ಬಸವಾದಿ ಶರಣರ ವಚನಗಳು ಎಲ್ಲರ ನಡೆ-ನುಡಿಗೆ ದರ್ಪಣವಾಗಬೇಕು ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಬೀದರ್ನ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವದ ಆರನೇ ದಿನವಾದ ಶುಕ್ರವಾರ ನಡೆದ ಭಕ್ತನ ಪಂಚ ಪ್ರತಿಬಂಧಕಗಳು ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
“ವಚನಗಳಲ್ಲಿ ಇಲ್ಲದ್ದು ಜಗತ್ತಿನಲ್ಲಿ ಏನೂ ಇಲ್ಲ ಎಂದು ಅಕ್ಕ ಅನ್ನಪೂರ್ಣತಾಯಿ ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ವಚನಗಳನ್ನು ಉಳಿಸಲು ಶರಣರು ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ವಚನಗಳು ಇಂದಿಗೂ ಜೀವಂತವಾಗಿವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪಿ, ಗೌರವಿಸುವುದು ಹಾಗೂ ಬಸವಾದಿ ಶರಣರ ಮಾನವೀಯ ಮೌಲ್ಯಗಳನ್ನು ಶೋಷಿತರಿಗೆ ತಲುಪಿಸುವುದು ಲಿಂಗಾಯತ ಮಹಾ ಮಠದ ಗುರಿಯಾಗಿದೆ” ಎಂದು ತಿಳಿಸಿದರು.
ನೀಲಮ್ಮನ ಬಳಗದ ವನಿತಾ ಸೋಶೆಟ್ಟಿ ಮಾತನಾಡಿ, “ಬಸವಣ್ಣನವರು ವ್ಯಕ್ತಿಯ ವಿಕಾಸಕ್ಕೆ ಅಡ್ಡಿಯಾಗುವ ಐದು ಪ್ರತಿಬಂಧಕಗಳನ್ನು ವಿವರಿಸಿದರು. ಅತೃಪ್ತಿ, ಕ್ರೋಧ, ಕ್ರೂರತನ, ಕುಭಾಷೆ ಹಾಗೂ ಕುಹಕತನಗಳು ಅವುಗಳಾಗಿವೆ. ಈ ಅಡ್ಡಿಗಳನ್ನು ನಿವಾರಿಸಿಕೊಂಡಲ್ಲಿ ಮಾತ್ರ ವ್ಯಕ್ತಿ ಸುಳಿದೆಗೆದು ಬೆಳೆಯಲು ಸಾಧ್ಯ. ಆಡಂಬರದ ಬದುಕಿಗಾಗಿ ಅತೃಪ್ತಿಯ ಆಸೆಗಳನ್ನು ತೊರೆಯಬೇಕು. ತನ್ನನ್ನೇ ಸುಡುವ ಕ್ರೋಧ ಅಳಿಸಿಕೊಂಡು, ಕೆಟ್ಟ ಭಾಷೆ ಬಿಟ್ಟು, ಮೃದು ವಚನಗಳನ್ನು ಆಡಬೇಕು. ಮಹಾತ್ಮರ ವಾಣಿ ಪರುಷವಾಗಲು ಅವರ ಸತ್ಯ ಮಾತುಗಳೇ ಕಾರಣ” ಎಂದರು.

ನೀಲಮ್ಮನ ಬಳಗದ ಲಾವಣ್ಯ ಸಿ. ಹಂಗರಗಿ ಮಾತನಾಡಿ, “ಶರಣರು ಕಾಯಕ-ದಾಸೋಹ ತತ್ವಗಳಿಂದ 12ನೇ ಶತಮಾನದಲ್ಲಿ ಸಮೃದ್ಧ ನಾಡು ಕಟ್ಟಿದ್ದರು. ಅಂಥ ಶರಣರಿಗೆ ಕಲ್ಯಾಣ ಕ್ರಾಂತಿ ಕೊನೆಯ ಘಟ್ಟದಲ್ಲಿ ಸಂಪ್ರದಾಯವಾದಿಗಳು ಕಿರುಕುಳ ನೀಡಿದರು. ಕಲ್ಯಾಣ ಹೊತ್ತಿ ಉರಿಯುವಂತೆ ಮಾಡಿದರು” ಎಂದು ಹೇಳಿದರು.
ನಾಲ್ಕು ದಶಕಗಳ ಕಾಲ ಬಸವ ತತ್ವ ಪ್ರಸಾರಕ್ಕಾಗಿ ಹಗಲಿರುಳು ದುಡಿದ ಅಕ್ಕನವರ ಕೊನೆಯ ದಿನಗಳಲ್ಲಿ ಕೆಲವರು ಕುತಂತ್ರ, ಕಿರುಕುಳ ನೀಡಿದ ಕಾರಣ ಅಕ್ಕ ಬಹಳ ನೊಂದುಕೊಂಡಿದ್ದರು. ಆದರೆ, ಅಕ್ಕ ಹಾಗೂ ಈಗ ಪ್ರಭುದೇವರಿಂದ ನಮಗೆ ಸಮರಸದ ಜೀವನ ಸೂತ್ರ ದೊರೆತು, ಮುನ್ನಡೆಸುತ್ತಿದೆ ಎಂದು ಹೇಳಿದರು.
ಮಧುಲತಾ ಖಪಲೆ ವಚನ ಗಾಯನ ಮಾಡಿದರು. ವಿನಾಯಕನಗರದ ನೀಲಮ್ಮನ ಬಳಗದ ಸದಸ್ಯೆಯರಿಂದ ನಡೆದ ವಚನ ಭಜನೆ ಹಾಗೂ ವಚನ ವಿಜಯೋತ್ಸವ ಸಮೂಹ ನೃತ್ಯ ಗಮನ ಸೆಳೆದವು.

ಭಾಗ್ಯಶ್ರೀ ಹಂಗರಗಿ ವಚನ ಪಠಣ ಮಾಡಿ ಗೋಷ್ಠಿಗೆ ಚಾಲನೆ ನೀಡಿದರು. ಸಂಗೀತಾ ಬಂತೆ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಎಂ. ಖಂಡ್ರೆ, ನಿರ್ಮಲಾ ನಿಡೋದೆ, ಶಿವಲೀಲಾ ಹೊಕ್ರಾಣೆ, ಲಕ್ಷ್ಮಿ ಹುಲಸೂರೆ, ಶಶಿಕಲಾ ಕೆಸರೋಳೆ, ಈಶ್ವರಮ್ಮ ಹಂಗರಗಿ, ಶಾಂತಲಾ ಗೋರನಾಳೆ ಇದ್ದರು. ಸುಹಾಸಿನಿ ಬೋರಾಳ ನಿರೂಪಿಸಿದರು. ಸುಧಾರಾಣಿ ಹಂಗರಗಿ ಸ್ವಾಗತಿಸಿದರು. ಪ್ರಭಾವತಿ ಮಾಣಿಕಪ್ಪ ಗೋರನಾಳೆ ಭಕ್ತಿ ದಾಸೋಹಗೈದರು.
ಇದನ್ನೂ ಓದಿ : ಭಾಲ್ಕಿ | ಪತ್ರಿಕಾ ಭವನ ನಿರ್ಮಾಣಕ್ಕೆ ಪತ್ರಕರ್ತರ ಮನವಿ





