ಬೀದರ್ ತಾಲೂಕಿನ ಆಣದೂರ, ನಾಗೋರಾ ಹಾಗೂ ಕಮಠಾಣಾ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆ ಮಾಡದೇ ಅವ್ಯವಹಾರ ನಡೆದಿದ್ದು, ತಪ್ಪಿಸಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ) ಕಾರ್ಯಕರ್ತರು ಒತ್ತಾಯಿಸಿ ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದರು.
“ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಇರುವ 14ನೇ, 15ನೇ ಹಣಕಾಸು ಯೋಜನೆ, ಮನರೇಗಾ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರದೆ ಮನಬಂದಂತೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಬೀದರ್ ತಾಲೂಕಿನ ಆಣದೂರ, ಕಮಠಾಣಾ ಹಾಗೂ ನಾಗೋರಾ ಗ್ರಾಮ ಪಂಚಾಯತ್ ಪಿಡಿಒ, ಡಾಟಾ ಆಪರೇಟರ್ ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್‌ಗಳು ಶಾಮೀಲಾಗಿ ಸುಮಾರು ವರ್ಷಗಳಿಂದ ಕಳಪೆ ಕಾಮಗಾರಿ ನಡೆಸಿ ಸರ್ಕಾರದ ಅನುದಾನ ಬಳಸದೆ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ತಾಲೂಕು ಪಂಚಾಯತ್ ಇಒಗೆ ಮನವಿ ಪತ್ರ ಸಲ್ಲಿಸಿ ಆರೇಳು ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ” ಎಂದು ಕಾರ್ಯಕರ್ತರು ಆರೋಪಿಸಿದರು.
“ಸರ್ಕಾರದ ಹಣ ಲೂಟಿ ಹೊಡೆಯಲು ತಾಲೂಕು ಪಂಚಾಯತ್ ಇಒ ಅವರೇ ರಕ್ಷಣೆ ನೀಡುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಈಗಾಗಲೇ ಅಮಾನತಾದ ತಾ. ಪಂ. ಇಒ ಮಾಣಿಕರಾವ ಪಾಟೀಲ್ ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು. ಸದರಿ ಪಂಚಾಯತ್‌ಗಳಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಅವ್ಯವಹಾರ ಎಸಗಿದ ಪಿಡಿಒ, ಸಹಾಯಕ ಎಂಜಿನಿಯರ್ ಹಾಗೂ ಎಂ ಎಸ್ ಕೋ ಆರ್ಡಿನೇಟರ್ ಅವರನ್ನು ಕೂಡಲೇ ವಜಾಗೊಳಿಸಬೇಕು. ಇಂಥ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಮುಂದುವರೆದಲ್ಲಿ ಹಲವು ಸಂಘಟನೆಗಳ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮೊಗೇರ ಸಮುದಾಯವನ್ನು ಪ್ರವರ್ಗ-1ರ ಪಟ್ಟಿಯಿಂದ ಕೈಬಿಡದಂತೆ ದಸಂಸ ಆಗ್ರಹ
ಕರವೇ ಜಿಲ್ಲಾಧ್ಯಕ್ಷ ಅಮೃತ ಮುತ್ತಂಗಿಕರ್, ತಾಲೂಕು ಅಧ್ಯಕ್ಷ ಸುನೀಲ ಚಂದಾ, ಕರ್ನಾಟಕ ಪ್ರಜಾ ಶಕ್ತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರಾದ ರಮೇಶ್ ಪಾಸ್ವಾನ್, ಪ್ರಶಾಂತ ಭಾವಿಕಟ್ಟಿ, ರಾಜಕುಮಾರ್ ಭಾವಿದೊಡ್ಡಿ, ಗೌತಮ ಮುತ್ತಂಗಿಕರ್, ಶಿವಸಾಗರ, ಪುಟ್ಟರಾಜ ದೀನೆ, ಸಂತೋಷ ಏಣಕೂರ, ಪ್ರಶಾಂತ ಹೊನ್ನಾ ಸೇರಿದಂತೆ ಇತರರಿದ್ದರು.