ರಾಜ್ಯದಲ್ಲಿ ಕ್ರಿಯಾಶೀಲ ಸಚಿವರು, ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಶಾಸಕರೂ ಆದ ಸಂತೋಷ ಲಾಡ್ ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಸಕಲ ಮರಾಠ ಸಮಾಜದ ಸ್ವಾಮೀಜಿಗಳಾದ ದಾದಾ ಮಹಾರಾಜ ನಗರಕರ್ ಅವರು ಒತ್ತಾಯಿಸಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಬೀದರ್ ಜಿಲ್ಲಾ ಸಕಲ ಮರಾಠ ಸಮಾಜದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,”ಸಂತೋಷ ಲಾಡ್ ಅವರು ಎಲ್ಲ ಸಮಾಜದವರನ್ನು ಸಮಭಾವನೆಯಿಂದ ಕಾಣುವ ಅನುಭವಿ ರಾಜಕಾರಣಿಯಾಗಿದ್ದಾರೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಯುಳ್ಳ ಲಾಡ್ ಅವರು ಸರ್ವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಸಂತೋಷ ಲಾಡ್ ಅವರ ಶ್ರಮ ಸಾಕಷ್ಟಿದೆ” ಎಂದರು.
“ನಾಲ್ಕು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಂತೋಷ ಲಾಡ್ ಅವರು ನಿಷ್ಠೆ, ದಕ್ಷತೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಸಂತೋಷ ಲಾಡ್ ಫೌಂಡೇಶನ್ ಮುಖಾಂತರ ನಾಡಿನ ದೀನ, ದಲಿತ, ಬಡವರು ಹಾಗೂ ವಿಶೇಷಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಸಚಿವರಾಗಿ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯ ಒದಗಿಸುತ್ತಿದ್ದಾರೆ. ಮರಾಠ ಸಮಾಜದ ನಾಯಕರೂ, ಒಬಿಸಿ ಸಮಾಜದವರಾದ ಸಮತೋಷ ಲಾಡ್ ಅವರಿಗೆ ಡಿಸಿಎಂ ನೀಡಬೇಕು” ಎಂದು ಆಗ್ರಹಿಸಿದರು.
ಸಕಲ ಮರಾಠ ಸಮಾಜದ ಜಿಲ್ಲಾಧ್ಯಕ್ಷ ದಿಗಂಬರಾವ್ ಮಾನಕಾರಿ ಮಾತನಾಡಿ, “ಬಸವಕಲ್ಯಾಣದಲ್ಲಿ ಶಿವಸೃಷ್ಠಿ ನಿರ್ಮಾಣಕ್ಕೆ ನೂರು ಕೋಟಿ ಅನುದಾನ ನೀಡುವಂತೆ ಸಿಎಂ ಅವರಿಗೆ ಸಂತೋಷ ಲಾಡ್ ಅವರು ಮನವಿ ಮಾಡಿದರು. ಮರಾಠ ಸಮಾಜ ಅಷ್ಟೇ ಅಲ್ಲದೆ ಸಕಲ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಷ್ಠೆಯಿಂದ ದುಡಿಯುತ್ತಿರುವ ಸಂತೋಷ್ ಲಾಡ್ ಅವರಿಗೆ ಈ ಬಾರಿ ಡಿಸಿಎಂ ಸ್ಥಾನ ನೀಡಲೇಬೇಕೆಂಬುದು ಸಕಲ ಮರಾಠ ಸಮಾಜದವರ ಬೇಡಿಕೆಯಾಗಿದೆ” ಎಂದರು.

ಸಮಾಜದ ಮುಖಂಡ ಆನಂದ ಪಾಟೀಲ ಮಾತನಾಡಿ, “ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಮರಾಠ ಸಮಾಜ 30 ಲಕ್ಷದಷ್ಟು ಮತದಾರರಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಮತದಾರರಿದ್ದಾರೆ. ಲಾಡ್ ಅವರು ದೀನ, ದಲಿತರ, ಬಡವರ ಏಳಿಗೆಗಾಗಿ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡು ಅತ್ಯಂತ ಕ್ರಿಯಾಶೀಲ ಸಚಿವ ಎನಿಸಿಕೊಂಡಿದ್ದಾರೆ. ರಾಜ್ಯದಲ್ಲಿ ರಚನೆಯಾಗುತ್ತಿರುವ ನೂತನ ಸರ್ಕಾರದಲ್ಲಿ ಸಂತೋಷ ಲಾಡ್ ಅವರಿಗೆ ಡಿಸಿಎಂ ಸ್ಥಾನಕ್ಕೆ ಆದ್ಯತೆ ನೀಡಬೇಕು” ಎಂದು ಹೇಳಿದರು.
ಸಮಾಜದ ಮುಖಂಡ ವೆಂಕಟರಾವ್ ಮೊಯಿಂದೆ ಮಾತನಾಡಿ, “ಸಿದ್ದರಾಮಯ್ಯ ನೇತ್ರತ್ವದ ಸರ್ಕಾರದಲ್ಲಿ ಮರಾಠ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿದರು. ನಿರೀಕ್ಷೆಯಂತೆ ಲಾಡ್ ಅವರು ಕಾರ್ಮಿಕ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಾರೆ. ಅಲ್ಲದೆ ಸಂತೋಷ ಲಾಡ್ ಫೌಂಡೇಶನ್ ಮುಖಾಂತರ ಸುಮಾರು 10 ಸಾವಿರ ರೈತರಿಗೆ ಉಚಿತವಾಗಿ ಬೋರವೆಲ್ ಕೊರೆಸಿ ಆರ್ಥಿಕ ಬಲ ತುಂಬಿದ್ದಾರೆ. ವಿಶೇಷಚೇತನರಿಗೆ, ಕಾರ್ಮಿಕ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕ್ರಿಯಾಶೀಲ್ ಸಚಿವರಾಗಿ, ಪಕ್ಷ ಸಂಘಟಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಲಾಡ್ ಅವರಿಗೆ ಈಗ ಡಿ.ಕೆ.ಶಿವಕುಮಾರ ನೇತ್ರತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕೆಂದು ಸಕಲ ಮರಾಠ ಸಮಾಜದ ಬೇಡಿಕೆಯಾಗಿದೆ” ಎಂದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
ಪತ್ರಿಕಾಗೋಷ್ಠಿಯಲ್ಲಿ ಸತೀಷ್ ವಾಸರೆ, ರಘುನಾಥರಾವ್ ಜಾಧವ್, ಸಂತೋಷ ಜಾಧವ್, ಜನಾರ್ಧನ್ ಬಿರಾದಾರ, ಅಂಗದ ಜಗತಪ್, ಅಮರ ಜಾಧವ್, ಅನೀಲ್ ಕಾಳೆ, ಪ್ರದೀಪ ಬಿರಾದಾರ, ಮೀನಾಕ್ಷಿ ಕಾಳೆ, ಅನೀತಾ ಭೋಸ್ಲೆ ಸೇರಿದಂತೆ ಸಕಲ ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು.





