ಬೀದರ್ ಜಿಲ್ಲಾದ್ಯಂತ ಕಳೆದ ಮೂರು ದಿನಗಳಲ್ಲಿ ಮಳೆ ಅಬ್ಬರದಿಂದ ಜಿಲ್ಲೆಯಾದ್ಯಂತ 138 ಮನೆಗಳಿಗೆ ಹಾನಿ ಉಂಟಾಗಿದ್ದು, ಉದ್ದು, ಹೆಸರು ಹಾಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 7,775 ಹೆಕ್ಟೇರ್ ಬೆಳೆ ಹಾಳಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆ ಹಾನಿಯಾಗಿದೆ. ಈ ಎರಡು ತಾಲೂಕಿನಲ್ಲಿ 11 ದೊಡ್ಡ ಜಾನುವಾರು, 10 ಸಣ್ಣ ಜಾನುವಾರು ಸೇರಿ ಒಟ್ಟು 21 ಜಾನುವಾರು ಮೃತಪಟ್ಟಿವೆ.
ಭಾಲ್ಕಿಯಲ್ಲಿ ಅತಿ ಹೆಚ್ಚು 35 ಮನೆಗಳು ಬಿದ್ದಿವೆ. ಕಮಲನಗರ 22, ಔರಾದ್‌ನಲ್ಲಿ 20, ಬೀದರ್ ಹಾಗೂ ಚಿಟಗುಪ್ಪದಲ್ಲಿ ತಲಾ 12 ಮನೆಗಳು ಭಾಗಶಃ ಬಿದ್ದಿವೆ. ಹುಲಸೂರಿನಲ್ಲಿ 8, ಹುಮನಾಬಾದ್‌ನಲ್ಲಿ 7 ಮನೆಗಳಿಗೆ ಹಾನಿಯಾಗಿದೆ.
ಮಳೆಯಿಂದಾಗಿ ಜಿಲ್ಲೆಯಾದ್ಯಂತ 67 ಕಿ.ಮೀ. ರಸ್ತೆ ಹಾನಿಹಾಗಿದ್ದು, 15ಕ್ಕೂ ಹೆಚ್ಚು ಸೇತುವೆ, ಕಟ್ಟೆಗಳು ಕೊಚ್ಚಿಕೊಂಡು ಹೋಗಿವೆ. ಔರಾದ್, ಕಮಲನಗರದಲ್ಲಿ ಅತಿ ಹೆಚ್ಚು 37 ವಿದ್ಯುತ್ ಟ್ರಾನ್ಸ್‌ಫಾರ್ಮರ್, 151 ವಿದ್ಯುತ್ ಕಂಬಗಳು ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ನೀಡಿದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಒಟ್ಟು 138 ಅಂಗನವಾಡಿಗಳಿಗೆ ಹಾನಿಯಾಗಿದೆ. ಅದರಲ್ಲಿ ಬೀದರ್, ಭಾಲ್ಕಿಯಲ್ಲಿ ತಲಾ 38 , ಕಮಲನಗರ, ಔರಾದ್ ಅವಳಿ ತಾಲೂಕುಗಳಲ್ಲಿ 26, ಬಸವಕಲ್ಯಾಣದಲ್ಲಿ 18 ಹಾಗೂ ಹುಮನಾಬಾದ್, ಚಿಟಗುಪ್ಪ ಎರಡು ತಾಲೂಕುಗಳಲ್ಲಿ 13 ಅಂಗನವಾಡಿಗಳು ಮಳೆಯಿಂದ ಹಾನಿಗೀಡಾಗಿವೆ.
ಇದನ್ನೂ ಓದಿ : ಅತಿವೃಷ್ಟಿ ಹಾನಿ | ಔರಾದ ಕ್ಷೇತ್ರಕ್ಕೆ ವಿಶೇಷ ಅನುದಾನ ಕೊಡಿ : ಅಧಿವೇಶನದಲ್ಲಿ ಶಾಸಕ ಪ್ರಭು ಚವ್ಹಾಣ ಆಗ್ರಹ