆ ಸ್ವಾವಲಂಬಿಗಳಾಗಿ ಸ್ವಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿ ಉತ್ತೇಜನ ನೀಡಬೇಕು. ಜಿಲ್ಲೆಯ ಯುವಕರು ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಪಡೆಯುವಂತೆ ಕೌಶಲ್ಯ ತರಬೇತಿ ನೀಡಬೇಕು. ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ ಮಾಡಲು ನೈಸರ್ಗಿಕ ಸಂಪನ್ಮೂಲವಿಲ್ಲ. ಹೀಗಾಗಿ ನಮ್ಮ ಯುವಕರಿಗೆ ಸೇವಾ ವಲಯದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಲಭಿಸುವಂತೆ ಅಣಿಗೊಳಿಸಲು ಕೌಶಲ್ಯ ತರಬೇತಿ ನೀಡಿʼ ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಕನ್ನಡ ಓದಲು ಬರಲ್ಲ :
ಈ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಕುಸಿದಿರುವ ಹಿನ್ನೆಲೆ ಕೆಡಿಪಿ ಸಭೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಫಲಿತಾಂಶ ಸುತ್ತ ಚರ್ಚೆ ನಡೆಯಿತು. ಎಸ್‌ಎಸ್‌ಎಲ್‌ಸಿ ಕೆಲ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ವರ್ಣಮಾಲೆ ಬರುವುದಿಲ್ಲ. ಹೀಗಾದರೆ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ ಎಂಬ ಕುರಿತು ಗಂಭೀರ ಚರ್ಚೆಯಾಯಿತು.
ಡಿಡಿಪಿಐ ಸಲೀಂ ಪಾಶ ಮಾತನಾಡಿ, ʼಎಸ್‌ಎಸ್‌ಎಲ್‌ಸಿ ಮೂರು ಪರೀಕ್ಷೆಗಳಲ್ಲಿ ಜಿಲ್ಲೆಯಲ್ಲಿ ಶೇ 74ರಷ್ಟು ಫಲಿತಾಂಶ ದಾಖಲಾಗಿದೆ. ಜಿಲ್ಲೆಯಲ್ಲಿರುವ ಒಟ್ಟು ಸರ್ಕಾರಿ ಶಾಲೆಗಳಲ್ಲಿ ಒಂದು ಸಾವಿರ ಅತಿಥಿ ಶಿಕ್ಷಕರಿದ್ದಾರೆ. ಅದರಲ್ಲಿ ಪ್ರೌಢ ಶಾಲೆಯಲ್ಲಿ 335 ಅತಿಥಿ ಶಿಕ್ಷಕರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,002 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ, 395 ಕೊಠಡಿ ದುರಸ್ತಿ ಮಾಡಬೇಕಿದೆʼ ಎಂದು ಸಭೆಗೆ ಮಾಹಿತಿ ನೀಡಿದರು.
ಅತಿಥಿ ಶಿಕ್ಷಕರಿಗೆ ನರೇಗಾ ಕಾರ್ಮಿಕರಿಗಿಂತ ಕಡಿಮೆ ಗೌರವಧನ :
ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಜಿಲ್ಲೆಯಲ್ಲಿ ಫಲಿತಾಂಶ ಕುಸಿತಕ್ಕೆ ಖಾಯಂ ಶಿಕ್ಷಕರ ಕೊರತೆಯೂ ಪ್ರಮುಖವಾಗಿದೆ. ಇನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಾಲೆಯಲ್ಲಿ ಕಡಿಮೆ ಗೌರವಧನ ಪಡೆದು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅತಿಥಿ ಶಿಕ್ಷಕರಿಗೆ ಸರ್ಕಾರ ಕನಿಷ್ಠ ₹20 ಸಾವಿರ ಗೌರವ ನೀಡಬೇಕೆಂದು ಒತ್ತಾಯಿಸಿದರು. ಅದಕ್ಕೆ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ ಗೌರವಧನ ಹೆಚ್ಚಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕುʼ ಎಂದರು.
ʼಈಗಾಗಲೇ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನದ ಜೊತೆಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅನುದಾನದಲ್ಲಿ ₹8 ಸಾವಿರ ಕೊಟ್ಟು, ಒಟ್ಟು ₹20 ಸಾವಿರ ಗೌರವಧನ ಆಗುವಂತೆ ಮಾಡಿದರೆ ಅತಿಥಿ ಶಿಕ್ಷಕರ ಬದುಕು ಉತ್ತಮವಾಗಿ ನಿರ್ವಹಣೆ ಜೊತೆಗೆ ಗುಣಮಟ್ಟ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆʼ ಎಂದು ಶಾಸಕ ಬೆಲ್ದಾಳೆ ಸಭೆಗೆ ಸಲಹೆ ನೀಡಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ʼಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳೇ ಮೊದಲ ಸ್ಥಾನ ಪಡೆಯುತ್ತವೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ನಮ್ಮ ಜಿಲ್ಲೆಯ ಮಕ್ಕಳು ದಡ್ಡರಲ್ಲ. ಆದರೆ ನಮ್ಮ ಶಿಕ್ಷಣ ಇಲಾಖೆಯ ಮೈಗಳ್ಳತನದಿಂದ ಫಲಿತಾಂಶ ಸುಧಾರಣೆ ಕಾಣುತ್ತಿಲ್ಲ. ಬಿಎ, ಬಿಎಸ್ಸಿ, ಬಿಇಡ್ ಪೂರ್ಣಗೊಳಿಸಿದ ಅತಿಥಿ ಶಿಕ್ಷಕರು ₹10-12 ಸಾವಿರಕ್ಕೆ ದುಡಿಯುತ್ತಿದ್ದಾರೆ. ಇದು ಮನರೇಗಾ ಯೋಜನೆಯ ಕಾರ್ಮಿಕರಿಗೆ ನೀಡುವ ದಿನಗೂಲಿಗಿಂತ ಕಡಿಮೆ. ಇದರಿಂದ ಅವರ ಜೀವನ ನಿರ್ವಹಣೆ ಮಾಡುವುದು ಹೇಗೆ. ಇಂತಹ ಕಡಿಮೆ ಸಂಬಳ ಕೊಟ್ಟು ಗುಣಮಟ್ಟ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲʼ ಎಂದು ಗಮನ ಸೆಳೆದರು.
ʼಸರ್ಕಾರಿ ಶಾಲೆಗಳಿಗೆ ಉತ್ತಮ ಕೋಣೆ, ಬಿಸಿಯೂಟ ಸೇರಿದಂತೆ ಮೂಲಸೌಕರ್ಯ ಒದಗಿಸಿದರೆ ಸಾಲದು. ಗುಣಮಟ್ಟ ಶಿಕ್ಷಣಕ್ಕಾಗಿ ಉತ್ತಮ ಶಿಕ್ಷಕರ ಅಗತ್ಯವಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳಿಗೆ ವಿಷಯ ತಜ್ಞರಿಂದ ತರಬೇತಿ ನಡೆಸಬೇಕು. ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಶಾಸಕರು ಆ ತರಬೇತಿಯಲ್ಲಿ ಖುದ್ದು ಕುಳಿತು ಶಿಕ್ಷಕರಿಂದ ಪಾಠ ಕೇಳಬೇಕು. ಹೀಗೆ ಮಾಡಿದರೆ ಶಿಕ್ಷಕರು ಹೋಮ್ ಮಾರ್ಕ್ ಮಾಡಿಕೊಂಡು ಮಕ್ಕಳು ಬೋಧಿಸಲು ಸಾಧ್ಯ. ಮುಂದಿನ ಕೆಡಿಪಿ ಸಭೆಯವರೆಗೆ ಕನಿಷ್ಠ ಎರಡ್ಮೂರು ಕಡೆ ತರಬೇತಿ ನಡೆಸಬೇಕುʼ ಎಂದರು.
ಇದಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಧ್ವನಿಗೂಡಿಸಿ, ʼಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಎಬಿಸಿಡಿ, ಕ,ಕಾ ಬರಲ್ಲ. 1ರಿಂದ 9ನೇ ತರಗತಿವರೆಗೆ ಪಾಸು ಮಾಡಲಾಗುತ್ತಿದೆ. ಕನಿಷ್ಠ ಬೇಸಿಕ್ ಬರದೇ ಇರುವ ಮಕ್ಕಳಿಗೆ ನೇರವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆ ತರಬೇತಿ ನೀಡಿದರೆ ಉತೀರ್ಣರಾಗುವುದಿಲ್ಲ. ಪ್ರಾಥಮಿಕ ಹಂತದಿಂದಲೇ ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಜರೂರಿ ಇದೆ. ಅದಕ್ಕೆ ಶಿಕ್ಷಣ ಇಲಾಖೆ ಸೇರಿದಂತೆ ನಾವೆಲ್ಲರೂ ಕೈಜೋಡಿಬೇಕುʼ ಎಂದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಯಾವುದೇ ಮಗು ಶಾಲೆಯಿಂದ ಹೊರಗಡೆ ಉಳಿಯಬಾರದೆಂಬ ಉದ್ದೇಶದಿಂದ 1ರಿಂದ 9ನೇ ತರಗತಿವರೆಗೆ ಪಾಸು ಮಾಡುವ ನಿಯಮ ಇದೆ. ಇದು ಮಕ್ಕಳ ಹಿತದೃಷ್ಟಿಯಿಂದ ಒಳ್ಳಯದೇ ಇದೆ. ಮಕ್ಕಳ ಗುಣಮಟ್ಟ ಶಿಕ್ಷಣ ಜೊತೆಗೆ ಜಿಲ್ಲೆಯ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಲು ಸಿದ್ಧತೆ ನಡೆಸಲು ಕ್ರಮಕೈಗೊಳ್ಳಬೇಕುʼ ಎಂದು ಸಚಿವರು ಜಿಲ್ಲಾಧಿಕಾರಿ, ಸಿಇಒ ಅವರಿಗೆ ಸೂಚಿಸಿದರು.
ವನ್ಯಜೀವಿಗಳಿಂದ ಹಾನಿಯಾದ ಬೆಳೆಗೆ ಪರಿಹಾರ :
ಬೀದರ್ ದಕ್ಷಿಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ಹಲವೆಡೆ ಜಿಂಕೆ, ಕಾಡು ಹಂದಿ ಸೇರಿದಂತೆ ಇತರೆ ವನ್ಯಜೀವಿಗಳ ಉಪಟಳದಿಂದ ರೈತರ ಸಮೃದ್ಧ ಬೆಳೆ ಹಾಳಾಗಿದೆ. ನನ್ನ ಮತಕ್ಷೇತ್ರದಿಂದ 271 ಅರ್ಜಿಗಳು ಸಲ್ಲಿಕೆಯಾಗಿವೆ, ಅದಕ್ಕೆ ಪರಿಹಾರ ಕೊಡಬೇಕು. ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಆಗ್ರಹಿಸಿದರು.
ರೈತರ ಹೊಲಗಳಿಗೆ ಸೋಲಾರ್ ತಂತಿ ಅಳವಡಿಕೆ ಅಗತ್ಯವಿದೆ. ಆದರೆ, ಇಲಾಖೆಯಲ್ಲಿ ಇದಕ್ಕೆ ಹೆಚ್ಚಿನ ಅನುದಾನ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. ಅರಣ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕುʼ ಎಂದರು. ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ ಈ ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾದರೆ ಪರಿಹಾರ ನೀಡಲಾಗುತ್ತಿದೆ. ಅದಕ್ಕಾಗಿ ನೀಡಲಾಗುವ ಪರಿಹಾರ ಮೊತ್ತ ಹೆಚ್ಚಿಸಲಾಗಿದೆʼ ಎಂದರು. ವನ್ಯಜೀವಿಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಈಗಾಗಲೇ ಒದಗಿಸಿದ್ದು, ಬಾಕಿ ಉಳಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ನೀಡಲಾಗುವುದುʼ ಎಂದು ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಬೀದರ ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಪುನಸ್ಚೇತನ ಪ್ರಸ್ತಾಪಕ್ಕೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಒಳಮೀಸಲಾತಿ ಜಾರಿ ವಿಳಂಬ : ಮಾದಿಗ ಸಂಘಟನೆಗಳಿಂದ ಅರೆಬೆತ್ತಲೆ ಮೆರವಣಿಗೆ
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಭೀಮರಾಯ ಪಾಟೀಲ, ಚಂದ್ರಶೇಖರ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ.ಬಿ.ನಾರಾಯಣ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ, ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.