ಪ್ರತಿದಿನ ನೂರಾರು ಜನರಿಗೆ ವಿಶೇಷ ರಿಯಾಯಿತಿ ದರದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳು ಕೆಲವು ವರ್ಷಗಳಿಂದ ಸೊರಗಿವೆ. ಬೀದರ್ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ 500-1000 ಜನರು ಭೇಟಿ ನೀಡುತ್ತಿದ್ದರು. ಇದೀಗ, ಆ ಸಂಖ್ಯೆ 100-200ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ‘ಇಂದಿರಾ ಕ್ಯಾಂಟೀನ್’ಗೆ ಮರುಜೀವ ತುಂಬಲು ಮುಂದಾಗಬೇಕಿದೆ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಿ ಬಡವರ ಹಸಿವು ನೀಗಿಸುವ ಮಹತ್ವದ ಕಾರ್ಯ ಮಾಡಿತ್ತು. ಅಂದಿನ ಸರ್ಕಾರಕ್ಕೆ ಭಾರೀ ಜನಪ್ರಿಯತೆ ತಂದುಕೊಟ್ಟ ಯೋಜನೆ ಕೂಡ ಇದಾಗಿತ್ತು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ನಂತರ ಇಂದಿರಾ ಕ್ಯಾಂಟೀನ್‌ಗಳು ಸೂಕ್ತ ನಿರ್ವಹಣೆ ಇಲ್ಲದೆ, ಇದ್ದೂ ಇಲ್ಲದಂತಾಗಿವೆ.
ಬೀದರ್ ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳಿವೆ. ಈ ಹಿಂದೆ ಇದ್ದ ಗುಣಮಟ್ಟದ ಆಹಾರ, ಸೂಕ್ತ ವ್ಯವಸ್ಥೆ, ಅನುದಾನ ನಿರ್ವಹಣೆ ಇಲ್ಲದ ಕಾರಣ 2019ರಿಂದ ಇವುಗಳ ಜನಪ್ರಿಯತೆ ಕುಗ್ಗಿದ್ದು, ಉಪಹಾರ ಸೇವಿಸಲು ಬರುವ ಜನರ ಸಂಖ್ಯೆ ಕಡಿಮೆಯಾಗಿದೆ.
ಹೊಸ ಇಂದಿರಾ ಕ್ಯಾಂಟೀನ್ ಬೇಡಿಕೆ:
ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆ ಮುಂಭಾಗ, ರೈಲ್ವೆ ನಿಲ್ದಾಣ ಎದುರುಗಡೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ಒಟ್ಟು ಮೂರು ಇಂದಿರಾ ಕ್ಯಾಂಟೀನ್‌ಗಳಿವೆ. ಪ್ರತಿದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಉಪಹಾರ ಹಾಗೂ ರಾತ್ರಿ ಊಟ ನೀಡಲಾಗುತ್ತದೆ. ಈ ಹಿಂದೆ ಮೂರು ಹೊತ್ತು 400-500 ಜನ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ದರದಲ್ಲಿ ಆಹಾರ ಸೇವಿಸುತ್ತಿದ್ದರು. ಆದರೆ 2018 ನಂತರ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಜನರ ಒಲವು ಕಡಿಮೆಯಾಗಿದೆ. ಇದೀಗ ಪ್ರತಿದಿನ 200 ಆಸುಪಾಸು ಜನ ಬರ್ತಾರೆ. ಜನರ ನಿರೀಕ್ಷೆಯಂತೆ ಉತ್ತಮ ನಿರ್ವಹಣೆ ಸೇರಿದಂತೆ ಆಹಾರದಲ್ಲಿ ಇನ್ನಷ್ಟು ಗುಣಮಟ್ಟ ಕಲ್ಪಿಸಿದರೆ ಎಂದಿನಂತೆ ಇಂದಿರಾ ಕ್ಯಾಂಟೀನ್ ತನ್ನ ಜನಪ್ರಿಯತೆ ಮರಳಿ ಪಡೆಯಬಹುದು ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಜೀತೆಂದ್ರ ಹೇಳುತ್ತಾರೆ.
ಬ್ರಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಬೀದರ್ ಜಿಲ್ಲಾ ಆಸ್ಪತ್ರೆಗೆ ಜಿಲ್ಲೆ ಅಲ್ಲದೆ ಪಕ್ಕದ ತೆಲಂಗಾಣದ ರೋಗಿಗಳು ಬರುತ್ತಾರೆ. ಹೀಗಾಗಿ ರೋಗಿಗಳ ಸಂಬಂಧಿಕರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ತುಂಬಾ ಉಪಯುಕ್ತವಾಗಿದೆ. ಗಾಂಧಿ ಗಂಜ್ ಹಾಗೂ ರೈಲ್ವೇ ಸ್ಟೇಷನ್ ಹತ್ತಿರದ ಕ್ಯಾಂಟೀನ್ ನಲ್ಲಿ ದೂರದ ಊರುಗಳಿಂದ ಬಂದ ಪ್ರಯಾಣಿಕರು, ಮಾರುಕಟ್ಟೆಗೆ ಬಂದ ರೈತರು, ಬೀದಿ ಬದಿ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು, ದಿನಗೂಲಿ ಕಾರ್ಮಿಕರು ಆಹಾರ ಸೇವಿಸುತ್ತಾರೆ.
ಈ ಸುದ್ದಿ ಓದಿದ್ದೀರಾ?: ಶಕ್ತಿ ಯೋಜನೆ | ಬಸ್ಸುಗಳಲ್ಲಿ ಮುಂಗಡ ಆಸನ ಕಾಯ್ದಿರಿಸಲು ಮಹಿಳೆಯರಿಗೆ ಅವಕಾಶ
ನಗರದ ಹೊಸ ಬಸ್ ನಿಲ್ದಾಣ ಹಾಗೂ ಓಲ್ಡ್ ಸಿಟಿಯ ಗವಾನ್ ಚೌಕ್, ಚೌಬಾರಾ ಅಥವಾ ನೂರು ಹಾಸಿಗೆ ಆಸ್ಪತ್ರೆ ಏರಿಯಾದಲ್ಲಿ ಹೆಚ್ಚಿನ ಜನರ ಓಡಾಟ ಇದೆ. ಹೀಗಾಗಿ ಎರಡು ಕಡೆಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಿಸಿದರೆ ಇನ್ನಷ್ಟು ಬಡಜನರ ಹೊಟ್ಟೆ ತುಂಬುವುದು ಅಲ್ಲದೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂಬುದು ಬಹುಜನರ ಬೇಡಿಕೆಯಾಗಿದೆ.
ಬಡವರ ಸ್ಟಾರ್ ಹೊಟೇಲ್ ಗಳೆಂದು ಕರೆಸಿಕೊಳ್ಳುವ ಇಂದಿರಾ ಕ್ಯಾಂಟೀನ್ ಗಳು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಮಳೆ ಬಂದರೆ ಸೋರುತ್ತಿವೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಟ್ಯಾಂಕರ್ ನೀರು ಬಳಸುವುದು ಅನಿವಾರ್ಯವಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತು ಜನರಿಗೆ ಆಹಾರ ನೀಡಲಾಗುತ್ತಿದೆ. ಆದರೆ ಸರ್ಕಾರ ಕ್ಯಾಂಟೀನ್ ಬಲವರ್ಧನೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
2017ರಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿ ರಾಜ್ಯದ ಬಡಜನರ ಹೊಟ್ಟೆ ತಣಿಸಿತು. ಆದರೆ ಸರ್ಕಾರ ಬದಲಾವಣೆಯಿಂದಾಗಿ ಅನುದಾನ ಕೊರತೆ ಉಂಟಾಗಿತ್ತು. ಮತ್ತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಲು ಮುಂದಾಗಿದೆ. ಅದೇ ರೀತಿ ರಾಜ್ಯಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಗಳ ಬಲವರ್ಧನೆಗೆ ಸರ್ಕಾರ ಮುಂದಾಗಿ ಬಡವರ ಸ್ಟಾರ್ ಹೊಟೇಲ್ ತೆರೆಯಬೇಕು ಎಂಬುದು ಗ್ರಾಹಕರ ಒಕ್ಕೊರಲ ದನಿ.