ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ಹೇಳಿದರು.
ಜಾನಪದ ಕ್ಷೇತ್ರದ ಸಾಧನೆಗಾಗಿ ಧಾರವಾಡದ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಉದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟಿ ಜಿಲ್ಲೆಯ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದಾರೆ.
ವಿಜಯಪುರ ನಗರದ “ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವ ಏ. 21ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ವಿವಿಯ ಜ್ಞಾನಶಕ್ತಿ ಆವರಣದ ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಪಾಲ್ಗೊಳ್ಳಲಿದ್ದಾರೆ” ಎಂದು ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಮುಖ್ಯ ಅತಿಥಿಗಳಾಗಿ ಮುಂಬೈನ ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್ ಅವರು ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ, ಕುಲಪತಿ ಪ್ರೊ. ವಿಜಯಾ ಬಿ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಉಪಸ್ಥಿತರಿರುವರು” ಎಂದು ತಿಳಿಸಿದರು.
ಇದನ್ನೂ ಓದಿ>ವಿಜಯಪುರ | ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿಪುರುಷ ಬಸವಣ್ಣ: ಬಸವಲಿಂಗ ಸ್ವಾಮೀಜಿ
“ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 70 ವಿದ್ಯಾರ್ಥಿನಿಯರಿಗೆ 58 ಚಿನ್ನದ ಪದಕ ಮತ್ತು 12 ನಗದು ಪಾರಿತೋಷಕ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ವಿವಿಯ ವಿದ್ಯಾರ್ಥಿನಿ ಸಭಾ ಮಹ್ಮದ ರಫಿಕ್ ಕುಡಚಿ ಅವರು ಎಂಎ ಸಮಾಜಶಾಸ್ತ್ರ ವಿಷಯದಲ್ಲಿ 05 ಚಿನ್ನದ ಪದಕ, ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯರ್ಥಿನಿ ರೇಖಾ ದೊಡವಾಡ ಅವರು ಎಂ.ಎ ಕನ್ನಡದಲ್ಲಿ 03 ಚಿನ್ನದ ಪದಕ ಹಾಗೂ ಎರಡು ನಗದು ಪಾರಿತೋಷಕ ಪಡೆದಿದ್ದಾರೆ.ವಿವಿಯ ಗೀತಾ ಸಿ.ಕಾಟಿ ಇವರು ಎಂಎ ಅರ್ಥಶಾಸ್ತ್ರದಲ್ಲಿ 03 ಚಿನ್ನದ ಪದಕ ಹಾಗೂ ವಿವಿಯ ಶಹಿಸ್ತಾ ತಜೀನ್ ಮಳ್ಳಿ ಇವರು ಎಂ ಎಸ್ಸಿ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಷಯದಡಿ 03 ಚಿನ್ನದ ಪದಕ ಪಡೆದುಕೊಂಡಿದ್ದಾರೆ” ಎಂದು ಅವರು ಹೇಳಿದರು.
ಘಟಿಕೋತ್ಸವವನ್ನು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಮೂಲಕ ಲೈವ್ ಕವರೇಜ್ ಮಾಡಲಾಗುತ್ತದೆ. ರಾಜ್ಯದಾದ್ಯಂತ ಇರುವ ವಿವಿಯ ಸಂಲಗ್ನ ಕಾಲೇಜುಗಳ ವಿದ್ಯಾರ್ಥಿನಿಯರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಚಾನೆಲ್ ಮೂಲಕ ಪ್ರಸಾರವಾಗುವ ಲೈವ್ ಕವರೇಜ್ ವೀಕ್ಷಿಸುವ ಮೂಲಕ ಘಟಿಕೋತ್ಸವದಲ್ಲಿ ಆನ್ಲೈನ್ ಮೂಲಕ ಭಾಗವಹಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿಯೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಘಟಿಕೋತ್ಸವ ಮೆರವಣಿಗೆ ಸಭಾಂಗಣದಲ್ಲಿ ಪ್ರವೇಶಿಸುವಾಗಿನಿಂದ ಹಿಡಿದು ಕುಲಾಧಿಪತಿಗಳು ಪೀಠಸ್ಥರಾಗುವವರೆಗೂ ಸಭಾಸದರು ಎದ್ದು ನಿಂತಿರಬೇಕು. ಹಾಗೆಯೇ ಘಟಿಕೋತ್ಸವ ಮುಗಿದ ಬಳಿಕ, ಮೆರವಣಿಗೆ ಸಭಾಂಗಣವನ್ನು ಬಿಟ್ಟು ತೆರಳುವವರೆಗೆ, ಸಭಾಸದರು ತಮ್ಮ ಸ್ಥಳಗಳಲ್ಲಿಯೇ ಎದ್ದು ನಿಂತಿರಬೇಕು. ಘಟಿಕೋತ್ಸವದ ಸಭಾಂಗಣದಲ್ಲಿ 12 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಸಭಾಂಗಣದಲ್ಲಿ ಕ್ಯಾಮೆರಾ, ಮೊಬೈಲ್, ವಾಟರ್ ಬಾಟಲ್, ಕೊಡೆ, ಕೈಚೀಲ ಮುಂತಾದ ಯಾವುದೇ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ರಾಜಕುಮಾರ್ ಮಾಲಿ ಪಾಟೀಲ್, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಘಟಿಕೋತ್ಸವ ಲೈವ್ ಕವರೇಜ್ ಸಂಯೋಜಕ ಸಂದೀಪ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.





