ತಮ್ಮನ್ನು ಬಲವಂತವಾಗಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೂಡಿಡಲಾಗಿದೆ. ಇಲ್ಲಿನ ವ್ಯವಸ್ಥೆಗಳ ಕುರಿತು ತಮಗೆ ವಿಶ್ವಾಸವಿಲ್ಲ ಎಂಬ ಸೋನಮ್ ವಾಗ್ಚುಕ್ ಅವರ ಆಂತಕವನ್ನು ದೆಹಲಿ ಹೈಕೋರ್ಟ್ ಆಲಿಸಿದೆ. ವಾಂಗ್ಚುಕ್ ಅವರ ಕಾಳಜಿಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆಯನ್ನು ಬೆಂಬಲಿಸಿ ಜುಲೈ 28ರಿಂದ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರನ್ನು ಭಾನುವಾರ ಮುಂಜಾನೆ, ಪೊಲೀಸರು ಬಲವಂತವಾಗಿ ಹೊತ್ತೊಯ್ದು, ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸರ ಕ್ರಮವನ್ನು ಪ್ರಶ್ನಿಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯಕೀಯ ವರದಿಗಳ ಬಗ್ಗೆ ಅಪನಂಬಿಕೆಯ ಕಳವಳ ವ್ಯಕ್ತಪಡಿಸಿ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಮಂಗಳವಾರ ನ್ಯಾಯಾಲಯವು ವಿಚಾರಣೆ ನಡೆಸಿದೆ. ವಾಂಗ್ಚುಕ್ ಅವರ ಪರ ಹಿರಿಯ ವಕೀಲ ಅಖಿಲ್ ಸಿಬಲ್ ವಾದ ಮಂಡಿಸಿ, “ವಾಂಗ್ಚುಕ್ ಅವರ ಪ್ರಾಣಕ್ಕೆ ತಕ್ಷಣದ ಅಪಾಯವೇನೂ ಇಲ್ಲದಿದ್ದರೂ ಸೂಕ್ತ ವೈದ್ಯಕೀಯ ಉಸ್ತುವಾರಿಯ ಅಗತ್ಯವಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೇ ವೇಳೆ, ವಾಂಗ್ಚುಕ್ ಅವರು “ಆಸ್ಪತ್ರೆಯಲ್ಲಿ ತಮ್ನನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ ಬಂಧಿಸಿಡಲಾಗಿದೆ, ಪೋಲಿಸರು ತಮ್ಮ ಡಿಜಿಟಲ್ ಸಾಧನಗಳನ್ನು ಕಸಿದುಕೊಂಡಿದ್ದಾರೆ. ಯಾರನ್ನೂ ಭೇಟಿಯಾಗಲು ಬಿಡುತ್ತಿಲ್ಲ” ಎಂದು ಬರೆದಿದ್ದ ಪತ್ರವನ್ನು ಅಖಿಲ್ ಸಿಬಲ್ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾಂಗ್ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ಸೋನಮ್ ವಾಂಗ್ಚುಕ್ ಅವರನ್ನು, ಅವರ ಕುಟುಂಬದವರು ಬಯಸಿದ ಖಾಸಗಿ ಆಸ್ಪತ್ರೆಯಾದ ‘ಮೇದಾಂತ’ಗೆ ಸ್ಥಳಾಂತರಿಸಬೇಕು” ಎಂದು ಸೂಚಿಸಿದೆ.




