ಬೀದರ್ ಜಿಲ್ಲೆ ಹುಮನಾಬಾದ್ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಮಧ್ಯಪ್ರದೇಶ ಮೂಲದ ಇಂದ್ರಜಿತ್ (23) ಹಾಗೂ ತಾಲೂಕಿನ ವಡ್ಡನಕೇರಾ ಗ್ರಾಮದ ಮೊಹಮ್ಮದ್ ಶಾಬಾದ್ (21) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎಂಟು ಮಂದಿ ಅಸ್ವಸ್ಥರಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ತಡರಾತ್ರಿ ಪ್ರಸನ್ನ ಪ್ರೀ ಪ್ರೋಸೆಸಿಂಗ್ ಲಿಮಿಟೆಡ್ ಎಂಬ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಜನರು ತಾಲೂಕು ಆಸ್ಪತ್ರೆ ಎದುರು ಜಮಾವಣೆಗೊಂಡರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ್, ಸಿಪಿಐ ಗುರು ಪಾಟೀಲ ಭೇಟಿ ನೀಡಿ ಘಟಕದ ಕಾರ್ಯ ಸ್ಥಗಿತಗೊಳಿಸಿ ಸಂಬಂಧಿಸಿದವರನ್ನು ವಿಚಾರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕ್ಷೀಣಿಸುತ್ತಿರುವ ಕೃಷಿ, ಹೈನುಗಾರಿಕೆ; ರೈತರಲ್ಲಿ ಆತಂಕ
ಸುತ್ತಮುತ್ತಲಿನ ಪರಿಸರದಲ್ಲಿ ಗ್ಯಾಸ್ ಸೋರಿಕೆ ಆಗಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಪರೀಶಿಲಿಸಿದ್ದಾರೆ.