ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರಜ್ಞಾವಂತ ನಾಗರಿಕರ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
“ಆಧುನಿಕ ದಿನಗಳಲ್ಲಿ ಮಣಿಪುರದಲ್ಲಿ ಅನಾಗರಿಕ ಪೈಶಾಚಿಕ ಘಟನೆ ನಡೆದಿರುವುದು ಭಾರತೀಯರನ್ನು ಆಘಾತಕ್ಕೆ ತಳ್ಳಿದೆ. ದೇಶದ ಅಂತಃಸಾಕ್ಷಿಯನ್ನು ಕಲಕಿದೆ. ಇದಕ್ಕಿಂತ ಅಘಾತಕಾರಿ ವಿಷಯವೆಂದರೆ ಈ ಘಟನೆ ಮೇ ತಿಂಗಳಿನಲ್ಲಿ ಘಟಿಸಿದ್ದು, ದೇಶದ ಪ್ರಜೆಗಳಾದ ನಮಗೆ ಜೂಲೈ ತಿಂಗಳಿನಲ್ಲಿ ತಿಳಿದಿರುವು ಇನ್ನೂ ಅಘಾತಕಾರಿ. ಆದರೆ ಅಲ್ಲಿನ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲೀ ಮೂರು ತಿಂಗಳುಗಳು ಕಳೆದರೂ ಒಂದು ಪುಟ್ಟ ರಾಜ್ಯದಲ್ಲಿ ಎರಡು ಸಮುದಾಯಗಳ ಮಧ್ಯದ ಜನಾಂಗೀಯ ಘರ್ಷಣೆ ಶಮನಗೊಳಿಸದೆ ಇರುವುದು ದುರಂತವೇ ಸರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು

“ಕೇಂದ್ರ ಸರ್ಕಾರ ಮಣಿಪುರ ರಾಜ್ಯದಲ್ಲಿ ಅಂತರ್ಜಾಲ ಸೇವೆ ರದ್ದುಗೊಳಿಸಿದಕ್ಕಾಗಿ ಸಾಮಾಜಿಕ ಜಾಲತಾಣದ ಮುಖಾಂತರ ದೇಶಕ್ಕೆ ಅಲ್ಲಿನ ಬರ್ಬರ ಹಿಂಸೆ ತಿಳಿಯದಂತಾಗಿದ್ದು, ಅತ್ಯಂತ ಖೇದಕರ ಸಂಗತಿ. ನಮ್ಮದೇ ಸಹೋದರ, ಸಹೋದರಿಯರು ಪೈಶಾಚಿಕತೆಯ ನರ್ತನಕ್ಕೆ ನಲುಗಿ ಹೋದರೂ ನಾವುಗಳ್ಯಾರು ಅವರ ಸಹಾಯಕ್ಕೆ ಆಗಲ್ಲಿಲ್ಲ ಎಂಬ ಅಪರಾಧದ ಭಾವ ದೇಶದ ಪ್ರತಿಯೊಬ್ಬ ಪ್ರಜೆಗೂ ಕಾಡುತ್ತಿದೆ. ಭಾರತ ಭೌಗೋಳಿಕವಾಗಿ ಜಗತ್ತಿನಲ್ಲಿ ಏಳನೇ ದೊಡ್ಡದೇಶ. ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಆರ್ಥಿಕತೆಯಲ್ಲಿ ಐದನೇ ದೊಡ್ಡ ದೇಶ. ಈ ಎಲ್ಲ ಅನುಪಾತದಲ್ಲಿ ದೇಶ ಆಂತರಿಕ ಹಾಗೂ ಬಾಹ್ಯ ರಕ್ಷಣಾ ವ್ಯವಸ್ಥೆ ಹೊಂದಿದೆ. ಆದರೆ ಇವುಗಳಾವೂ ಕೂಡ ಮಣಿಪುರದ ದುರ್ದೈವಿಗಳ ರಕ್ಷಣೆಗೆ ಬಾರದೆ ಇರುವುದು ಭಾರತೀಯರ ಕಳವಳಕ್ಕೆ ಕಾರಣವಾಗಿದೆ” ಎಂದರು.
“ಭಾರತಿಯರಾಗಿರುವ ನಮಗೆ ವಿದೇಶಿಗರು ನಿಮ್ಮ ದೇಶದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿರುವ ಸುದ್ದಿ ನಿಜನಾ? ಅಂತ ಕೇಳಿದಾಗ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಒಂದು ಪುಟ್ಟ ರಾಜ್ಯದ ಹಿಂಸಾಚಾರ ತಡೆಯಲಾಗದಕ್ಕೆ ಅಲ್ಲಿನ ಅಮಾನುಷ್ಯಕರ ಘನಘೋರ ಅಪರಾಧದ ಸುದ್ದಿಗಳನ್ನು ತಡೆಯಲಾಗಿತಾ? ಎಂಬ ಪ್ರೆಶ್ನೆ ಮೈನಡಗಿಸುತ್ತಿದೆ. ಇದೆಲ್ಲಾ ಉದ್ದೇಶಪೂರ್ವಕವಾಗಿ ನಡೆದಿರುವ ಹುನ್ನಾರವೇ? ಎಂಬ ಸಂಶಯ ಮೂಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಸರ್ಕಾರಗಳು ಹಿಂಸಾಚಾರ ತಡೆಯುವಲ್ಲಿ ವಿಫಲವಾದವೇ? ಮಣಿಪುರದ ಮಹಿಳೆಯರ ಮಾನ, ಪ್ರಾಣ ರಕ್ಷಿಸುವಲ್ಲಿ ವಿಫಲವಾದವೇ? ಈ ಮೂಲಕ ದೇಶದ ಪ್ರಜೆಗಳ ವಿಶ್ವಾಸ ಕಳೆಯುವಂತೆ ಮಾಡಿವೆ. ರಾಜ್ಯದ ಪೊಲೀಸ್ ವ್ಯವಸ್ಥೆ ರಾಷ್ಟ್ರದ ಸೈನ್ಯ ವ್ಯವಸ್ಥೆ ಈ ಹಿಂಸಾಚಾರ ತಡೆಯಲು ವಿಫಲಾಗಿವೆ. ಇದೆಲ್ಲ ಸುಸಂಸ್ಕೃತ ಭಾರತ ನಮ್ಮ ದೇಶದಲ್ಲಿ ನಡೆದಿದೆಯೇ? ಎಂದು ಬೆರಗುಗೊಳಿಸುತ್ತಿದೆ” ಎಂದರು.

“ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಹೇಯ ಕೃತ್ಯ ಜರುಗಿದರೂ ಮಹಿಳಾ ರಾಷ್ಟ್ರಪತಿ ತುಟಿ ಬಿಚ್ಚುವುದಿಲ್ಲ. ಈ ದೇಶದಲ್ಲಿ ಅದೆಷ್ಟೇ ಅನ್ಯಾಯ, ಅತ್ಯಾಚಾರ, ಕೊಲೆಗಳು ನಡೆದರೂ ಪ್ರತಿರೋಧ ನೀಡದ ರಾಷ್ಟ್ರಪತಿಯವರು ಕೂಡಲೇ ರಾಜಿನಾಮೆ ನೀಡಬೇಕು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ರಾಜಿನಾಮೆ ಕೊಟ್ಟು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಣಿಪುರ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ಮಣಿಪುರದ ಪ್ರಜೆಗಳಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ದೇಶದ ಪ್ರಜೆಗಳಲ್ಲಿ ವಿಶ್ವಾಸ ತುಂಬಬೇಕು. ಅಮಾನವೀಯ ಕೃತ್ಯದಲ್ಲಿ ತೊಡಗಿದ ರಾಕ್ಷಸರನ್ನು ದಂಡಿಸಬೇಕು. ಈ ಮೂಲಕ ದುಷ್ಟ ಶಕ್ತಿಗಳಿಗೆ ಸದೆಬಡಿದು ನಾಗರಿಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕು. ಮಣಿಪುರದಲ್ಲಿ ನಡೆಯುತ್ತಿರುವ ಆಂತರಿಕ ಕಲಹ ತಡೆದು, ಶಾಂತಿ ಸ್ಥಾಪಿಸಲು ಸರ್ಕಾರ ಕೂಡಲೇ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಭಾರತದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ ಸಮಯೋಚಿತವಾದ ಮುಂದಾಲೋಚನೆಯ ತುರ್ತು ಹೆಜ್ಜೆಗಳನ್ನಿಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಾಲಕಿ ಮೇಲೆ ಅತ್ಯಾಚಾರ | ಶಾಲೆ ಮುಚ್ಚುವಂತೆ ಶಿಫಾರಸು ಮಾಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಪ್ರತಿಭಟನೆಯಲ್ಲಿ ಪ್ರಜ್ಞಾವಂತ ನಾಗರಿಕರ ವೇದಿಕೆ ಸಂಚಾಲಕ ಓಂಪ್ರಕಾಶ ರೊಟ್ಟೆ, ಸಹ ಸಂಚಾಲಕರು ಜಗದೀಶ್ವರ ಬಿರಾದರ, ಅಬ್ದುಲ್ ಖದೀರ್, ಅನಿಲ್ ಕುಮಾರ ಬೆಲ್ದಾರ್, ವಿನೋದ್ ರತ್ನಾಕರ್, ಎಂ ಡಿ ಆಸೀಫ್, ಪೂಜ್ಯ ಸತ್ಯದೇವಿ ಮಾತಾಜಿ, ಹುಲಸೂರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿ, ನಫ್ರಾನ್ ನಿಶಾ ಖನಂ, ವೇದಮಣಿ ವೀರಶೆಟ್ಟಿ, ಮಂಜುಳಾ ಮ್ಯಾಥೂಶೀಲ್, ರೆವರೆಂಡ್ ನೆಲ್ಸನ್ ಸುಮಿತ್ರಾ, ಡಿ. ನಿಜಾಮೋದ್ದಿನ್, ಶ್ರೀಕಾಂತ್ ಸ್ವಾಮಿ, ಗಂಗಮ್ಮಾ ಫುಲೆ, ಪ್ರಕಾಶ್ ರಾವಣ, ಮಲ್ಲಮ್ಮ ಸಂತಾಜೀ, ರಾಜಕುಮಾರ್ ಕೋಳಾರ, ಸಂಜಯ ಜಾಗಿರದಾರ್, ಎಂ ಡಿ ಜೈಪಾಲ್, ಅನಿಲ ನಿಡೋದಾ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.