ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಸಂಘಟನೆಯ ವತಿಯಿಂದ ಬಸವಕಲ್ಯಾಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ಅಕ್ಟೋಬರ್ 10ರಂದು ವಿವಿಧ ಯುವ ಸಂಘಟನೆಗಳು ದೆಹಲಿಯಲ್ಲಿ ಎಸ್‌ಐಆರ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ, ಅಂದು ಸರ್ಕಾರ ಸಾವಿರಾರು ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಿ ಪ್ರತಿಭಟನೆ ತಡೆಯಲು ಪ್ರಯತ್ನಿಸಿತು. ದೆಹಲಿ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಿ, ದೆಹಲಿಗೆ ಆಗಮಿಸುತ್ತಿದ್ದ ಹಲವು ರೈಲುಗಳನ್ನು ಮಾರ್ಗಮಧ್ಯೆ ತಡೆಹಿಡಿಯಲಾಯಿತು. ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಬಂಧ ವಿಧಿಸಲಾಯಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಾಗರಿಕ ಸಮಾಜದ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಜನರ ಮತಹಕ್ಕು ಕಸಿಯುವ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಸಂದೀಪ ಮುಕಿಂದೆ ತಿಳಿಸಿದರು.

ಹೋರಾಟಗಾರ ಜಗದೀಶ್ವರ ಬಿರಾದಾರ ಮಾತನಾಡಿ, “ಎಸ್‌ಐಆರ್ ಹೆಸರಿನಲ್ಲಿ ಮತದಾನದ ಹಕ್ಕು ಹೊಂದಿರುವ ವಯಸ್ಕ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸಿ ಸಮಾಜದ ಒಂದು ಭಾಗ ನಿರ್ಲಕ್ಷ್ಯ ವಹಿಸುತ್ತಿದೆ. ಆದರೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಇಲ್ಲ” ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ಹೋರಾಟಗಾರ ಇಕ್ರಮೊದ್ದಿನ್ ಖಾದಿವಾಲೆ ಮಾತನಾಡಿ, “ಮತದಾನದ ಹಕ್ಕಿನಿಂದ ನಾಗರಿಕರನ್ನು ವಂಚಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಇಂತಹ ಕ್ರಮಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದ ಇಂದಿನ ಹೋರಾಟ ಹಮ್ಮಿಕೊಳ್ಳಲಾಗಿದೆ” ಎಂದರು.
ವಿದ್ಯಾರ್ಥಿ ಸಂಘಟನೆಯ ಮುಖಂಡ ರಿಯಾಜ್ ಪಟೇಲ್ ಮಾತನಾಡಿ, “ಎಸ್‌ಐಆರ್ ಪ್ರಕ್ರಿಯೆಯ ಮೂಲಕ ದೇಶದ ಪ್ರಜೆಗಳೊಂದಿಗೆ ವಂಚನೆಯ ಆಟ ನಡೆಯುತ್ತಿದೆ. ಇದರಿಂದ ನಾಗರಿಕರಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸುರೇಶ ಮೋರೆ, ರೈತ ಮುಖಂಡ ಖಾನಸಾಬ್, ಕನ್ನಡ ಹೋರಾಟಗಾರ ಮಹಾಂತೇಶ ಗೋರಕರ, ದಲಿತ ಮುಖಂಡರಾದ ಯುವರಾಜ ಬೇಂಡೆ ಹಾಗೂ ಆಕಾಶ ಕಿನ್ನೆಕರ ಸೇರಿದಂತೆ ಪ್ರಮುಖರಾದ ಮನೋಜ್ ಖೆಲೆ, ಅಜರ್, ಸಯ್ಯದ್ ಪಾಶಾ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಸಿಇಸಿ ಜ್ಞಾನೇಶ ಕುಮಾರ್ ವಜಾ, ಎಸ್‌ಐಆರ್ ರದ್ದತಿಗೆ ಆಗ್ರಹ, ತಿರಂಗಾ ಮೆರವಣಿಗೆ





