ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಅಭಿವೃದ್ಧಿ ನಿಧಿಯನ್ನು ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ʼಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ₹25 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದ ರಾಜ್ಯ ಸರ್ಕಾರ ದೀನದಲಿತ, ಹಿಂದುಳಿದ ವರ್ಗದವರಿಗೆ ದ್ರೋಹ ಬಗೆದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಈ ಹಣವನ್ನು ತಪ್ಪದೇ ಅವರ ಅಭಿವೃದ್ಧಿಗೆ ಮಾತ್ರ ಬಳಸಬೇಕುʼ ಎಂದು ಆಗ್ರಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆದಲ್ಲಿ ದಲಿತರು ನಮಗೂ ಏನಾದರೂ ಅವಕಾಶ ಸಿಗಬಹುದು ಎಂದು ಇಣುಕಿ ನೋಡುತ್ತಿದ್ದಾರೆʼ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ʼರಾಜ್ಯದಲ್ಲಿ ಆಡಳಿತ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಭ್ರಷ್ಟಾಚಾರ ಮಿತಿಮೀರಿದೆ. ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಒತ್ತಡ ಹೇರಿದ ಕಾರಣಕ್ಕೆ ಕೆಲ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರು ಬಿಲ್ ಪಾವತಿ ಆಗಿಲ್ಲ ಎಂದು ದಯಾಮರಣ ಕೇಳುತ್ತಿದ್ದಾರೆ. ಬ್ಯಾಂಕ್ ದರೋಡೆ, ಕೊಲೆ, ಸುಲಿಗೆ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಯಾರೂ ನೋಡುವವರಿಲ್ಲʼ ಎಂದರು.
ʼಬೀದರ್‌ನಲ್ಲಿ ಎಸ್‌ಬಿಐ ಎಟಿಎಂ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ತಾಕತ್ತು ರಾಜ್ಯ ಸರ್ಕಾರಕ್ಕೆ ಇಲ್ಲಾಂದ್ರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ದಲಿತರಿಗೆ ಮಾಡಿದಷ್ಟು ಅನ್ಯಾಯ ಹಿಂದಿನ ಯಾವುದೇ ಸರ್ಕಾರಗಳು ಮಾಡಿರಲಿಲ್ಲʼ ಎಂದರು.
ʼಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ₹380 ಕೋಟಿ ಮಾತ್ರ ಮೀಸಲಿಟ್ಟು, ಅದರಲ್ಲಿ ₹80 ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ ಗಂಗಾಕಲ್ಯಾಣ, ನೇರಸಾಲ, ಭೂ ಒಡೆತನ ಸೇರಿದಂತೆ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ಈ ಸಲದ ಬಜೆಟ್‌ನಲ್ಲಿ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ₹85 ಸಾವಿರ ಕೋಟಿ ಅನುದಾನ ಮೀಸಲಿಡಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಕಾಲಕ್ಕೆ ಸಿಗದ ಗೌರವಧನ : 147 ಅತಿಥಿ ಶಿಕ್ಷಕರು ಹೈರಾಣು
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ, ಬೀದರ ದಕ್ಷಿಣ ಶಾಸಕ ಶೈಲೆಂದ್ರ ಬೆಲ್ದಾಳೆ ಮುಖಂಡರಾದ ಮಾಜಿ ಶಾಸಕ ಗುಂಡಪ್ಪ ಬಿರಾದರ, ಈಶ್ವರ್ ಸಿಂಗ್ ಠಾಕೂರ್, ಶಂಕುತಲಾ ಬೆಲ್ದಾಳೆ, ಪೀರಪ್ಪ ಔರಾದೆ, ಗುರುನಾಥ ಜಾಂತಿಕರ, ಫರ್ನಾಂಡಿಸ್ ಹಿಪ್ಪಳಗಾವ್, ಲಲಿತಾ ಅನಾಪೂರ, ಅಂಬರಾಯ್ ಅಷ್ಟಗಿ , ಬಾಬು ವಾಲಿ, ಶಶಿಧರ ಹೊಸಳ್ಳಿ ಹಾಗೂ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.