ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಲಲಿತಕಲೆ ಮತ್ತು ಕರಕುಶಲಕಲೆ ಹಾಗೂ ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಿದ್ದಾರ್ಥನಗರದಲ್ಲಿರುವ ಕಾವಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಎರಡನೇ ವರ್ಷದ ಕಲಾ ಜಾತ್ರೆ ಯಶಸ್ವಿಯಾಗಿ ನಡೆಯಿತು.
ಕಲಾ ಜಾತ್ರೆಗೆ ಶಿಲ್ಪಕಲಾವಿದ ಅರುಣ್ ಯೋಗಿರಾಜ್ ಚಾಲನೆ ನೀಡಿದರು. ರಾಜ್ಯ ಹಾಗೂ ಹೊರರಾಜ್ಯಗಳ 80ಕ್ಕೂ ಹೆಚ್ಚು ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದರು. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಕರಕುಶಲಕಲೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕಲಾಕೃತಿಗಳು ಪ್ರದರ್ಶನದ ಮೆರುಗು ಹೆಚ್ಚಿಸಿದವು. ಕಲಾವಿದರ ಕಲ್ಪನೆ, ಸೃಜನಶೀಲತೆ ಮತ್ತು ಕೈಚಳಕದಲ್ಲಿ ಮೂಡಿಬಂದಿದ್ದ ಒಂದೊಂದು ಕಲಾಕೃತಿಯೂ ನೋಡುಗರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅರುಣ್ ಯೋಗಿರಾಜ್, ಮೈಸೂರಿನ ಕಲಾವಿದರಿಗೆ ವರ್ಷಪೂರ್ತಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅನುಕೂಲವಾಗುವಂತೆ ಶಾಶ್ವತ ಕಲಾ ಕೇಂದ್ರ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಮೈಸೂರು ದಸರಾ ಹಾಗೂ ನಗರದ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಯಲ್ಲಿ ಕಲಾವಿದರ ಕೊಡುಗೆ ಅಪಾರವಾಗಿದೆ. ಆದರೆ, ಕಲಾವಿದರ ಪ್ರತಿಭೆ ಮತ್ತು ಕಲಾಕೃತಿಗಳು ಕೆಲವೇ ದಿನಗಳ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅವರಿಗೆ ವರ್ಷವಿಡೀ ತಮ್ಮ ಕಲೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಹೇಳಿದರು.
ಹವ್ಯಾಸಿ ಕಲಾವಿದರಿಗೆ ತರಬೇತಿ ನೀಡಲು ಹಾಗೂ ಕಲಾ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು. ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅನುಕೂಲವಾಗುವ ವ್ಯವಸ್ಥೆಯನ್ನು ರೂಪಿಸಬೇಕು. ಹಿಂದಿನ ಮೈಸೂರು ಮಹಾರಾಜರು ಕಲಾವಿದರಿಗೆ ನೀಡಿದ ಆಶ್ರಯ ಮತ್ತು ಪ್ರೋತ್ಸಾಹದ ಮಾದರಿಯಲ್ಲಿ ಇಂದಿನ ಸರ್ಕಾರವೂ ಕಲಾವಿದರನ್ನು ಬೆಂಬಲಿಸಬೇಕು. ಮೈಸೂರಿನ ಶ್ರೀಮಂತ ಕಲಾ ಪರಂಪರೆಯನ್ನು ಉಳಿಸುವುದರ ಜೊತೆಗೆ ಕಲಾವಿದರ ಬದುಕು ಮತ್ತು ಆರ್ಥಿಕ ಭದ್ರತೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಕಳೆದ ವರ್ಷ ಆರಂಭವಾದ ಕಲಾ ಜಾತ್ರೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಪಾಲ್ಗೊಂಡಿರುವುದು ಸಂತಸದ ಸಂಗತಿ. ಕಾವಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಕೈಜೋಡಿಸಿರುವುದು ಶ್ಲಾಘನೀಯ. ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಕಾವಾ ಸಂಸ್ಥೆಗೆ ಪ್ರತಿವರ್ಷ ಶಾಶ್ವತ ಮಳಿಗೆಯನ್ನು ಮೀಸಲಿಡಬೇಕು. ಇದರಿಂದ ಕಾವಾ ಹಿರಿಯ ವಿದ್ಯಾರ್ಥಿಗಳು ಹಾಗೂ ಇತರ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಗಳನ್ನು ಸೃಷ್ಟಿಸಬೇಕು. ಇದರಿಂದ ಪ್ರವಾಸಿಗರಿಗೆ ಸ್ಥಳೀಯ ಕಲಾಪರಂಪರೆಯ ಪರಿಚಯವಾಗುವುದರ ಜೊತೆಗೆ ಕಲಾವಿದರಿಗೂ ಆದಾಯ ಗಳಿಸಲು ಅವಕಾಶ ದೊರೆಯಲಿದೆ. ಇಂದಿನ ಕಲಾವಿದರು ತಮ್ಮ ಕಲಾಕೃತಿಗಳನ್ನು ಫ್ರಿಜ್ ಮ್ಯಾಗ್ನೆಟ್, ಕೀಚೈನ್ ಸೇರಿದಂತೆ ವಿವಿಧ ಆಕರ್ಷಕ ಉತ್ಪನ್ನಗಳ ರೂಪದಲ್ಲಿ ಸಿದ್ಧಪಡಿಸುತ್ತಿರುವುದು ಸಂತಸದ ವಿಚಾರ. ಕೈಗಾರಿಕೋದ್ಯಮಿಗಳು ಮತ್ತು ಸಂಸ್ಥೆಗಳು ನೀಡುವ ಉಡುಗೊರೆಗಳಲ್ಲಿ ಕಲಾವಿದರು ತಯಾರಿಸಿದ ಉತ್ಪನ್ನಗಳಿಗೂ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಲಾವಿದರ ಸೃಜನಶೀಲತೆಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ಅವರ ಆದಾಯ ಹೆಚ್ಚಿಸಲು ಸರ್ಕಾರ ಸೂಕ್ತ ನೀತಿಗಳನ್ನು ರೂಪಿಸಬೇಕು. ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಕಲಾವಿದರ ಆರ್ಥಿಕ ಸ್ವಾವಲಂಬನೆಗೂ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ವಿಶೇಷ ವರದಿ ಓದಿದ್ದೀರಾ? ಮುಸ್ಲಿಮರನ್ನು ಗುರಿಯಾಗಿಸಿ ಮತದಾನದ ಹಕ್ಕು ಕಸಿಯುವ ತಂತ್ರವೇ ‘SIR’: ಶಿವಸುಂದರ್
ಕಾರ್ಯಕ್ರಮದಲ್ಲಿ ಕಾವಾ ಕಾಲೇಜಿನ ನಿಕಟಪೂರ್ವ ಡೀನ್ ದೇವರಾಜು, ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್ ಆರ್.ಎಚ್., ಉಪಾಧ್ಯಕ್ಷ ಮಧುಸೂದನ್ ಎಸ್.ಆರ್., ಕಾರ್ಯದರ್ಶಿ ಸೂರ್ಯ, ಖಜಾಂಚಿ ಹರೀಶ್ ಗಂಗಾಧರ ಹೆಗಡೆ, ನಿರ್ದೇಶಕರಾದ ರಮೇಶ್, ಶ್ವೇತಾ, ಇನ್ಷಾ ಉಮ್ಮೆಹಾನಿ, ಸೈಯದ್ ಮುಜಾಯಿದ್ ಹಾಗೂ ಪವನ್ ಇದ್ದರು.





