ಎಸ್ಸೆಸ್ಸೆಲ್ಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಳಾದ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ ಸಾರ್ವಜನಿಕರಿಂದ ಆರ್ಥಿಕ ನೆರವು ಹರಿದುಬಂದಿದೆ.
ಬೀದರ್ ಜಿಲ್ಲೆ ಔರಾದ ತಾಲೂಕಿನ ಯನಗುಂದಾ ಪ್ರೌಢ ಶಾಲೆಯಲ್ಲಿ ಶೇ.92.48ರಷ್ಟು ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿ ಬಸವಜ್ಯೋತಿ ಅಜ್ಜ-ಅಜ್ಜಿಯ ಆಶ್ರಯದಲ್ಲಿ ಓದುತ್ತಿದ್ದಳು. ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸದ ಖರ್ಚು-ವೆಚ್ಚ ಭರಿಸುವುದೇ ದೊಡ್ಡ ಚಿಂತೆ ಆಗಿತ್ತು. ಕಾಲೇಜು ಶಿಕ್ಷಣದಿಂದ ವಂಚಿತಳಾಗುವ ಭಯ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಈಕೆಯ ಮುಂದಿನ ಅಧ್ಯಯನಕ್ಕೆ ಆರ್ಥಿಕ ಸಹಕಾರ ನೀಡುವಂತೆ ಕೋರಿ ಈ ದಿನ.ಕಾಮ್ ಮೇ 16 ರಂದು “ಬೀದರ್ | ಪೋಷಕರಿಲ್ಲದ ಪ್ರತಿಭಾವಂತ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯಹಸ್ತ” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿದ ದಾನಿಗಳು ವಿದ್ಯಾರ್ಥಿನಿ ಓದಿಗೆ ಸಹಾಯ ಮಾಡಿದ್ದು, ಆರ್ಥಿಕ ನೆರವು ನೀಡಿದ್ದಾರೆ. ಎಲ್ಲರ ಸಹಕಾರದಿಂದ ವಿದ್ಯಾರ್ಥಿನಿ ಬಸವಜ್ಯೋತಿಗೆ ಬರೋಬ್ಬರಿ ₹2,35,940 ಸಂಗ್ರಹವಾಗಿದೆ. ವರದಿ ಪ್ರಕಟಿಸಿದ ಈ ದಿನ.ಕಾಮ್ ತಂಡಕ್ಕೆ ಶಾಲೆಯ ಮುಖ್ಯಶಿಕ್ಷಕ ಶಾಮಸುಂದರ ಖಾನಾಪೂರಕರ್ ಧನ್ಯವಾದ ಸಲ್ಲಿಸಿದರು.
ಮುಖ್ಯಶಿಕ್ಷಕ ಶಾಮಸುಂದರ ಖಾನಾಪೂರಕರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಸವಜ್ಯೋತಿಗೆ ರಾಜ್ಯದ ಹಲವು ಭಾಗಗಳಿಂದ ಪ್ರಜ್ಞಾವಂತರು ತಮ್ಮ ತಮ್ಮ ಕೈಲಾದಷ್ಟು ಆರ್ಥಿಕ ನೇರವು ನೀಡಿದ್ದರ ಪ್ರತಿಫಲವಾಗಿ ಇಂದು ಆಕೆ ಬೀದರ್‌ನ ಪ್ರತಿಷ್ಠಿತ ಜ್ಞಾನ ಸುಧಾ ವಿದ್ಯಾಲಯದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಕಾಲೇಜಿನ ಆಡಳಿತ ಮಂಡಳಿ ಅವರು ಕಾಲೇಜು ಮತ್ತು ವಸತಿ ಶುಲ್ಕದಲ್ಲಿ ಒಂದಿಷ್ಟು ವಿನಾಯತಿ ನೀಡಿದ್ದಾರೆ. ಸದ್ಯ ನಡೆದ ಘಟಕ ಪರಿಕ್ಷೆಯಲ್ಲಿ ಬಸವಜ್ಯೋತಿ ಉತ್ತಮ ಅಂಕ ಪಡೆದುಕೊಳ್ಳುತ್ತಿದ್ದಾಳೆಂದು ಕಾಲೇಜಿನ ಉಪನ್ಯಾಸಕರು ತಿಳಿಸಿರುವುದು ನಮೇಲ್ಲರ ಪ್ರಯತ್ನ ದಾನಿಗಳ ಸಹಕಾರ ಸಾರ್ಥಕವಾಗುತ್ತದೆ ಎನ್ನುವ ಬಲವಾದ ನಂಬಿಕೆ ಮೂಡುವಂತೆ ಮಾಡಿದೆ” ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಪ್ರಾಪ್ತೆಯನ್ನು ವಿವಾಹವಾದ ಸರ್ಕಾರಿ ಶಾಲೆ ಶಿಕ್ಷಕ; ಪ್ರಕರಣ ದಾಖಲು
ಸಾರ್ವಜನಿಕರ ಸಾಂಘಿಕ ಪ್ರಯತ್ನಕ್ಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ ಶೆಟಕಾರ ಸೇರಿದಂತೆ ಶಿಕ್ಷಕರುಗಳಾದ ಬಸವರಾಜ ಮಠಪತಿ, ಮಲ್ಲಿಕಾರ್ಜುನ ಟಂಕಸಾಲೆ, ಅನಿಲಕುಮಾರ ಮಾಟೆ, ಖುರ್ರಮ್ ಗುಲಾಮ, ಮುಸ್ತಫಾ ಆಜಾದ್, ಲಕ್ಷ್ಮಣರಡ್ಡಿ ಗಂಗಾಪೂರೆ, ತೇಜಸ್ವಿ ಚಾಂದಕವಠೆ, ಉದಯಕುಮಾರ್ ಹಾಗೂ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.