ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಎಕಲಾರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಯ ಇಂಗ್ಲಿಷ್ ವಿಷಯದಲ್ಲಿ 95ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆಗೈದ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ್ದಾರೆ.
ಔರಾದ್ ತಾಲ್ಲೂಕಿನ ಬೊರಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ಸತೀಶ್ ಮಜಗೆ ತಮ್ಮ ಸ್ವಂತ ಊರು ಎಕಲಾರ. ಹೀಗಾಗಿ ತಮ್ಮ ಊರಿನ ಶಾಲೆಯ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿಮಾನ ಪ್ರಯಾಣದ ವೆಚ್ಚ, ಊಟ ಹಾಗೂ ವಸತಿ ಸೌಲಭ್ಯಕ್ಕಾಗಿ ₹20 ಸಾವಿರ ಖರ್ಚು ಮಾಡಿದ್ದಾರೆ.
2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮೂವರು ಮಕ್ಕಳು, ಶಾಲೆಯ ಶಿಕ್ಷಕ ಸೂರ್ಯಕಾಂತ ನಾಗೂರೆ, ಪೋಷಕರಾದ ಸಿದ್ದಪ್ಪ ದೇಶಟ್ಟೆ ಸೇರಿ ಒಟ್ಟು 6 ಜನರು ಮೇ 31ರಂದು ಹೈದ್ರಾಬಾದ್ನಿಂದ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ 95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ಯುತ್ತೇನೆ ಎಂದು ಶಿಕ್ಷಣ ಪ್ರೇಮಿ ಸತೀಶ್ ಮಜಗೆ ಅವರು ಈ ಹಿಂದೆ ನಡೆದ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಶ್ವಾಸನೆ ನೀಡಿದರು.
ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಓಂಕಾರ ಕಲ್ಲಪ್ಪ ರಾಮಗೊಂಡ್ (97 ಅಂಕ), ಭಾಗ್ಯವಂತಿ ಅಶೋಕ ಬಿರಾದಾರ (96 ಅಂಕ) ಹಾಗೂ ಅಂಕಿತಾ ಸಿದ್ದಪ್ಪ ದೇಶಟ್ಟೆ ಅವರು (96 ಅಂಕ) ಇಂಗ್ಲಿಷ್ ವಿಷಯದಲ್ಲಿ ಸಾಧನೆಗೈದರು. ಶಿಕ್ಷಕ ಸತೀಶ್ ಮಜಗೆ ಅವರು ಮಕ್ಕಳಲ್ಲಿ ಓದಿನ ಆಸಕ್ತಿ ಹಾಗೂ ಸಾಧನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂವರು ವಿದ್ಯಾರ್ಥಿಗಳಿಗೆ ಸ್ಟಾರ್ ಏರ್ ವಿಮಾನದಲ್ಲಿ ತೆರಳಿದ್ದಾರೆ.
ಇದನ್ನೂ ಓದಿ : ಬೀದರ್ | ಸಂತೋಷ ಲಾಡ್ಗೆ ಡಿಸಿಎಂ ಸ್ಥಾನ ನೀಡಲು ಸಕಲ ಮರಾಠ ಸಮಾಜ ಒತ್ತಾಯ
‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆ ಇದೆ. ಅದನ್ನು ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯ. ನನ್ನೂರಿನ ಶಾಲೆಯ ಮಕ್ಕಳಿಗೆ ವಿಮಾನಯಾನ ಮಾಡಿಸಿದ ಸಂತಸ ನನಗಿದೆ. ಮಕ್ಕಳು ವಿಮಾನದಲ್ಲಿ ಪ್ರಯಾಣಿಸಿ ಪುಳಕಿತರಾಗಿ ಬದುಕಿನ ಸಂತಸದ ಕ್ಷಣ ಕಳೆದರು’ ಎಂದು ಶಿಕ್ಷಕ ಸತೀಶ್ ಮಜಗೆ ಹೇಳಿದರು.
‘ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಬೇಕು, ಸರ್ಕಾರಿ ಶಾಲೆಯ ಮಕ್ಕಳಿಗೂ ವಿಮಾನಯಾನದ ಅನುಭವ ದೊರೆಯಬೇಕು ಎನ್ನುವ ಕಾರಣಕ್ಕಾಗಿ ಸ್ವಂತ ಖರ್ಚಿನಲ್ಲಿ ಪ್ರಯಾಣಕ್ಕೆ ಕರೆದುಕೊಂಡು ಹೋಗಿದ್ದೇನೆ’ ಎಂದು ತಿಳಿಸಿದರು.




