ಸಮಕಾಲೀನ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರಭಾವಿಸಿದ್ದು ಹಾಗೂ ನಿರ್ದೇಶಿಸಿದ್ದು ಇಂದಿನ ಮಾರುಕಟ್ಟೆ, ಆಧುನಿಕತೆಯು ಮಾರುಕಟ್ಟೆ ಕೇಂದ್ರಿತವಾದಾಗ ಮನುಷ್ಯನ ಮೌಲ್ಯ ಗೌಣವಾಗುತ್ತದೆ ಎಂದು ಹಿರಿಯ ಚಿಂತಕಿ ಪ್ರೊ. ಮೀನಾಕ್ಷಿ ಬಾಳಿ ಹೇಳಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ಶಿಕ್ಷಣ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ. ಜಯದೇವಿತಾಯಿ ಲಿಗಾಡೆ ಜನ್ಮದಿನ ಹಾಗೂ ಪ್ರತಿಷ್ಠಾನದ 73ನೇ ಉಪನ್ಯಾಸ ಮಾಲೆಯಲ್ಲಿ ‘ಆಧುನಿಕತೆ ಮತ್ತು ಮಹಿಳೆ’ ವಿಷಯದ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಮಹಿಳೆ ತನ್ನ ಆಲೋಚನೆಯಲ್ಲಿ, ಅಂತರಂಗದಲ್ಲಿ ಬದಲಾವಣೆ ತರುವ ಮೂಲಕ ಆಧುನಿಕಗೊಳ್ಳಬೇಕು. ಆಧುನಿಕತೆ ಭೌತ ಬದುಕಿನಲ್ಲಿ ಬಂದಷ್ಟು ಭಾವನಾತ್ಮಕ ಬದುಕಿನಲ್ಲಿ ಬಂದಿಲ್ಲ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಲವು ಅನಿಷ್ಟಗಳನ್ನು, ಮೌಢ್ಯಗಳನ್ನು ತೊಡೆದು ಹಾಕಿದ್ದು ಆಧುನಿಕ ಸಾರ್ವತ್ರಿಕ ಶಿಕ್ಷಣ” ಎಂದು ಹೇಳಿದರು.
“ಭಾರತೀಯ ಸುಧಾರಣಾವಾದಿಗಳು ವಿರೋಧಿಸಿದ ಬಾಲ್ಯವಿವಾಹ, ವಿಧವಾ ಪದ್ದತಿ ಆಧುನಿಕತೆಯ ಬಿಂಬವಾಗಿವೆ. ಶಿಕ್ಷಿತರು, ತಿಳುವಳಿಕೆಯುಳ್ಳವರು, ಅರಿವು ಇರುವವರು ತಮ್ಮ ಕಾಲಘಟ್ಟದಲ್ಲಿನ ಸಂಧರ್ಭದಲ್ಲಿನ ಅನ್ಯಾಯದ ವಿರುದ್ಧ ದನಿ ಎತ್ತಬೇಕು. ತಮ್ಮ ಇಡೀ ಸಂಪತ್ತು, ಹಣ, ಆಸ್ತಿ ದುಡಿವ ಜನರಿಗೆ ಕೊಟ್ಟ ಜಯದೇವಿತಾಯಿ ಲಿಗಾಡೆ ನಮ್ಮ ನಾಡಿನ ಅತಿಮಬ್ಬೆ. ಅವರಿಗೆ ವಚನಗಳೇ ಪ್ರೇರಣೆಯಾಗಿವೆ” ಎಂದು ನುಡಿದರು.
“ಆಧುನಿಕೋತ್ತರ ಕಾಲಘಟ್ಟದಲ್ಲಿ ನಾವು ನಿಂತಿದ್ದರೂ ನಮ್ಮ ಮನಸ್ಸು ಸಾವಿರಾರು ವರ್ಷಗಳ ಹಿಂದೆ ಹೋಗುತ್ತಿರುವುದು ವಿಪರ್ಯಾಸ. ಶರಣರು, ಸೂಫಿ, ಸಂತ, ಶಾಕ್ತ, ನಾಥ ಇಂಥಹ ಬಹು ವಿಚಾರಗಳ, ಬಹುಧಾರೆಯ ಸಂಸ್ಕೃತಿಯಲ್ಲಿರುವ ನಾವು ಹೆಚ್ಚು ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕಿದೆ. ಹಲವು ಕಾಲದಿಂದ ಪ್ರಭುತ್ವಕ್ಕೆ, ಅಧಿಕಾರಕ್ಕೆ, ಹಣ, ಆಸ್ತಿಗೆ, ಸಂಪತ್ತಿಗೆ ಗೌರವಿತ್ತೇ ಹೊರತು ಮನುಷ್ಯನಿಗೆ ಗೌರವವಿರಲಿಲ್ಲ. ಬದುಕಲು ಬೇಕಾದ ಸಾಧನಗಳನ್ನೇ ಆಸ್ತಿ ಮಾಡಿಕೊಂಡಿದ್ದೆವೆ. ನಿಜವಾದ ಆಸ್ತಿ ಮನುಷ್ಯನ ಬುದ್ದಿ ಮತ್ತು ಬೆವರು ಮನುಷ್ಯನ ನಿಜವಾದ ಸಾಮರ್ಥ್ಯ” ಎಂದರು.
“ಮನುಷ್ಯನನ್ನು ಹೆಚ್ಚು ತಾರ್ಕಿಕವಾಗಿ, ತಾತ್ವಿಕವಾಗಿ ಗೌರವಿಸಿದ್ದು ಶರಣರು. ಸಂಪ್ರದಾಯದ ಕುಟುಂಬದಲ್ಲಿ ಹುಟ್ಟಿ ಮದುವೆಯಾಗಿದ್ದರೂ ಹೆಚ್ಚು ಪ್ರಗತಿಪರವಾಗಿದ್ದವರು ಜಯದೇವಿತಾಯಿ ಲಿಗಾಡೆ. ಕರ್ನಾಟಕ ಏಕೀಕರಣ, ಸ್ವಾತಂತ್ರ ಚಳುವಳಿಯ ಸಂಧರ್ಭದಲ್ಲಿ ಒಂದು ಸಂಸ್ಥೆಯಾಗಿ ದುಡಿದವರು ಲಿಗಾಡೆಯವರು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧರ್ಮ ಶಾಲಾ ಕಟ್ಟಡ ಅತಿಕ್ರಮಣ; ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ಅಕ್ಷರಸ್ಥಳಾಗಿ ಉದ್ಯೋಗಸ್ಥೆಯಾಗುತ್ತಿರುವದು ಮಹಿಳೆಗೆ ಆರ್ಥಿಕ, ಸಾಮಾಜಿಕ ಪ್ರಾಧ್ಯಾನ್ಯತೆ ದೊರೆತಿದೆ. ಕಾರ್ಪೊರೇಟೀಕರಣಗೊಂಡ ಸಾಂಸ್ಥಿಕತೆಯಲ್ಲಿ ಮಹಿಳೆ ಸಿಲುಕಿ, ಮಾರುಕಟ್ಟೆ ನಿರ್ದೇಶಿತ ಜಾಹಿರಾತು, ಸೌಂದರ್ಯದ ಭ್ರಮೆಗಳು ಮಹಿಳೆಗೆ ಮತ್ತೊಂದು ಬಗೆಯ ಶೋಷಣೆಗೆ ಒಳಗಾಗುವಂತೆ ಮಾಡುತ್ತಿವೆ. ವಚನಗಳ, ಸಾಹಿತ್ಯ ಮತ್ತು ಸಾಹಿತ್ಯ ಸಿದ್ದಾಂತಗಳ ಅಧ್ಯಯನದಿಂದ ಮಹಿಳೆಯು ಆಧುನಿಕ ಬಿಕ್ಕಟ್ಟುಗಳಿಂದ ಪಾರಾಗಬಹುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಡಿನ ಹಿರಿಯ ಚಿಂತಕಿ ಡಾ. ಮೀನಾಕ್ಷಿ ಬಾಳಿ ಅವರನ್ನು ಪ್ರತಿಷ್ಠಾನದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಅಶೋಕ ಕುಮಾರ ವಣಗೇರೆ, ಬಿಇಟಿ ಕುಲಸಚಿವ ಪ್ರೇಮಸಾಗರ ಪಾಟೀಲ, ಕಲಬುರಗಿಯ ನಿಲಾಂಬಿಕಾ, ಸುವರ್ಣ ಮೊದಲಾದವರು ಇದ್ದರು.