ಈ ದೇಶದಲ್ಲಿ ಮನುವಾದ ಮತ್ತು ಚಾತುರ್ವರ್ಣದ ವಿರುದ್ಧ ಸಿಡಿದೆದ್ದಿದ್ದರು. ಆ ಅಮಾನವೀಯ ಪದ್ಧತಿಗಳನ್ನ ತಿರಸ್ಕರಿಸಿ ಹೊಸ ಲಿಂಗಾಯತ ಧರ್ಮ ಸ್ಥಾಪಿಸಿ ವಿಶ್ವಗುರುವಾದರು ಎಂದು ಕಾಂಗ್ರೆಸ್ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೀದರ್‌ನ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಚನ್ನಬಸವ ಪಟ್ಟದೇವರ 27ನೇ ಸ್ಮರಣೋತ್ಸವ, ವಚನ ಜಾತ್ರೆ ಹಾಗೂ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಬೌದ್ಧ ಧರ್ಮಕ್ಕೆ ಅತ್ಯಂತ ತೊಂದರೆ ಕೊಟ್ಟು ಹಾಳುಗೆಡವಿ, ಓಡಿಸಿದವರು ನಮ್ಮವರೇ ಹೊರತು ಬೇರೆಯವರಲ್ಲ. ಬಸವಣ್ಣನವರ ತತ್ವಗಳು ಹಾಗೆ ಆಗದಂತೆ ಎಚ್ಚರವಹಿಸಿ ದೇಶಾದ್ಯಂತ ಪ್ರಚಾರ ನಡೆಸಬೇಕು. ನಂಬಿಕೆ, ನಿಷ್ಠೆ ಇಟ್ಟುಕೊಂಡು ಧರ್ಮ ಬೆಳೆಸುವ ಗುರಿ ಇರಲಿ. ಸುಮ್ಮನೆ ಒಂದೆರಡು ಹರಿಜನರ ಮನೆಗೆ ತೆರಳಿ ನೀರು, ಊಟ ಸೇವಿಸುವುದು ಬಿಟ್ಟು ಜನರಿಗೆ ಅಗತ್ಯವಾದ ಮಾನವೀಯ ಧರ್ಮದ ತತ್ವ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು” ಎಂದು ಹೇಳಿದರು.
ಬೀದರ್ ಜಿಲ್ಲೆಯ ಜನರು ಬಸವಣ್ಣನವರ ವಿಚಾರಧಾರೆ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಶರಣರ ವಚನ ಸಾಹಿತ್ಯ, ಸಂದೇಶಗಳು ಪ್ರಚಾರಗೈದು ಸಮಾಜಕ್ಕೆ ಮುಟ್ಟಿಸಿದ್ದಾರೆ. ಬಸವಣ್ಣನವರ ವಿಚಾರಗಳು ಪ್ರಚಾರ ಆಗದಿದ್ದರೆ ಮನೆ-ಮಠ-ಗುರುಕುಲಗಳಲ್ಲಿಯೇ ಉಳಿಯುತ್ತದೆ. ಎಲ್ಲರೂ ಮೇಲಿನ ಮಾತಿಗೆ ವಿಚಾರಗಳು ಹೇಳುತ್ತಾ ಹೋದರೆ ಸಮಾಜ ಉದ್ಧಾರ ಆಗಲ್ಲ, ಸಮಾನತೆ ಬರಲು ಸಾಧ್ಯವಿಲ್ಲ. ಹೀಗಾಗಿ ಬಸವಾದಿ ಶರಣರ ವಿಚಾರಗಳು ಅನುಷ್ಠಾನಗೊಳ್ಳಬೇಕು ಎಂದರು.
ಎಲ್ಲ ಮನುಷ್ಯರೂ ಒಂದೇ, ಎಲ್ಲರೂ ಒಗ್ಗೂಡಬೇಕಿದೆ. ಮನುಷ್ಯ ಕುಲಕ್ಕೆ ಧರ್ಮ ಬೇಕು. ಮನುಷ್ಯ ಧರ್ಮಕ್ಕಾಗಿ ಹುಟ್ಟಿಲ್ಲ,
ಧರ್ಮಗಳು ಮನುಷ್ಯನ ಏಳಿಗೆಗಾಗಿ ಹುಟ್ಟಿವೆ ಎಂಬುದು ನೆನಪಿರಬೇಕು ಎಂದು ಹೇಳಿದರು.
ಅನೇಕ ಧರ್ಮಗಳು ಶೂನ್ಯದಿಂದ ಆರಂಭವಾಗಿ ಕೋಟ್ಯಂತರ ಜನರಿಗೆ ತಲುಪಿವೆ. ಮತ್ತೊಬ್ಬರನ್ನು ಪ್ರೀತಿಸಿ ತನ್ನತ ಸೆಳೆದು ಅಪ್ಪಿಕೊಂಡರೆ ಮಾತ್ರ ಒಂದು ಧರ್ಮ ಬೆಳೆಯಲು ಸಾಧ್ಯ. ಇರುವ ಧರ್ಮದೊಳಗೆ ಸಾಕಷ್ಟು ಕಿರುಕುಳ ಕೊಡುವ ಕಾರಣಕ್ಕೆ ಧರ್ಮ ಬೆಳೆಯುವುದಿಲ್ಲ. ಇಂತಹ ಎಲ್ಲ ಕಾಟ ನೋಡಿ ಬಸವಣ್ಣನವರು ಮನುವಾದ, ಚಾತುರ್ವರ್ಣ ವಿಚಾರಧಾರೆ ತಿರಸ್ಕಾರ ಮಾಡಿದರು ಎಂದು ಹೇಳಿದರು.
ಇದನ್ನೂ ಓದಿ: ಬೀದರ್ | ಬಿಸಿಲಿನ ತಾಪ : ಕುಸಿದು ಬಿದ್ದು ಯುವಕ ಸಾವು!
ಎಲ್ಲ ಜಾತಿಗಳನ್ನು ಒಗ್ಗೂಡಿಸಿ, ಸಂಸತ್ತಿನ ಪರಿಕಲ್ಪನೆಯಂತೆ ಅನುಭವ ಮಂಟಪದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮುಖಾಂತರ ಹೊಸ ಧರ್ಮ ಸ್ಥಾಪಿಸಿದರು. ಹಿಂದುಳಿದ ಸಮಾಜದ ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿತ್ತು. ಈಗ ಅವರು ಬೇರೆ, ಇವರು ಬೇರೆ ಎಂದು ಬೇಧಭಾವ ಮಾಡುತ್ತಿದ್ದೇವೆ. ಎಲ್ಲಿಯವರೆಗೆ ನಾವೆಲ್ಲರೂ ಒಂದು ಎಂದು ಅನ್ನುವುದಿಲ್ಲವೊ ಅಲ್ಲಿಯವರೆಗೆ ಯಾವುದೇ ಧರ್ಮ ಬೆಳೆಯುವುದಿಲ್ಲ ಎಂದು ಹೇಳಿದರು.





