ಔರಾದ ವಿಧಾನಸಭಾ ಕ್ಷೇತ್ರದ ಚಿಮ್ಮೆಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ರೈತರು ಮತ್ತು ಸಾರ್ವಜನಿಕರು ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕಪ್ರಭು ಬಿ.ಚವ್ಹಾಣ ಆಗ್ರಹಿಸಿದ್ದಾರೆ.
ಈ ಕುರಿತು ಗಣಿ ಮತ್ತು ಭೂವಿಜ್ಞಾನಗಳ ಇಲಾಖೆಯ ಹಿರಿಯ ಭೂವಿಜ್ಞಾನಿಗಳಿಗೆ ಪತ್ರ ಬರೆದಿರುವ ಅವರು ‘ಮೇಘನಾ ಕನ್ಸ್‌ಟ್ರಕ್ಷನ್ಸ್ ಎಂಬ ಸಂಸ್ಥೆಯವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇಲ್ಲಿಂದ ಹೊರಬರುತ್ತಿರುವ ವಿಪರೀತ ಧೂಳಿನಿಂದಾಗಿ ಸುತ್ತನಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರಿಗೆ ಮಾರಕವಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.
‘ದೊಡ್ಡ ಪ್ರಮಾಣದ ಯಂತ್ರಗಳನ್ನು ಬಳಸುತ್ತಿರುವುದರಿಂದ ಬೆಳೆಗಳು ಧೂಳಿನಿಂದ ಆವರಿಸಿ ಬೆಳೆನಷ್ಟವಾಗುತ್ತಿದೆ. ಗಣಿಗಾರಿಕೆ ಆರಂಭವಾದಾಗಿನಿಂದ ಆದಾಯ ಸಿಗದೇ ನಮಗೆ ಅನ್ಯಾಯವಾಗುತ್ತಿದೆ ಎಂದು ಬಹಳಷ್ಟು ರೈತರು ನನ್ನ ಬಳಿಗೆ ಬಂದು ಸಮಸ್ಯೆ ತೊಡಿಕೊಳ್ಳುತ್ತಿದ್ದಾರೆ. ಈ ಮಾರ್ಗದಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತವೆ. ಗಣಿಯಿಂದ ಹೊರಬರುವ ಧೂಳು ರಸ್ತೆಯ ಮೇಲೆ ಆವರಿಸುವುದರಿಂದ ವಾಹನ ಸವಾರರ ಕಣ್ಣುಗಳಲ್ಲಿ ಧೂಳು ಬಿದ್ದು, ಸಂಚರಿಸಲು ಪರದಾಡುವ ಪರಿಸ್ಥಿತಿಯಿದೆ. ಈ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಸಾಕಷ್ಟು ಬಾರಿ ನೋಟಿಸ್ ಕೊಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಜನತೆ ಹೇಳುತ್ತಿದ್ದಾರೆ’ ಎಂದಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಚಿಮ್ಮೆಗಾಂವ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತುರ್ತಾಗಿ ನಿಲ್ಲಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.