ಬೀದರ್ | ಪತ್ರಿಕೆಗಳು ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು: ಶಿವಾಜಿ ಮೇತ್ರೆ

Date:

Advertisements

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆಗಳು ಸಮಾಜದ ಕಾವಲಾಗಿವೆ. ಅವು ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು ಎಂದು ಕಲಬುರಗಿಯ ಕಾಲೇಜು ಉಪನ್ಯಾಸಕ ಡಾ. ಶಿವಾಜಿ ಮೇತ್ರೆ ಹೇಳಿದರು.

ಬೀದರ್ ಜಿಲ್ಲೆಯ ಹುಲಸೂರಿನ ಗಡಿಗೌಡಗಾಂವದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ‘ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಆರಂಭದಲ್ಲಿ ವರದಿಗಾರಿಕೆ ಹವ್ಯಾಸವಾಗಿದ್ದು, ಅನಂತರ ವೃತ್ತಿಯಾಗಿ ಮಾರ್ಪಟ್ಟಿತು. ಉದ್ಯಮವಾಗಿ ಬೆಳೆದ ಮಾಧ್ಯಮ, ಲಾಭಕ್ಕೆ ಮಹತ್ವ ನೀಡಿತು” ಎಂದರು.

“ಪತ್ರಿಕೆಗಳು ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಜನರ ದನಿಯಾಗಿ ಕೆಲಸ ಮಾಡಬೇಕು. ಸುತ್ತಲಿನ ಸಮಸ್ಯೆಗಳನ್ನು ಸಮುದಾಯಕ್ಕೆ, ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಪತ್ರಿಕೆಗಳ ಕೆಲಸ ಏನೆಂದು ಹಳ್ಳಿಗಳಿಗೆ ತಿಳಿಸಿಕೊಡುವ ಕೆಲಸ ಇಂದಿನ ಪತ್ರಿಕಾ ದಿನಾಚರಣೆ ಮೂಲಕ ನಡೆಯುತ್ತಿದೆ. ಇದು ಮಹಾತ್ಮ ಗಾಂಧೀಜಿಯವರ ಕನಸು ನನಸಾಗುವ ಸಣ್ಣ ಪ್ರಯತ್ನವಾಗಿದೆ” ಎಂದರು.

Advertisements

ಬಸವಕಲ್ಯಾಣದ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ‘ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು’ ಕುರಿತು ಮಾತನಾಡಿ, “ಚಾರಿತ್ರಿಕ, ಸಾಂಸ್ಕೃತಿಕ ಸಂಶೋಧನೆಗೆ ಆಕರಗಳಾಗಿ, ವರ್ತಮಾನದ ಲೋಕ ವಿಮರ್ಶೆಗೆ ಹೊಸ ದಾರಿಗಳಾಗಿ ಪತ್ರಿಕೆಗಳು ನಿತ್ಯ ಹೊಸ ಒಳನೋಟಗಳನ್ನು ಒದಗಿಸುತ್ತವೆ. ಸಾಮಾಜಿಕ ಸಾಂಸ್ಕೃತಿಕ ಎಚ್ಚರವೇ ಮಾಧ್ಯಮದ ಬಹುದೊಡ್ಡ ಹೊಣೆಗಾರಿಕೆಯಾಗಿದೆ. ಜನಸಂಸ್ಕೃತಿ ಪೋಷಿಸುವಲ್ಲಿ, ಪ್ರಜಾಪ್ರಭುತ್ವ, ಮಾನವೀಯತೆಯ ಜೀವಂತಿಕೆಯಲ್ಲಿ, ನಾಡು ನುಡಿಯ ಕಟ್ಟುವಿಕೆಯಲ್ಲಿ , ರೈತ-ಮಹಿಳಾ- ದಲಿತ ಸೇರಿ ಹಲವು ಚಳುವಳಿಗಳು ರೂಪಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು‌” ಎಂದರು.

“ಭಾರತೀಯ ಹಾಗೂ ಕನ್ನಡದ ಬಹುತೇಕ ಬರಹಗಾರರ ಅಭಿವ್ಯಕ್ತಿಗೆ ದಿನಪತ್ರಿಕೆ ಮತ್ತು ಸಾಹಿತ್ಯಕ ಪತ್ರಿಕೆಗಳು ವೇದಿಕೆಗಳಾಗಿದ್ದವು. ಸಾಕ್ಷಿ, ಜಯಕರ್ನಾಟಕ, ಪ್ರಬುದ್ಧ ಕರ್ನಾಟಕ, ಋಜುವಾತು, ದೇಶಕಾಲ, ಕನ್ನಡ ಟೈಮ್ಸ್, ಸಂಗಾತ ಮೊದಲಾದ ಪತ್ರಿಕೆಗಳು ಕನ್ನಡ ಸಾಹಿತ್ಯಕ ಲೋಕ ಕಟ್ಟಿವೆ. ಹಲವು ಪತ್ರಿಕೆಗಳು ಕನ್ನಡಕ್ಕೊಂದು ಸಾಂಸ್ಕೃತಿಕ ನಕಾಶೆ ರೂಪಿಸಿವೆ” ಎಂದು ಹೇಳಿದರು.

ಹುಲಸೂರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, “ಸಾಮಾಜಿಕ ಬದಲಾವಣೆಗೆ ಪತ್ರಿಕೆಗಳು ದಾರಿಯಾಗಿವೆ. ಸಾಮಾಜಿಕ ಬದ್ಧತೆ, ಪ್ರಾಮಾಣಿಕತೆ ಮತ್ತು ಕಾಳಜಿಯಿಂದ ಸಮಾಜದ ಪರಿವರ್ತನೆ ಸಾಧ್ಯ” ಎಂದರು.

ಕಸಾಪ ಉಪಾಧ್ಯಕ್ಷ ಬಸವಕುಮಾರ ಕವಟೆ ಮಾತನಾಡಿ, “ಪತ್ರಕರ್ತ ಕೇವಲ ಮಾಹಿತಿ ನೀಡುವವನಲ್ಲ. ಹಾಗೆಯೇ ಮಾಧ್ಯಮ ಕೇವಲ ಉದ್ಯಮವಲ್ಲ. ಅದೊಂದು ಸೇವೆಯಾಗಿದೆ. ಅವರನ್ನು ಗುರುತಿಸುವ ಕೆಲಸವಾಗಬೇಕು” ಎಂದರು.

ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, “ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಮಾಧ್ಯಮದಲ್ಲಿ ಓದಬೇಕು. ಪ್ರತಿ ಮೂರನೇ ಶನಿವಾರ ಗಡಿ ಭಾಗದ ಶಾಲೆಗಳಲ್ಲಿ ತಾಲೂಕು ಕಸಾಪ ವತಿಯಿಂದ ಕನ್ನಡ ಸಮಾರಂಭ ಹಮ್ಮಿಕೊಳ್ಳಲಾಗುವುದು” ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಗುರುಪ್ರಸಾದ್ ಮೆಂಟೆ, ಶಿವರಾಜ್ ಖಪಲೆ, ಮಹೇಶ್ ಹುಲಸೂರಕರ್, ವೀರಶೆಟ್ಟಿ ಕರಕಲ್ಲೆ, ದತ್ತು ಮೋರೆ, ಸುಧಾಕರ, ಕಸಾಪ ನಗರ ಅಧ್ಯಕ್ಷ ಸಂಗಮೇಶ ಭೋಪಳೆ, ಬಂಡೆಪ್ಪ ಪಾಟೀಲ, ಶಿವಕುಮಾರ ಪಾಟೀಲ, ಸತೀಶ್ ಹಿರೇಮಠ, ವಿಜಯಕುಮಾರ ತಾಂಬೋಳೆ, ಬಾಬು ಕೋರೆ, ಅಶೋಕ ತೇಲಂಗ, ಕಂಟೆಪ್ಪ ಮೇತ್ರೆ, ನಾಗಪ್ಪ ಮೇತ್ರೆ, ದೇವಿದಾಸ ಸೂರ್ಯವಂಶಿ, ಓಂಕಾರ ಪಾಟೀಲ ಮೊದಲಾದವರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X