ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದ ಧಮ್ಮಾಂಕುರ ಮೌಂಟ್ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಅಕ್ಟೋಬರ್ 20ರಂದು 70ನೇ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ಅಶೋಕ ವಿಜಯದಶಮಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಿಹಾರದ ಪೂಜ್ಯ ಭಂತೆ ರೇವತ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಕಾರ್ಯಕ್ರಮದಲ್ಲಿ ದೇಶ–ವಿದೇಶಗಳ ಬೌದ್ಧ ಭಿಕ್ಕುಗಳು, ಧಮ್ಮಗುರುಗಳು, ಚಿಂತಕರು ಹಾಗೂ ಸಾವಿರಾರು ಬೌದ್ಧ ಅನುಯಾಯಿಗಳು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ವಿಯೆಟ್ನಾಂ ಬೌದ್ಧ ವಿಶ್ವವಿದ್ಯಾಲಯದ ಉಪಕುಲಪತಿ ಭಂತೆ ಥಿಚ್ ನ್ಯಾಟ್ ತು, ಜಪಾನ್ನ ಧ್ಯಾನಗುರು ಮಾಸ್ಟರ್ ಕಿಯಾಚಿ ತಾಡಾ, ಥೈಲ್ಯಾಂಡ್ನ ಭಂತೆ ಸೋಮಸಾಕ್ ಕೊವಿದೋ ಹಾಗೂ ಗಗನ್ ಫೌಂಡೇಶನ್ ಮುಖ್ಯಸ್ಥ ಮತ್ತು ಚಲನಚಿತ್ರ ನಟ ಗಗನ್ ಮಲಿಕ್ ಸೇರಿದಂತೆ ವಿವಿಧ ದೇಶಗಳ ಧಮ್ಮಗುರುಗಳು ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಪಾನ್, ಟಿಬೆಟ್, ವಿಯೆಟ್ನಾಂ ಹಾಗೂ ಥೈಲ್ಯಾಂಡ್ನ ಬೌದ್ಧ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
1956ರ ಅಕ್ಟೋಬರ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದ ಐತಿಹಾಸಿಕ ಘಟನೆಯ ಸ್ಮರಣಾರ್ಥ ಧಮ್ಮಚಕ್ರ ಪ್ರವರ್ತನ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ರೇಕುಳಗಿಯಲ್ಲಿಯೂ ಹಲವು ವರ್ಷಗಳಿಂದ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದು ಭಂತೆ ರೇವತ್ ವಿವರಿಸಿದರು.
ಅಮೆರಿಕದಲ್ಲಿ ವಿಶ್ವಶಾಂತಿಯ ಸಂದೇಶ ಸಾರಲು ನಡೆದ 5,000 ಕಿ.ಮೀ. ಧಮ್ಮಯಾತ್ರೆ ಹಾಗೂ ಕಲಬುರಗಿಯ ಸಿದ್ಧಾರ್ಥ ವಿಹಾರದಿಂದ ನಾಗಾರ್ಜುನ ಸಾಗರದ ಬುದ್ಧವನಂವರೆಗೆ ನಡೆದ 500 ಕಿ.ಮೀ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬೌದ್ಧ ಭಿಕ್ಕುಗಳು ಈ ಬಾರಿಯ ಮಹೋತ್ಸವದಲ್ಲಿ ಭಾಗವಹಿಸಲಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಅಕ್ಟೋಬರ್ 20ರಂದು ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ ಮತ್ತು ಪ್ರಾರ್ಥನೆಯೊಂದಿಗೆ ಮಹೋತ್ಸವ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ಬುದ್ಧವಂದನೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬೀದರ್ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಿರಾರು ಉಪಾಸಕ–ಉಪಾಸಕಿಯರು ಆಗಮಿಸುವ ನಿರೀಕ್ಷೆಯಿದೆ ಎಂದರು.

ಬೌದ್ಧ ಧಮ್ಮದ ಶಾಂತಿ, ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಉಪಾಸಕ–ಉಪಾಸಕಿಯರು ಬಿಳಿ ವಸ್ತ್ರ ಧರಿಸಿ ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಭಂತೆ ರೇವತ್ ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಪಶು ವೈದ್ಯಕೀಯ ವಿವಿ ಪ್ರಭಾರ ಕುಲಪತಿಯಾಗಿ ಎ.ಟಿ.ರಾಮಚಂದ್ರ ನಾಯ್ಕ ಅಧಿಕಾರ ಸ್ವೀಕಾರ
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಹಾಗೂ ಅನಿಲಕುಮಾರ ಬೆಲ್ದಾರ್ ಮಾತನಾಡಿದರು.
ಸಮಾಜದ ಮುಖಂಡರಾದ ಶಿವಮೂರ್ತಿ ಸುಬ್ಬಾನೆ, ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ವಕೀಲ ವಿನೋದಕುಮಾರ, ಪ್ರಸನ್ನ ಡಾಂಗೆ, ಮನ್ನಾಏಖೆಳ್ಳಿ ಅನಾಥ ಪಿಂಡಕ ಬುದ್ಧ ವಿಹಾರದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.





