ಭಾಲ್ಕಿ ತಾಲೂಕಿನ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿ ಸರಕಾರದ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಸಾಗರ ಖಂಡ್ರೆ
ಹೇಳಿದರು.
ಭಾಲ್ಕಿ ಪಟ್ಟಣದ ಪುರಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ 2025-26ನೆಯ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ʼತಾಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ ಆಗುತ್ತಿದೆ. ಹಾಗಾಗಿ ರೈತರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಈ ಬಾರಿಯ ಮುಂಗಾರು ಹಂಗಾಮು ಆಶಾಯದಾಕದ ನಿರೀಕ್ಷೆಯಿದ್ದು ಬಿತ್ತನೆ ಬೀಜ
ಮತ್ತು ರಸಗೊಬ್ಬರ ಸಮರ್ಪಕ ಪೂರೈಕೆಗೆ ಸರಕಾರ ಕ್ರಮ ಕೈಗೊಂಡಿದೆʼ ಎಂದರು.
ʼರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರದ ಬಗ್ಗೆ ಆತಂಕ ಪಡಬೇಕಿಲ್ಲ. ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ಲಭ್ಯತೆ ಇರಲಿದೆ. ಕೃಷಿ ಅಧಿಕಾರಿಗಳು ರೈತರಿಗೆ ಯಾವುದೇ ಕಾರಣಕ್ಕೂ ಬಿತ್ತನೆ ಬೀಜದ ಕೊರತೆ ಆಗದಂತೆ ನೋಡಿಕೊಳ್ಳಬೇಕುʼ ಎಂದು ತಿಳಿಸಿದರು.

ʼರೈತರನ್ನು ಆತ್ಮನಿರ್ಭರಗೊಳಿಸುವುದು ನಮ್ಮ ಮುಖ್ಯ ಗುರಿ. ಮುಂಗಾರು ಬೆಳೆಗಳಿಗೆ ಅಗತ್ಯವಾದ ಎಲ್ಲಾ ವಿಧದ ಬಿತ್ತನೆ ಬೀಜಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ, ಸರಿಯಾದ ಸಮಯದಲ್ಲಿ, ರಿಯಾಯಿತಿ ದರದಲ್ಲಿ ವಿತರಿಸಬೇಕುʼ ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನದ ಅಧ್ಯಕ್ಷ ಹಣಮತರಾವ ಚವ್ಹಾಣ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಬಸವಕಲ್ಯಾಣ ಕೃಷಿ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಬಿರಾದಾರ್, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ರಮೇಶ ಪಾಟೀಲ್, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಕೆವಿಕೆ ಮುಖ್ಯಸ್ಥ ಡಾ.ಆರ್.ಎಲ್.ಜಾಧವ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ : ಬೀದರ್ | ಸಂಘಟಿತರಾಗಿ ಅಸಮಾನತೆ ವಿರುದ್ಧ ಹೋರಾಡಿ : ಸಚಿವ ಈಶ್ವರ ಖಂಡ್ರೆ
ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಆಕಾಶ ಹಿಲಾಲಪೂರೆ ವಂದಿಸಿದರು.