ರಾಜ್ಯ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು, ಯಾರು ಏನಂದ್ರು?

Date:

Advertisements

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಂಡಿಸಿದ 16ನೇ ರಾಜ್ಯ ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ಹೊಸದೇನಿಲ್ಲ, ಹಳೆಯದ್ದನ್ನೇ ಬಿಂಬಿಸಲಾಗಿದೆ ಎಂಬ ಜಿಲ್ಲೆಯ ಪಾಲಿಗೆ ಇದು ನಿರಾಶಾದಾಯಕ ಬಜೆಟ್‌ ಎಂಬ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಸ್ತಕ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಹೊಸ ಯೋಜನೆಗಳನ್ನು ಘೋಷಿಸಬಹುದು ಅಥವಾ ಈಗಾಗಲೇ ಘೋಷಿಸಿದ ಯೋಜನೆಗಳಿಗೆ ಅನುದಾನವಾದರೂ ಮೀಸಲಿಡಬಹುದು ಎಂದು ನಿರೀಕ್ಷಿಸಿದ್ದ ಜನರು ಸಂಪೂರ್ಣ ನಿರಾಸೆಗೀಡಾಗಿದ್ದಾರೆ.

ಈ ಹಿಂದೆಯೇ ಘೋಷಿಸಿದ್ದ ಯೋಜನೆಗಳನ್ನು ಮತ್ತೆ ಈ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಬಸವಕಲ್ಯಾಣದಲ್ಲಿ ಪ್ರಗತಿಯಲ್ಲಿರುವ ʼಅನುಭವ ಮಂಟಪʼ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. 2024-25ನೇ ಸಾಲಿನಲ್ಲಿ ಅನುಮೋದನೆ ನೀಡಿರುವ ಕಮಲನಗರ, ಚಿಟಗುಪ್ಪ ಹಾಗೂ ಹುಲಸೂರ ತಾಲ್ಲೂಕು ಪ್ರಜಾಸೌಧ ಮತ್ತು ಬೀದರ್‌ ನಗರಸಭೆಯಲ್ಲಿ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದು ಎಂದು ಮತ್ತೆ ಘೋಷಿಸಲಾಗಿದೆ.

Advertisements

ಬಜೆಟ್‌ನಲ್ಲಿ ಹೊಸದೇನು ಘೋಷಣೆ?

ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕ ವೃದ್ಧಿಸಲು ಒಟ್ಟು ₹873 ಕೋಟಿ ವೆಚ್ಚದಲ್ಲಿ ಆರೋಗ್ಯ ವ್ಯವಸ್ಥೆ ಬಲಪಡಿಸುವ ಮತ್ತು ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗ ಆರಂಭಿಸುವುದು. ಭಾಲ್ಕಿ ತಾಲ್ಲೂಕು ಆಸ್ಪತ್ರೆಯನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು. ಬಸವಕಲ್ಯಾಣ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು. ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ಬೀದರ್‌ ಕೇಂದ್ರದಲ್ಲಿ ಕೌಶಲ್ಯ ತರಬೇತಿ, ಬಿದ್ರಿ ಕಲಾಕೃತಿಗಳ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತು ರಿಯಾಯಿತಿಯಲ್ಲಿ ನೀಡಲು ₹1 ಕೋಟಿ ಅನುದಾನ ಹಾಗೂ ಬಸವಕಲ್ಯಾಣದ ಕೊಂಗಳಿ ಕೆರೆ ತುಂಬಿಸುವ ಯೋಜನೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು, ಅಂತರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ವಿಸ್ತೃತ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ಘೋಷಣೆ ಆಗಿದೆ.

2022ರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರ್ಕಾರ ಅವಧಿಯಲ್ಲಿ ₹90 ಕೋಟಿ ವೆಚ್ಚದಲ್ಲಿ ಔರಾದ್‌ ತಾಲ್ಲೂಕಿನ ಬಲ್ಲೂರ್‌ (ಜೆ) ಸಮೀಪ ಸಿಪೆಟ್‌ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿತ್ತು. ಸರ್ಕಾರ ಬದಲಾದ ನಂತರ ಅನುದಾನ ಬಿಡುಗಡೆಯಾಗಲಿಲ್ಲ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿ, ನೀರಾವರಿ, ಉದ್ಯೋಗ ಸೃಷ್ಟಿಗೆ ಹೊಸ ಉದ್ದಿಮೆಗಳ ಸ್ಥಾಪನೆ, ಬೀದರ್-ನಾಂದೇಡ್ ರೈಲ್ವೆ ಮಾರ್ಗ, ಕೃಷಿ ಕಾಲೇಜು ಸೇರಿದಂತೆ ಇತರ ಬೇಡಿಕೆ ಈಡೇರಲಿಲ್ಲ ಎಂದು ಜನರು ಚರ್ಚಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು: ಈಶ್ವರ ಖಂಡ್ರೆ

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರಿಂದು ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಆಶಾದಾಯಕ ಬಜೆಟ್ ಆಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.  

ʼ16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಈ ಬಜೆಟ್ ಸ್ವೀಟ್ 16 ಬಜೆಟ್ ಆಗಿದೆ. ಮುಖ್ಯಮಂತ್ರಿಯವರು ತಮ್ಮ ಅಪಾರ ಆರ್ಥಿಕ ಅನುಭವದಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ʼಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಈ ಸಾಲಿನ ಬಜೆಟ್ ನಲ್ಲಿಯೂ ₹5 ಸಾವಿರ ಕೋಟಿ ಯೋಜನೆ ರೂಪಿಸಲು ಅವಕಾಶ ನೀಡಲಾಗಿದ್ದು, ಇದು ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಸಾಬೀತು ಪಡೆಸುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,367 ಶಿಕ್ಷಕರ ಹುದ್ದೆಗಳ ಭರ್ತಿಯ ನಿರ್ಧಾರ ಶಾಲೆಗಳ ಶಿಕ್ಷಕರ ಕೊರತೆಯನ್ನು ನಿವಾರಿಸಲಿದ್ದರೆ, ತೊಗರಿಬೆಳೆಗೆ ₹450 ಹೆಚ್ಚುವರಿ ಪ್ರೋತ್ಸಾಹ ಧನ ಹೆಚ್ಚಳ ನಮ್ಮ ಭಾಗದ ರೈತರ ಪಾಲಿಗೆ ಆಶಾಕಿರಣವಾಗಿದೆʼ ಎಂದರು.

ʼಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆ ಅಡಿ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕ ವೃದ್ಧಿಸಲು ಒಟ್ಟು ₹873 ಕೋಟಿ ವೆಚ್ಚದಲ್ಲಿ ಆರೋಗ್ಯ ವ್ಯವಸ್ಥೆ ಬಲಪಡಿಸುವ ಮತ್ತು ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗ ಆರಂಭಿಸುತ್ತಿರುವ ನಿರ್ಧಾರ ಸ್ವಾಗತಾರ್ಹʼ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಇಬ್ಬರು ಸಚಿವರಿದ್ದರೂ ಬೀದರ್ ಜಿಲ್ಲೆಗೆ ಹೇಳಿಕೊಳ್ಳುವಂತಹ ಪ್ರಯೋಜನ ಸಿಕ್ಕಿಲ್ಲ‌ : ಪ್ರಭು ಚವ್ಹಾಣ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ನಿರ್ಜೀವ ಬಜೆಟ್ ಆಗಿದೆ ಎಂದು ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ ಲೇವಡಿ ಮಾಡಿದರು.

ಬಜೆಟ್‌ನಲ್ಲಿ ಮೂಕ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಸಾಯಿಖಾನೆ ಬಂದ್ ಮಾಡುವಂತಹ ಧಮ್ ಈ ಬಜೆಟ್‌ನಲ್ಲಿ ಇಲ್ಲ. ಪಶು ಸಂಗೋಪನೆ ಇಲಾಖೆಗೆ ಏನೂ ಕೊಟ್ಟಿಲ್ಲ. ಗೋ ಶಾಲೆಗಳು ಹಾಗೂ ಪ್ರಾಣಿ ಸಹಾಯವಾಣಿ ಕೇಂದ್ರವೂ ಬಂದ್ ಆಗಿದೆ. ₹7 ಕೋಟಿ ಜನತೆಗೆ ಮೋಸ ಮಾಡುವ ಬಜೆಟ್ ಇದಾಗಿದೆ. ಈ ಸರ್ಕಾರ ಮೂಕ ಪ್ರಾಣಿಗಳ ವಿರೋಧಿ ಸರ್ಕಾರʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼನಮ್ಮ ಸರ್ಕಾರ ಜಾರಿಗೊಳಿಸಿದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಿದ್ಧರಾಮಯ್ಯ ಅವರು ವಿಫಲರಾಗಿದ್ದಾರೆ. ಪ್ರಾಣಿಗಳ ಮೇಲೆ ನಿರಂತರವಾಗಿ ಸಾರ್ವಜನಿಕವಾಗಿ ಹಲ್ಲೆ-ಹತ್ಯೆಗಳಾಗುತ್ತಿದ್ದರೂ ಕೂಡ ಅವುಗಳ ರಕ್ಷಣೆಗೆ ಈ ಸರ್ಕಾರ ಮುಂದಾಗದಿರುವುದು ದುರಂತʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼಕಲ್ಯಾಣ ಕರ್ನಾಟಕಕ್ಕೂ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಅನುದಾನ ನೀಡಿಲ್ಲ. ನಮ್ಮ ತಾಲೂಕಿಗೂ ಏನೂ ಕೊಟ್ಟಿಲ್ಲ. ಪ್ರವಾಸೋದ್ಯಮ, ಕೃಷಿ, ನೀರಾವರಿಗಾಗಿ ಅನುದಾನ ಸಿಗಬಹುದೆಂದು ಜನತೆ ನಿರೀಕ್ಷಿಸಿದ್ದರು. ಆದರೆ ಬೀದರ ಜಿಲ್ಲೆಗೆ ಹೊಸ ಯೋಜನೆ ನೀಡದೇ ಅನ್ಯಾಯ ಮಾಡಲಾಗಿದೆ. ಇಬ್ಬರು ಸಚಿವರಿದ್ದರೂ ಜಿಲ್ಲೆಗೆ ಹೇಳಿಕೊಳ್ಳುವಂತಹ ಪ್ರಯೋಜನ ಸಿಕ್ಕಿಲ್ಲ. ಈ ಬಜೆಟ್ ರಾಜ್ಯದ ಅಭಿವೃದ್ಧಿ ಮಾರಕʼ ಎಂದು ಟೀಕಿಸಿದರು. 

ʼಪಶು ಸಂಗೋಪನೆ ಇಲಾಖೆಗೆ ಖಾಲಿ ಚೆಂಬು ಕೊಟ್ಟಿದ್ದಾರೆ. ನಾಲ್ಕು ಲಕ್ಷ ಕೋಟಿ ವೆಚ್ಚದ ಬಜೆಟ್ ಸರ್ಕಾರದ ಖಜಾನೆ ಖಾಲಿ ಸೂಚಿಸುತ್ತಿದೆ. ಜನರನ್ನು ಲೂಟಿ ಮಾಡಲು ಸಿದ್ಧರಾಮಯ್ಯ ಸರ್ಕಾರ ಮುಂದಾಗಿದೆ. ಈ ಹಿಂದಿನ ಯೋಜನೆಗಳಿಗೆ ಹಣ ಕೊಟ್ಟಿಲ್ಲ. ಗೋಶಾಲೆಗಳಿಗೆ ಹಣ ಕೊಟ್ಟಿಲ್ಲ. ಗೋವುಗಳನ್ನು ರಕ್ಷಿಸಬೇಕಾದ ಸರ್ಕಾರ ಭಕ್ಷಿಸಲು ಮುಂದಾಗಿದೆ. ಮೂಕ ಪ್ರಾಣಿಗಳ ಶಾಪ ತಟ್ಟುತ್ತದೆ. ಸಿದ್ಧರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿದು ಅಧಿಕಾರ ಕಳೆದುಕೊಳ್ಳಲಿದ್ದಾರೆʼ ಎಂದು ಪ್ರಭು ಚವ್ಹಾಣ ಭವಿಷ್ಯ ನುಡಿದರು.

ರಾಜ್ಯ ಬಜೆಟ್ ಜನಪರವಾಗಿದೆ : ಸಚಿವ ರಹೀಂ ಖಾನ್‌

ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯನವರು 2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಆರ್ಥಿಕ ಅನುಭವದಿಂದ ಆರ್ಥಿಕ ರಾಜ್ಯವನ್ನಾಗಿಸಲು ದಿಟ್ಟ ಹೆಜ್ಜೆಯನ್ನಿರಿಸಿದ್ದಾರೆ. ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ವಿತರಣೆ, ರಸ್ತೆ, ಸಣ್ಣ ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹8 ಸಾವಿರ ಕೋಟಿ ಹಂಚಿಕೆ ಮಾಡಲಾಗಿದ್ದು, ಪ್ರತಿ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದ್ದು, ಮುಖ್ಯಮಂತ್ರಿಯವರು ಜನಪರವಾದ ಬಜೆಟ್ ಮಂಡಿಸಿದ್ದಾರೆಂದು ಎಂದು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಹಿಂದುಳಿದ ಬೀದರ್ ಜಿಲ್ಲೆಗೆ ಸಂಪೂರ್ಣ ‌ಕಡೆಗಣನೆ : ಡಾ.ಶೈಲೇಂದ್ರ ಬೆಲ್ದಾಳೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಿಂದುಳಿದ ಬೀದರ್ ಜಿಲ್ಲೆಗೆ ಸಂಪೂರ್ಣ ‌ಕಡೆಗಣಿಸಲಾಗಿದೆ. ಗಡಿ ಜಿಲ್ಲೆ ಜನರ ನಿರೀಕ್ಷೆಗಳೆಲ್ಲವೂ ಬಜೆಟ್ ಹುಸಿಗೊಳಿಸಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಲ್ಲದ  ಬಜೆಟ್ ಇದಾಗಿದೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬೇಸರ ವ್ಯಕ್ತಪಡಿಸಿದ್ದಾರೆ.

ʼಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಬೇಕಿವೆ. ಹಲವಾರು ಹೊಸ ಯೋಜನೆ ಮೂಲಕ ಸಮಗ್ರ ವಿಕಾಸಕ್ಕೆ ಉತ್ತೇಜನ ನೀಡಬೇಕಿತ್ತು. ಆದರೆ ಏನೇನೂ ಸಿಕ್ಕಿಲ್ಲ. ಜಿಲ್ಲೆಯ ಪಾಲಿಗೆ ವಿಶೇಷವಾಗಿ ಸಂಪೂರ್ಣ ಹಳ್ಳಿಗಳಿಂದ ಕೂಡಿದ ಹಾಗೂ ಅಭಿವೃದ್ಧಿಯಲ್ಲಿ ಅತೀ ಹಿಂದುಳಿದ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಪಾಲಿಗೆ ಈ ಬಜೆಟ್ ಕಹಿ ನೀಡಿದೆʼ ಎಂದರು. 

ʼಈ ಬಜೆಟ್ ಗಡಿ ಜಿಲ್ಲೆಗೆ ಸಿಹಿ ತಂದೀತು ಎಂಬ ಜನರ ಭರವಸೆ ಠುಸ್ ಎಂದಿದೆ.‌ ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಬಜೆಟ್ ನಲ್ಲಿ ಲಾಭ ಸಿಗದಿರುವುದು ದುರದೃಷ್ಟಕರ ಸಂಗತಿ. ಯಾವುದೇ ಗೊತ್ತು, ಗುರಿ ಇಲ್ಲದ ಸತ್ವಹೀನವಾದ ಬಜೆಟ್‌ ಇದಾಗಿದೆ. ರಾಜ್ಯದ ಪ್ರತಿಯೊಬ್ಬರ ಮೇಲೂ ಈಗ ಬರೋಬ್ಬರಿ ಒಂದು ಲಕ್ಷದಷ್ಟು ಸಾಲದ ಭಾರ ಇದೆ. ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಅರ್ಥ ವ್ಯವಸ್ಥೆಯ ಸುಧಾರಣೆ‌ ಹಾಗೂ ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಯಾವುದೇ ದೂರಗಾಮಿ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳು ಘೋಷಿಸಿಲ್ಲʼ ಎಂದರು.

ʼಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಉದ್ಯಮ ಸ್ಥಾಪನೆ, ನೀರಾವರಿ ಯೋಜನೆಗಳಿಗೆ ಕಾಯಕಲ್ಪ, ಪ್ರವಾಸೋದ್ಯಮ ಪ್ರಗತಿ ಬಗ್ಗೆ ಚಕಾರವೆತ್ತಿಲ್ಲ. ಸುಮ್ಮನೆ  ಭರವಸೆಗಳ ರೀಲ್ ಬಿಟ್ಟಂತೆ ಕಾಣುತ್ತಿದೆ. ಸರ್ಕಾರದ ಪಂಚ ಗ್ಯಾರಂಟಿ ತರಹವೇ ಈ ಬಜೆಟ್ ಪೊಳ್ಳು ಭರವಸೆಗಳ ಬಜೆಟ್ ಎನಿಸಿದೆʼ ಎಂದು ಟೀಕಿಸಿದ್ದಾರೆ.

ʼವಿವಿಧ ಜಾನುವಾರು ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಅನುದಾನ ಒದಗಿಸಿದರೂ ಗಡಿ ಭಾಗದ ವಿಶ್ವ ಪ್ರಸಿದ್ಧ ದೇವಣಿ ತಳಿಯ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಲಾಗಿದೆ.‌ ಮಾಂಜ್ರಾ‌ ನದಿ ನೀರಿನ ಬಳಕೆಗೆ ಮುಂದಾಗಿಲ್ಲ. ಜನರ ಗುಳೆ ತಪ್ಪಿಸಲು ಹಾಗೂ ದುಡಿಯುವ ಕೈಗಳಿಗೆ ಕೆಲಸ ನೀಡಲು ದಕ್ಷಿಣ ಕ್ಷೇತ್ರದಲ್ಲಿ ಒಂದು ದೊಡ್ಡ ಕೈಗಾರಿಕೆಯನ್ನು ಸ್ಥಾಪಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ʼರಾಜ್ಯದ ಏಕೈಕ ಪಶುವೈದ್ಯ ವಿವಿಯಲ್ಲಿನ ಸಿಬ್ಬಂದಿ ಭರ್ತಿ ಸೇರಿ ವಿವಿಧ ಕಾರ್ಯಚಟುವಟಿಕೆಗಳಿಗೆ  ಅನುದಾನ ಕಲ್ಪಿಸಿಲ್ಲ. ನನೆಗುದಿಗೆ ಬಿದ್ದ ವರ್ತುಲ ರಸ್ತೆ ಕಾಮಗಾರಿ, ಸಿಪೆಟ್ ಕಾಲೇಜು ಕಟ್ಟಡ ನಿರ್ಮಾಣ, ಬೀದರ್-ನಾಂದೇಡ್ ರೈಲ್ವೆ ಮಾರ್ಗಕ್ಕೆ ಅನುದಾನ, ಕೃಷಿ ಕಾಲೇಜು ಸ್ಥಾಪನೆ ಬಗ್ಗೆ ಗಮನಹರಿಸಿಲ್ಲ. ಜಿಲ್ಲೆಯ ಪಾಲಿಗೆ ಬಜೆಟ್ ನಿಷ್ಪ್ರಯೋಜಕವಾಗಿದೆʼ ಎಂದು ವ್ಯಾಖ್ಯಾನಿಸಿದ್ದಾರೆ.

ಬಸವಕಲ್ಯಾಣ ಆಸ್ಪತ್ರೆ ಮೇಲ್ದರ್ಜೆ : ಮಾಜಿ ಎಂಎಲ್ಸಿ ವಿಜಯಸಿಂಗ್ ಹರ್ಷ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಅವರು ಬಸವಕಲ್ಯಾಣ ಕ್ಷೇತ್ರದ ಕೆಲವು ಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಮೂಲಕ ಈಡೇರಿಸಿದ್ದು ತುಂಬಾ ಹರ್ಷವಾಗಿದೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್ ಹೇಳಿದ್ದಾರೆ.

ʼಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಲ್ಲದೇ ತಾಲೂಕಿನ ಕೊಂಗಳಿ ಕೆರೆ ತುಂಬಿಸುವ ಯೋಜನೆ ಘೋಷಣೆ. ಬೀದರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ್ದಾರೆ. ನೂತನ ಹುಲಸೂರು ತಾಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಅನುಮೋದನೆ ನೀಡಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಈಗಾಗಲೇ ಭರವಸೆ ನೀಡಿದ್ದಾರೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ʼಕ.ಕ ಭಾಗದಲ್ಲಿ 24 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 7 ನಗರ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಮೇಲ್ದರ್ಜೆಗೇರಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಸಮಾಜಮುಖಿ ಬಜೆಟ್ ಆಗಿದೆ. ಎಲ್ಲ ವರ್ಗಗಳು, ಸಮುದಾಯಕ್ಕೂ ಅನುದಾನ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಒಳ್ಳೆಯ ಯೋಜನೆ ಅನೇಕ ಯೋಜನೆ ಘೋಷಣೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳು ಇದ್ದರೂ ಇಷ್ಟು ದೊಡ್ಡ ಮೊತ್ತದ ಬಜೆಟ್ ಕೊಟ್ಟಿದ್ದಾರೆ. ರಾಜ್ಯಕ್ಕೆ ಬರೋಬ್ಬರಿ ₹4.9 ಲಕ್ಷ ಕೋಟಿ ಬಜೆಟ್ ಕೊಟ್ಟಿದ್ದಾರೆʼ ಎಂದು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ್ಕಕೆ ಸಂಪೂರ್ಣ ನಿರ್ಲಕ್ಷ್ಯ : ಭಗವಂತ ಖೂಬಾ

ʼಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಮೌಲ್ವಿಯಾಗಿ ಇಂದಿನ ಬಜೇಟ್ ಮಂಡಿಸಿದ್ದಾರೆ, ಕೇವಲ ಮುಸ್ಲಿಮರನ್ನು, ಮೌಲ್ವಿಗಳನ್ನು ಆರ್ಥಿಕವಾಗಿ ಬೆಳೆಸುವ ಬಜೆಟ್ ಮಂಡಿಸಿದ್ದಾರೆʼ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ʼಸಿದ್ದರಾಮಯ್ಯ ಅವರ ತಲೆಯಲ್ಲಿ ಮುಸ್ಲಿಂರಿಗೆ ಮಾತ್ರ ಸರ್ಕಾರದ ಸಂಪನ್ಮೂಲ ಒದಗಿಸುವ ಉದ್ದೇಶ ಹೊಂದಿರುವುದು ಕಾಣುತ್ತಿದೆ, ಅತಿ ಹೆಚ್ಚು ತೆರಿಗೆ ಕಟ್ಟುವ ಉಳಿದ ಸಮಾಜವನ್ನು ನಿರ್ಲಕ್ಷಿಸಿ, ತೆರಿಗೆ ಕಟ್ಟುವವರ ಸಂಪತ್ತು ಮುಸ್ಲಿಮರಿಗೆ ನೀಡುವ ಉದ್ದೇಶ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆʼ ಎಂದರು.

ಕಲ್ಯಾಣ ಕರ್ನಾಟಕ್ಕಕೆ ಸಂಪೂರ್ಣ ನಿರ್ಲಕ್ಷ್ಯವಾಗಿದೆ, ರೈತರ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ, ಯುವಕರ ಸ್ವಾವಲಂಬಿ ಜೀವನಕ್ಕಾಗಿ ಹೊಸ ಯೋಜನೆಗಳಿಲ್ಲ, ಬೀದರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದಿಂದ ಮಂಜೂರಾದ ಯೋಜನೆಗಳಿಗೂ ಅನುದಾನ ಮೀಸಲಿಟ್ಟಿಲ್ಲ, ಬೀದರ ಮಹಾನಗರ ಪಾಲಿಕೆ ಮತ್ತು ನೂತನ ಅನುಭವ ಮಂಟಪ ನಿರ್ಮಾಣ ಯೋಜನೆ ನಮ್ಮ ಬಿಜೆಪಿ ಸರ್ಕಾರ ಘೋಷಿಸಿ ಅನುದಾನ ನೀಡಿತ್ತು, ಅದನ್ನೆ ಮುಂದುವರೆಸಿದ್ದಾರೆ. ಇದಕ್ಕೆ ಇವರದೇನು ಹೊಸ ಕೊಡುಗೆಯಿಲ್ಲʼ ಎಂದಿದ್ದಾರೆ.

ʼಈ ಬಜೆಟ್ ಬೀದರ ಜಿಲ್ಲೆಗೆ ಶೂನ್ಯವಾಗಿದೆ. ಇಂತಹ ನಿರಾಶದಾಯಕ ಬಜೆಟ್ ಬೀದರ ಜಿಲ್ಲೆಗೆ ಸಿಕ್ಕಿದೆ, ನಮ್ಮ ಇಬ್ಬರು ಸಚಿವರು ಯಾವ ಪುರಾಷಾರ್ಥಕ್ಕಾಗಿ ಮಂತ್ರಿಯಾಗಿದ್ದಾರೋ ಗೊತ್ತಿಲ್ಲ, ಸ್ವಾಭಿಮಾನವಿದ್ದರೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಪ್ರಗತಿಗೆ ಪೂರಕವಲ್ಲದ ಬಜೆಟ್ : ಮಾಜಿ ಶಾಸಕ ಪ್ರಕಾಶ ಖಂಡ್ರೆ

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ತಮ್ಮ 16ನೇ ಬಜೆಟ್‌ನಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ. ರಾಜ್ಯದ ಪ್ರಗತಿಗೆ ಅವರು ಪೂರಕ ಬಜೆಟ್ ಮಂಡಿಸಿಲ್ಲ ಬದಲಾಗಿ ಮುಸ್ಲಿಂ ಸಮುದಾಯದ ಹಿತವನ್ನು ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ತಿಳಿಸಿದ್ದಾರೆ.

ʼಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ಜನರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ನಿರಾಶಾದಾಯಕ ಬಜೆಟ್ ಎಂದಿಗೂ ಕಂಡಿರಲಿಲ್ಲʼ ಎಂದು ಹೇಳಿದ್ದಾರೆ.

ದೂರದೃಷ್ಟಿಯ ಬಜೆಟ್ : ಬಸವರಾಜ ಜಾಬಶೆಟ್ಟಿ

ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ದೂರದೃಷ್ಟಿಯ ಬಜೆಟ್ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳಿದ್ದಾರೆ.

ʼಶಿಕ್ಷಣ, ಆರೋಗ್ಯ, ಕೃಷಿ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಲಾಗಿದೆ. ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವುದಕ್ಕೂ ಒತ್ತು ನೀಡಲಾಗಿದೆ. ಬಜೆಟ್‍ನಲ್ಲಿ ಎಲ್ಲ ವರ್ಗಗಳ ಜನರ ಪ್ರಗತಿಗೆ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆʼ ಎಂದು ಹೇಳಿದ್ದಾರೆ.

ಬೀದರ್ ವಿಶ್ವವಿದ್ಯಾಲಯಕ್ಕೆ ಅನುದಾನ ಘೋಷಿಸದೆ ಮಲತಾಯಿ ಧೋರಣೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಸತ್ವಹೀನವಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಿರಿಯ ಮುಖಂಡ ರೇವಣಸಿದ್ದ ಜಾಡರ್ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಈದಿನ ಫಲಶೃತಿ : ಅತಿಥಿ ಶಿಕ್ಷಕರ ಖಾತೆಗೆ ಮೂರು ತಿಂಗಳ ಗೌರವಧನ ಜಮೆ

ʼಬೀದರ್ ವಿಶ್ವವಿದ್ಯಾಲಯ ಸೇರಿದಂತೆ ಈ ಹಿಂದೆ ಹೊಸದಾಗಿ ಘೋಷಿಸಿದ ಯಾವ ವಿಶ್ವವಿದ್ಯಾಲಯಕ್ಕೂ ಅನುದಾನ ಪ್ರಕಟಿಸದೆ, ಮಲತಾಯಿ ಧೋರಣೆ ಅನುಸರಿಸಲಾಗಿದೆ. ಇದರಿಂದ ವಿಶ್ವವಿದ್ಯಾಲಯಗಳನ್ನು ಬಲಿಷ್ಠಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲದಿರುವುದು ಸ್ಪಷ್ಟವಾಗಿದೆ. ವಿದ್ಯಾನಿಧಿಯ ಸಮರ್ಪಕ ಅನುಷ್ಠಾನ, ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಭರವಸೆ ಭರವಸೆಯಾಗಿಯೇ ಉಳಿದಿದೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X