ಗುಂಡಿ ಬಿದ್ದ ರಸ್ತೆಗಳ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು, ಕೊನೆಗೆ ಸ್ವಂತ ಹಣದಲ್ಲಿ ರಸ್ತೆ ಗುಂಡಿಗೆ ಮಣ್ಣು ಹಾಕಿ ದುರಸ್ತಿ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಬೀದರ್‌ದಿಂದ ಔರಾದ್ ತಾಲ್ಲೂಕಿನ ಕಂದಗೂಳ-ಖಾನಾಪುರ ಮಾರ್ಗವಾಗಿ ವಡಗಾಂವ್ ಮುಖಾಂತರ ತೆಲಂಗಾಣ ರಾಜ್ಯದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಆಳವಾದ ಗುಂಡಿಗಳನ್ನು ಕಂದಗೂಳ-ಖಾನಾಪುರ ಗ್ರಾಮಗಳ ಗ್ರಾಮಸ್ಥರು ಗುಂಡಿಗಳಿಗೆ ಮಣ್ಣು ಹಾಕಿ, ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ರಸ್ತೆ ಡಾಂಬಾರು ಕಂಡು ಹಲವು ವರ್ಷಗಳಾಗಿವೆ. ಹೆಚ್ಚಿನ ಸಂಚಾರದಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ದುರಸ್ತಿಗೆ ಈ ಬಾಗದ ಹಳ್ಳಿಗಳ ಮುಖಂಡರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಗುಂಡಿ ಮುಚ್ಚದೆ ನಿರ್ಲಕ್ಷ ವಹಿಸಿದ್ದಾರೆ. ನಿತ್ಯ ಸಂಚಾರ ಮಾಡುವ ಬಸ್‌ಗಳು, ವಾಹನಗಳಿಗೆ ಸಮಸ್ಯೆ ಉಂಟಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಮುಂಗಾರು ಪೂರ್ವ ಹಾಗೂ ಜೂನ್ ತಿಂಗಳ ಮೊದಲ ಮಳೆಯಿಂದ ಈ ರಸ್ತೆಯಲ್ಲಿ ಮತ್ತೆ ಗುಂಡಿಗಳು ರಾರಾಜಿಸುತ್ತಿದ್ದವು. ಹೀಗಾಗಿ ಖಾನಾಪುರ, ಕಂದಗೂಳ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು 6-7 ಸಾವಿರ ಹಣ ಸಂಗ್ರಹಿಸಿ ಸಿಮೆಂಟ್ ಕಾಂಕ್ರಿಟ್‌ನಿಂದ ಗುಂಡಿ ಮುಚ್ಚಿದ್ದೇವೆ. ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. ಬಾಕಿ ಉಳಿದಿರುವ ರಸ್ತೆಗೆ ಕಾಂಕ್ರೀಟ್ ಹಾಕಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಖಾನಾಪುರ ಗ್ರಾಮಸ್ಥ ಕಾಶಿನಾಥ ಬೆಲ್ಲೆ ಆಗ್ರಹಿಸಿದ್ದಾರೆ.
ʼಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ರಸ್ತೆ ಗುಂಡಿ ಸಮಸ್ಯೆಯಿಂದ ಕೆಲ ಸವಾರರು ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಪಂಚ ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲವೇʼ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಕಲಬುರಗಿ | ಈಶಾನ್ಯ ವಲಯಕ್ಕೆ ಚಂದ್ರಗುಪ್ತ ನೂತನ ಐಜಿಪಿ
ಸಾಮಾಜಿಕ ಕಳಕಳಿಯ ಯುವಕರಾದ ದತ್ತಾತ್ರಿ, ರಾಜಕುಮಾರ್, ಸಂಜುಕುಮಾರ್ ಜ್ಯೋತಿ, ನಾಗೇಶ್, ಜಫರ್ ಹುಸೇನ್ ಸಾಬ್, ದಯಾನಂದ ಸೇರಿದಂತೆ ಮತ್ತಿತರರಿದ್ದರು.