12ನೇ ಶತಮಾನದಲ್ಲಿ ಅನುಭವ ಮಂಟಪ ಮುಖಾಂತರ ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಇಡೀ ವಿಶ್ವದ ಆಸ್ತಿಯಾಗಿದ್ದಾರೆ ಎಂದು ಬೆಳಗಾವಿಯ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಔರಾದ್ ತಾಲೂಕು ಆಡಳಿತದ ವತಿಯಿಂದ ತಹಸೀಲ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದ ಅವರು, ʼಬಸವಕಲ್ಯಾಣ ಅತ್ಯಂತ ಪವಿತ್ರ ಆಧ್ಯಾತ್ಮಿಕ ನೆಲ, ಇಲ್ಲಿಂದಲೇ ಜಗತ್ತಿಗೆ ಸಮಾನತೆ ತತ್ವ ತಲುಪಿದೆʼ ಎಂದರು.
ʼಸಮಾಜದಲ್ಲಿ ಬೇರೂರಿದ ಸಾಮಾಜಿಕ ಅಸಮಾನತೆ, ಜಾತಿಯತೆ, ಅಸ್ಪೃಶ್ಯತೆ ವಿರುದ್ಧ ಬಂಡೆದ್ದು ಬಸವಾದಿ ಶರಣರು ಸಮಾನತೆ ಸಮಾಜ ಕಟ್ಟಬಯಸಿದರು. ಬಸವಣ್ಣನವರ ತತ್ವ ಸಿದ್ಧಾಂತ ಅನುಷ್ಠಾನಗೊಂಡರೆ ಸಮಾಜದ ಅನೇಕ ಜಟಿಲ ಸಮಸ್ಯೆಗಳಿಗೆ ಮುಕ್ತಿ ಸಿಗುವುದು ಜೊತೆಗೆ ದೇಶ ವಿಶ್ವದ ಎದುರು ತಲೆಯೆತ್ತಿ ನಿಲ್ಲುವಂತಾಗುತ್ತದೆʼ ಎಂದು ತಿಳಿಸಿದರು.
ʼಸಮಾಜದಲ್ಲಿ ಉದ್ಧಾತ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಜನರ ಸಂಖ್ಯೆ ಹೆಚ್ಚಳವಾದರೆ ದೇಶ ಮತ್ತಷ್ಟು ಬಲಿಷ್ಠಗೊಂಡು ವಿಶ್ವಗುರುವಾಗುತ್ತದೆ. ಬಸವಣ್ಣ ದೇವರಲ್ಲ, ಅವರಿಗೆ ಪೂಜೆಯ ಅಗತ್ಯ ಇಲ್ಲ. ಬಸವಣ್ಣನವರ ತತ್ವ ಸಿದ್ಧಾಂತ ನಿಜ ಆಚರಣೆಗೆ ತಂದರೆ ಬಸವ ಜಯಂತಿ ಆಚರಣೆ ಸಾರ್ಥಕವಾಗುತ್ತದೆʼ ಎಂದು ಅಭಿಪ್ರಾಯಪಟ್ಟರು.
ಶಾಸಕ ಪ್ರಭು ಚವ್ಹಾಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ʼಅಸಮಾನತೆ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅನ್ಯಾಯ ನಿರ್ಮೂಲನೆಗಾಗಿ ಜೀವನದುದ್ದಕ್ಕೂ ಶ್ರಮಿಸಿದ್ದ ಬಸವಣ್ಣನವರ ಸಮಾನತೆ, ಕಾಯಕ ಸಿದ್ದಾಂತ ಸರ್ವಕಾಲಕ್ಕೂ ಪ್ರಸ್ತುತವಾಗಿವೆʼ ಎಂದು ತಿಳಿಸಿದರು.

ʼಸಮಾಜದಲ್ಲಿ ಸಮಾನತೆ ನೆಲೆಗೊಳ್ಳಬೇಕೆಂಬ ಮಹತ್ವದ ಕನಸು ಹೊತ್ತಿಕೊಂಡಿದ್ದ ಬಸವಣ್ಣನವರು ವಚನ ಸಂದೇಶದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ತಿದ್ದಿದರು. ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ ಕಚೇರಿವರೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮೆರವಣಿಗೆ ಭವ್ಯವಾಗಿ ನಡೆಯಿತು. ಮೆರವಣಿಗೆಯಲ್ಲಿ ಬಸವಾಭಿಮಾನಿಗಳು, ಅಧಿಕಾರಿಗಳು ಡಿಜೆ, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ : ಬಸವ ಜಯಂತಿ ವಿಶೇಷ | ಕಾಯಕ ಚಳವಳಿ ರೂಪಿಸಿದ ನಾಯಕ ಬಸವಣ್ಣ
ಈ ಸಂದರ್ಭದಲ್ಲಿ ತಹಸೀಲ್ದಾರ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉತ್ತಮ ಸಂಘನಾಯಕ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ನಿರೂಪಿಸಿ ವಂದಿಸಿದರು.





