ಭಾಲ್ಕಿ ತಾಲೂಕಿನ ಏಣಕೂರ ಗ್ರಾಮ ಪಂಚಾಯತಿಯಲ್ಲಿ 2023-24 ಹಾಗೂ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಶಿವರಾಯ ಆಗ್ರಹಿಸಿದ್ದಾರೆ.
2026 ಫೆ.17ರಂದು 36 ಪುಟಗಳ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲಾದ ದೂರಿನಲ್ಲಿ ಕುಡಿಯುವ ನೀರು ಸಿಟಿಲೈಟ್, ಚರಂಡಿ ಕಾಮಗಾರಿ, ಬ್ಲೀಚಿಂಗ್ ಪೌಡರ್ ಖರೀದಿ, ಬೋರ್‌ವೆಲ್ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳ ಹಣ ದುರುಪಯೋಗವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿ ವ್ಯಕ್ತಿಯೊಬ್ಬರ ಹೆಸರಿಗೆ ಹಣ ಜಮೆ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಏಣಕೂರ ಗ್ರಾಮ ಪಂಚಾಯತ್ ಪಿಡಿಒ ಅವರು ಭಾಗಿಯಾಗಿದ್ದಾರೆ ಎಂದು ವಿಡಿಯೋ ಬಿಡುಗಡೆ ಮಾಡಿ ದೂರಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು 2026ರ ಮಾರ್ಚ್ 3ರಂದು ಭಾಲ್ಕಿ ತಾಲೂಕು ಪಂಚಾಯತ್ ಎಒ ಪತ್ರ ಬರೆದು ಈ ವಿಷಯದ ಕುರಿತು ಕುಲಂಕೂಶವಾಗಿ ಪರಿಶೀಲಿಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ಭಾಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಅವರು ಇಲ್ಲಿಯವರೆಗೆ ಈ ಅವ್ಯವಹಾರದ ಪರಿಶೀಲನೆಗೆ ಅಧಿಕಾರಿಗಳನ್ನು ನೇಮಿಸದೆ ತನಿಖೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ: ಸಿಇಒ ಡಾ.ಗಿರೀಶ ಬದೋಲೆ
ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯದ ಬೇರೆ ಜಿಲ್ಲೆಯ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆಗ್ರಹಿಸಿರುವ ಅವರು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತ ನ್ಯಾಯಾಲಯರ ಮೊರೆ ಹೋಗುವುದಾಗಿ ಭೀಮರೆಡ್ಡಿ ಪ್ರಕಟಣೆ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.





