ಜನಿವಾರ ಧರಿಸಿದ ಕಾರಣಕ್ಕೆ ಕೆ-ಸಿಇಟಿ ಗಣಿತ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತನಾದ ವಿದ್ಯಾರ್ಥಿ ಸುಚಿವೃತ್ ಕುಲಕರ್ಣಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ, ಆತ್ಮಸ್ಥೈರ್ಯ ತುಂಬಿದರು.
ರವಿವಾರ ಬೆಳಿಗ್ಗೆ ಸಚಿವ ರಹೀಂ ಖಾನ್ ಅವರ ಜೊತೆಯಲ್ಲಿ ಸುಚಿವೃತ್ ಕುಲಕರ್ಣಿ ಮನೆಗೆ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ಈಶ್ವರ ಖಂಡ್ರೆ ಅವರು, ‘ಖಾಸಗಿ ಕಾಲೇಜಿನ ಸಿಬ್ಬಂದಿಯಿಂದ ಇಂತಹ ಲೋಪವಾಗಿದ್ದು, ಇದು ನೋವಿನ ಸಂಗತಿ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ’ ಎಂದರು.
‘ಇಂತಹ ಒಂದು ಘಟನೆ ನಡೆಯಬಾರದಾಗಿತ್ತು. ಈ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಿದೆ’ ಎಂದರು.
ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬುದು ಎಲ್ಲರ ಭಾವನೆ, ಹೀಗಾಗಿ ಭಾಲ್ಕಿಯ ನನ್ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟ್ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಜನಿವಾರ ವಿವಾದ | ಒಂದು ಕೈಯಲ್ಲಿ ದೊಣ್ಣೆ, ಮತ್ತೊಂದು ಕೈಯಲ್ಲಿ ಬೆಣ್ಣೆ – ಇದು ಬಿಜೆಪಿ ನೀತಿ
ಸುಚಿವ್ರತ್‌ಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಅವಕಾಶವಿದೆಯೇ ಎಂಬ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ ಈಶ್ವರ ಖಂಡ್ರೆ ವಿದ್ಯಾರ್ಥಿಗೆ ಕಾಮೆಡ-ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶವಿದೆ. ಆ ಸೀಟು ಲಭಿಸಿದರೂ ನೆರವು ನೀಡಲಾಗುವುದು, ಸರ್ಕಾರ ನೊಂದ ವಿದ್ಯಾರ್ಥಿ ಮತ್ತು ಕುಟಂಬದ ಸದಸ್ಯರೊಂದಿಗಿದೆ’ ಎಂದು ತಿಳಿಸಿದರು.