ಜನರ ಜೀವನ ಮಟ್ಟ ಮತ್ತು ಕೌಶಲ್ಯವೃದ್ಧಿಗೆ ಸಾಕ್ಷರತೆ ಬಹಳ ಮುಖ್ಯ. ಆಧುನಿಕ ಸಮಾಜದಲ್ಲಿ ನಿತ್ಯ ಬದುಕಿನ ಸಾಧನವಾದ ಶಿಕ್ಷಣವು ಬಡತನದ ವಿರುದ್ಧ ಹೋರಾಡಲು ಅಸ್ತ್ರವಾಗಿದೆ ಎಂದು ಔರಾದ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಓಂಪ್ರಕಾಶ್ ದಡ್ಡೆ ಅಭಿಪ್ರಾಯಪಟ್ಟರು.
ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಂತಪೂರ ಗ್ರಾಮದ ಜನತಾ ಪ್ರವೀಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಸಾಕ್ಷರತಾ ಜಾಥಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರಾಚೀನ ಕಾಲದಲ್ಲಿ ನಮ್ಮ ದೇಶವು ಜ್ಞಾನ ಮತ್ತು ವಿಜ್ಞಾನದ ಅಧ್ಯಯನದಲ್ಲಿ ಪ್ರವರ್ತಕನಾಗಿದ್ದರಿಂದ ವಿಶ್ವಗುರು ಸ್ಥಾನವನ್ನು ಹೊಂದಿತ್ತು. ಅದನ್ನು ಮತ್ತೆ ಪಡೆಯಲು ಶಿಕ್ಷಣಕ್ಕೆ ಉತ್ತೇಜನ ನೀಡುವುದು ಅಗತ್ಯವಾಗಿದೆ” ಎಂದರು.
ಜಿಲ್ಲಾ ಸಾಕ್ಷರತಾ ಅಧಿಕಾರಿ ಶಿವರಾಜ ಪಾಟೀಲ ಮಾತನಾಡಿ, “ಸಂಪೂರ್ಣ ಸಾಕ್ಷರತೆ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನ ಒಳಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಸಂಪೂರ್ಣ ಸಾಕ್ಷರತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಂಘ ಸಂಸ್ಥೆಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಪತ್ರಕರ್ತ ಪರಮೇಶ ವಿಳಸಪೂರೆ ಮಾತನಾಡಿ, “ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಯಾವುದೇ ವಯಸ್ಸಿನಲ್ಲಿ ಎಲ್ಲರೂ ಎಲ್ಲರಿಗಾಗಿ ಕಲಿಸಬೇಕು. ಇದರಿಂದ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಬಹುದು, ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಶಿವರಾಜ ಜುಕಾಲೆ, ತಾಲೂಕು ಸಾಕ್ಷರತಾ ಅಧಿಕಾರಿ ವೆಂಕಟ್ ಕೋಳೆಕರ್, ಶಿವರಾಜ ಮಲ್ಕಾಪುರೆ, ರಮೇಶ್, ಕಲಾವಿದ ದೇವಿದಾಸ ಚಿಮ್ಕೊಡ್, ಬಕ್ಕಪ್ಪಾ ದಂಡಿನ್, ವಿರಶೆಟ್ಟಿ ಹಾಗೂ ಹಲವರು ಇದ್ದರು.