ಮನರೇಗಾ ಯೋಜನೆಯ ಬದಲಾಗಿ ಜುಲೈ 1ರಿಂದ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಗೊಂಡಿದ್ದು, ಈ ಯೋಜನೆಯು ಗ್ರಾಮೀಣ ಬಡ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೆಲಸದ ಖಾತ್ರಿ ನೀಡುತ್ತದೆ ಹಾಗಾಗಿ ತಾಲೂಕಿನಲ್ಲಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಕಾರ್ಮಿಕರು ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗಬಾರದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಬಡ ಕೂಲಿ ಕಾರ್ಮಿಕರ ಆಶಾಕಿರಣವಾಗಿರುವ ನರೇಗಾ ಯೋಜನೆ ಬಂದ ಆಗಿಲ್ಲ. ಕೂಲಿ ಕಾರ್ಮಿಕರ ಹಿತದೃಷ್ಟಿಗೆ ಅನುಗುಣವಾಗಿ ಕೇಂದ್ರ ಸರಕಾರವು ನರೇಗಾ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿರುವ ಜತೆಗೆ ನರೇಗಾ ಯೋಜನೆಗೆ ವಿಬಿ-ಜಿ ರಾಮ್ ಜಿ ಎಂದು ಹೊಸ ನಾಮಕರಣ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ನರೇಗಾ ಯೋಜನೆಯಡಿ 100 ದಿನಗಳಿದ್ದ ಕೆಲಸವನ್ನು, ಈ ಹೊಸ ಯೋಜನೆಯಲ್ಲಿ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕಾರ್ಮಿಕರ 370ಯಿಂದ 382 ರೂ. ಕೂಲಿದರ ಹೆಚ್ಚಿಸಿದೆ. 266 ಕಾಮಗಾರಿಗಳು ಇದದ್ದು ಈಗ 318 ಕಾಮಗಾರಿಗಳನ್ನು ಪರಿಚಯಿಸಿದೆ. ಇದರಲ್ಲಿ ಬಹುತೇಕ ಕಾಮಗಾರಿಗಳು ಕೂಲಿ ಆಧಾರಿತವಾಗಿವೆ. ಹಾಗಾಗಿ, ಕಾರ್ಮಿಕರು ಕೂಲಿ ಕೆಲಸದ ವಿಷಯದಲ್ಲಿ ಭಯಪಡಬೇಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ | ಮಳೆ ಕೊರತೆ : ಬರಪೀಡಿತ ಜಿಲ್ಲೆ ಘೋಷಿಸಲು ದಸಂಸ ಒತ್ತಾಯ
ಉದ್ಯೋಗ ಅರಿಸಿ ಗುಳೆ ಹೋಗದೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ನಿಮ್ಮೂರಲ್ಲೇ ಕೆಲಸ ಮಾಡಿ. ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಯೋಜನೆಯಡಿ ಕೆಲಸದ ಬೇಡಿಕೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿ. ಕಾರ್ಮಿಕ ಸ್ನೇಹಿಯಾಗಿರುವ ವಿಬಿ-ಜಿ ರಾಮ್ ಜಿ ಈ ಹೊಸ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.




