ವಸತಿ ನಿಲಯ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸುವ ದಿಸೆಯಲ್ಲಿ ಅವರೊಂದಿಗೆ ಮನೋವೈದ್ಯರ ಮೂಲಕ ಪ್ರತಿವಾರ ಸಮಾಲೋಚನೆ ನಡೆಸಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಂಗಳವಾರ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಮತ್ತು ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣ ಪಾಟೀಲ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಜತೆಗೆ ತುರ್ತು ಸಭೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಿದ್ದಾರೆ.
ʼಔರಾದ್ ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನಲೆ ಜಿಲ್ಲೆಯ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಾಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ತಮ್ಮ ವ್ಯಾಪ್ತಿಯ ವಸತಿ ನಿಲಯಗಳಿಗೆ ಭೇಟಿ ನೀಡಬೇಕುʼ ಎಂದರು.
ʼವೈದ್ಯರು ವಸತಿ ನಿಲಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಅವರ ಚಲನವಲನಗಳಲ್ಲಿ ವ್ಯತ್ಯಾಸ, ಖಿನ್ನತೆಯಂತಹ ವಿಷಯಗಳು ಕಂಡುಬಂದಲ್ಲಿ ವೈದ್ಯರು ಹಾಗೂ ವಾರ್ಡನ್‌ಗಳು, ತಮ್ಮ ಇಲಾಖೆಯ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು. ಆ ಮೂಲಕ ಮಕ್ಕಳ ಆರೋಗ್ಯದ ಸ್ಥಿರತೆ ಕಾಪಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳು ಮತ್ತು ವಾರ್ಡನ್‌ಗಳ ಮಾಹಿತಿಯನ್ನು ಅಧಿಕಾರಿಗಳು ಒಂದೆರಡು ದಿನದಲ್ಲಿ ನೀಡಬೇಕು. ಹಾಸ್ಟೆಲ್‌ಗಳಿಗೆ ಆಯಾ ವ್ಯಾಪ್ತಿಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ನೇಣು ಬಿಗಿದು ಸರ್ಕಾರಿ ಶಾಲೆ ಶಿಕ್ಷಕ ಆತ್ಮಹತ್ಯೆ
ಮನೋವೈದ್ಯರಾದ ಡಾ.ಅಮಲ್ ಮತ್ತು ಡಾ.ರಾಘವೇಂದ್ರ, ಬಿಸಿಎಂ ಜಿಲ್ಲಾ ಅಧಿಕಾರಿ ಸಂಗೀತಾ ಬಿರಾದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.